ಬಾವಾ-ಆಲಿ ಬೆಂಬಲಿಗರ ಗುಂಪುಗಾರಿಕೆಯಿಂದ ಉತ್ತರದಲ್ಲಿ ಮತ್ತೆ ಬಿಜೆಪಿಗೆ ‘ನೆಲೆ’..! ‘ಬ್ಯಾರಿ’ ಗಳೇ ನೀವು ಹಿಂಗೇಕೆ..?

ಕರಾವಳಿ

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಬಹುಶಃ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಚುನಾವಣಾ ರಂಗೇರಲಿರುವ ಕ್ಷೇತ್ರವಾಗಿದೆ. ಬಿಜೆಪಿಯಲ್ಲಿ ಈಗಾಗಲೇ ಹಾಲಿ ಶಾಸಕರಾದ ಭರತ್ ಶೆಟ್ಟಿ ಯವರಿಗೆ ಟಿಕೆಟ್ ದೊರೆತರೆ, ಕಾಂಗ್ರೆಸ್ ಪಕ್ಷದಲ್ಲಿ ಯಾರಿಗೆ ಟಿಕೆಟ್ ಅನ್ನುವ ಬಗ್ಗೆ ಕುತೂಹಲ ಗರಿಗೆದರಿದೆ. ಈ ಕ್ಷಣದವರೆಗೂ ಇನಾಯತ್ ಆಲಿ ಗೊ, ಮೊಹಿದ್ದೀನ್ ಬಾವಾ ಗೊ ಟಿಕೆಟ್ ಕನ್ಫರ್ಮ್ ಅಂತ ಹೇಳಲು ಯಾರಿಗೂ ಸಾಧ್ಯವಿಲ್ಲದಂತಹ ಪರಿಸ್ಥಿತಿ. ಒಟ್ಟಾರೆ ಕಾರ್ಯಕರ್ತರು ಸಂಪೂರ್ಣ ಗೊಂದಲಕ್ಕೀಡಾಗಿ ಹೈ ಸ್ಪೀಡಿನಲ್ಲಿ ಕ್ಷೇತ್ರದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಚಟುವಟಿಕೆಗಳು ಟಿಕೆಟ್ ಅನೌನ್ಸ್ ಆಗದೆ ಬ್ರೇಕ್ ಬಿದ್ದಂತಾಗಿದೆ.

ಮೊಹಿದ್ದೀನ್ ಬಾವಾ ರವರು ಶಾಸಕರಾಗಿದ್ದ ಅವಧಿಯಲ್ಲಿ ಮಾಡಿದ ಕೆಲಸಗಳು ಅವರ ಪ್ಲಸ್ ಪಾಯಿಂಟ್. ಇತ್ತ ಇನಾಯತ್ ಆಲಿ ಕಾರ್ಯಕರ್ತರನ್ನು ಉತ್ಸಾಹಗೊಳಿಸಿ ಪಕ್ಷವನ್ನು ತಳಮಟ್ಟದಲ್ಲಿ ಗಟ್ಟಿಗೊಳಿಸುವ ಕೆಲಸ ಎಲ್ಲರನ್ನೂ ಚಕಿತಗೊಳಿಸಿದೆ.

ಎಲ್ಲಾ ಪಕ್ಷದಲ್ಲೂ ಇರುವಂತೆ ಮಂಗಳೂರು ಉತ್ತರ ದಲ್ಲೂ ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಇದೆ. ಆದರೆ ಈ ಗುಂಪುಗಾರಿಕೆ ಬೇರೆ ಕಡೆಗಿಂತ ವೈಯಕ್ತಿಕ ದ್ವೇಷದ ಮಟ್ಟಿಗೆ ಹೋಗಿರುವುದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಅಪಾಯ. ಅದರಲ್ಲೂ ಕಾಂಗ್ರೆಸ್ ನ ಬ್ಯಾರಿ ಕಾರ್ಯಕರ್ತರು ಗುಂಪು ಕಟ್ಟಿಕೊಂಡು ಪರಸ್ಪರ ತೇಜೋವಧೆಗೆ ಇಳಿದಿರುವುದು, ವೈಯಕ್ತಿಕ ದ್ವೇಷದ ಮಟ್ಟಿಗೆ ಹೊರಟಿರುವುದು ಒಳ್ಳೆಯ ಲಕ್ಷಣವಲ್ಲ. ಕಾಂಗ್ರೆಸ್ ನಿಂದ ಇನಾಯತ್ ಆಲಿ ಯೋ ಅಥವಾ ಮೊಹಿದ್ದೀನ್ ಬಾವಾ ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಟಿಕೆಟ್ ಸಿಗಲು ಸಾಧ್ಯ. ಇಬ್ಬರಿಗೂ ಟಿಕೆಟ್ ಸಿಗಲು ಸಾಧ್ಯವಿಲ್ಲ. ಬ್ಯಾರಿ ಕಾರ್ಯಕರ್ತರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಮೇಲಾಗಿ ಇನಾಯತ್ ಆಲಿ- ಮೊಹಿದ್ದೀನ್ ಬಾವಾ ಇಬ್ಬರು ಕುಟುಂಬಿಕರು. ಹೈಕಮಾಂಡ್ ಟಿಕೆಟ್ ನೀಡುವಾಗ ಇಬ್ಬರನ್ನು ಕರೆಯಿಸಿ ಒಪ್ಪಂದ ಮಾಡಿಯೇ ಟಿಕೆಟ್ ನೀಡುವುದು. ಆದರೆ ಕಾರ್ಯಕರ್ತರು ಇದನ್ನೆಲ್ಲ ತಿಳಿಯದೆ ಕಟ್ಟೆ ಬಳಿ, ರಸ್ತೆ ಬಳಿ, ಕಾಂಗ್ರೆಸ್ ಕಚೇರಿಗಳಲ್ಲಿ ಪರಸ್ಪರ ಹೊಯ್ ಕೈ ಗೆ ಮುಂದಾಗಿರುವುದು ಗೆಲ್ಲುವ ಪಕ್ಷವನ್ನು ಸೋಲಿನತ್ತ ಕೊಂಡೊಯ್ಯುವುದರಲ್ಲಿ ಅನುಮಾನವೇ ಇಲ್ಲ.

ಈ ಬಾರಿ ಉತ್ತರದಲ್ಲಿ ಬಿಜೆಪಿಗೆ ಮೈನಸ್ ಇದೆ ಎಂದು ಹಲವು ಸರ್ವೇಗಳೇ ತಿಳಿಸಿದೆ. ಕಾಂಗ್ರೆಸ್ ಪಕ್ಷದಿಂದ ಯಾರೇ ಅಭ್ಯರ್ಥಿಯಾದರೂ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮಾತ್ರ ಗೆಲುವು ಪಡೆಯಲು ಸಾಧ್ಯ. ತಮ್ಮ ನಾಯಕನಿಗೆ ಬಹು ಪರಾಕು ಹಾಕಿ ಇನ್ನೊಬ್ಬ ನಾಯಕನ ಹಿಂಬಾಲಕರ ಮಧ್ಯೆ ಡಿಶುಂ ಡಿಶುಂ ಗೆ ಇಳಿದರೆ ಪಕ್ಷ ಈ ಬಾರಿಯೂ ಸೋಲುವುದು ಖಂಡಿತ. ನಾಯಕರ ಹಿಂಬಾಲಕರ ಮಧ್ಯೆ ಆರೋಗ್ಯಕರವಾದ ಗುಂಪು ಗಾರಿಕೆ ಇದ್ದರೆ ಚೆನ್ನ. ಆದರೆ ಅದು ವೈಯಕ್ತಿಕ ದ್ವೇಷದ ಮಟ್ಟಿಗೆ ಮುಟ್ಟಿದರೆ ಅದಕ್ಕಿಂತ ದೊಡ್ಡ ಅಂಧ ಭಕುತನ ಬೇರೊಂದಿಲ್ಲ. ನಾಯಕರು ಹೇಳಿದ್ದನ್ನೇ ಕೇಳುವ ಅಂಧ ಭಕುತಿಯನ್ನು ಕಾರ್ಯಕರ್ತರು ಇನ್ನಾದರೂ ಬಿಡಬೇಕು.