ರಾಜ್ಯಾಧ್ಯಕ್ಷರ ಕಾರು ಅಲ್ಲಾಡಿದ ಕ್ಷೇತ್ರದಲ್ಲಿ ಸಿಡಿದು ನಿಂತ ಕೇಸರಿ ಪಡೆಗಳು.!

ಕರಾವಳಿ

ಇಲ್ಲಿ ಸೋತರೆ ಸಂಸದ ಸ್ಥಾನವು ಹೋದಿತು.!

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಗೆ ದೊಡ್ಡ ಸಂಕಷ್ಟ ತಂಡೊಡ್ಡಬಲ್ಲ ಕ್ಷೇತ್ರವೊಂದಿದ್ದರೆ ಅದು ಪುತ್ತೂರು ವಿಧಾನಸಭಾ ಕ್ಷೇತ್ರ. ಅದರಲ್ಲೂ ಬಿಜೆಪಿ ರಾಜ್ಯಾಧ್ಯಕ್ಷರು, ಸಂಸದರು ಆಗಿರುವ ನಳಿನ್ ಕುಮಾರ್ ಕಟೀಲ್ ರಿಗೆ ಭಾರೀ ಪ್ರತಿಷ್ಠೆ ಒಡ್ಡುವ ಕ್ಷೇತ್ರ ಕೂಡ ಹೌದು. ನಳಿನ್ ಕುಮಾರ್ ಕಟೀಲ್ ರವರ ಹುಟ್ಟೂರಾದ ಪುತ್ತೂರಿನಲ್ಲಿ ಈ ಬಾರಿ ಬಿಜೆಪಿ ಶತಾಯಗತಾಯ ಗೆಲುವು ಪಡೆಯಲೇಬೇಕಾದ ಅನಿವಾರ್ಯತೆ ಕೂಡ ಇದೆ. ಆದರೆ ಇದೀಗ ಆ ಗೆಲುವಿಗೆ ತೊಡಕಾಗಿ ನಿಂತವರಲ್ಲಿ ಒಬ್ಬರು ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಅಭ್ಯರ್ಥಿಯಾಗಿರುವ ಅಶೋಕ್ ಕುಮಾರ್ ರೈ, ಮತ್ತೊಬ್ಬರು ಬಿಜೆಪಿ ವಿರುದ್ಧ ಸಿಡಿದೆದ್ದು ಬಂಡಾಯವಾಗಿ ಸ್ಪರ್ಧೆಗಿಳಿದ ಅರುಣ್ ಕುಮಾರ್ ಪುತ್ತಿಲ.

ಪುತ್ತೂರು ಕ್ಷೇತ್ರದಲ್ಲಿ ಹಾಲಿ ಶಾಸಕರಾಗಿದ್ದ ಸಂಜೀವ ಮಠಂದೂರು ಬಗ್ಗೆ ಬಿಜೆಪಿಯಲ್ಲೇ ಒಂದು ಬಣ ಅಪಸ್ವರ ಎಬ್ಬಿಸಿತ್ತು. ಮೃದು ಸ್ವಭಾವದವರಾಗಿದ್ದ, ವಲಸೆ ಬಿಜೆಪಿಯವರಾಗಿದ್ದ ಮಠಂದೂರು ಬಗ್ಗೆ ಪುತ್ತೂರಿನ ಸಿಡಿಲಬ್ಬರದ ಕೇಸರಿ ಗುಂಪು ಗೌಪ್ಯವಾಗಿಯೇ ಹೈಕಮಾಂಡ್ ಮಟ್ಟದಲ್ಲಿ ಮಠಂದೂರು ವಿರುದ್ಧ ಬುಸುಗುಟ್ಟಿದ್ದವು. ಮಠಂದೂರು ಬದಲಿಗೆ ಪುತ್ತಿಲರಿಗೆ ಟಿಕೆಟ್ ನೀಡುವಂತೆ ಬಿಜೆಪಿ ನಾಯಕರ ದುಂಬಾಲು ಬಿದ್ದಿದ್ದರು. ಆದರೂ ಮಠಂದೂರು ಪ್ರಭಾವ ಬಳಸಿ ಮತ್ತೆ ಟಿಕೆಟ್ ಪಡೆಯುವ ಹೊಸ್ತಿಲಲ್ಲಿಯೇ ಬಿಜೆಪಿಯೊಳಗಿನ ಒಂದು ಗುಂಪು ಸಿಡಿ ರಿಲೀಸ್ ಮಾಡಿ ಟಿಕೆಟ್ ತಪ್ಪಿಸುವಲ್ಲಿ ಯಶಸ್ವಿಯಾಯಿತು. ಟಿಕೆಟ್ ತಪ್ಪಿದರೇನಂತೆ ಕಟೀಲು ಪುತ್ತಿಲರಿಗೆ ಟಿಕೆಟ್ ನೀಡದೆ ಆಶಾ ತಿಮ್ಮಪ್ಪ ಗೌಡ ಅನ್ನುವ ಅಚ್ಚರಿಯ ಹೆಸರನ್ನು ಪ್ರಕಟಿಸಿತ್ತು. ಪುತ್ತೂರಿನಲ್ಲಿ ಬಹುಸಂಖ್ಯಾತ ಗೌಡ ಸಮುದಾಯ ಇರುವುದರಿಂದ ಹತ್ತಿರದ ಸುಳ್ಯದಲ್ಲಿಯೂ ಗೌಡ ಸಮುದಾಯದ ಪಾರುಪತ್ಯ ಇದ್ದುದರಿಂದ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಉರುಳಿಸುವ ದಾಳವನ್ನು ರಾಜ್ಯಾಧ್ಯಕ್ಷರು ಪ್ರಯೋಗಿಸಿದ್ದರು.

ಕೆಲವು ತಿಂಗಳ ಹಿಂದೆ ಬಿಜೆಪಿಯ ಯುವ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆಯಾದಾಗ ನಳೀನ್ ಕುಮಾರ್ ಕಟೀಲ್ ಕಾರು ಅಲ್ಲಾಡಿಸಿದ ಪ್ರಕರಣದ ನಡೆದು ದೊಡ್ಡ ಸುದ್ದಿಯಾಗಿತ್ತು. ಪುತ್ತಿಲ ಬೆಂಬಲಿಗರು ಈ ಕೃತ್ಯ ನಡೆಸಿದ್ದರು ಅನ್ನುವುದು ರಾಜ್ಯಾಧ್ಯಕ್ಷರ ತಂಡಕ್ಕೆ ತಿಳಿಯದ ವಿಚಾರವೇನಲ್ಲ.

ಈ ಸಂದರ್ಭದಲ್ಲಿ ಹತ್ಯೆಯ ವಿಚಾರವನ್ನು ದೊಡ್ಡ ಇಶ್ಯೂ ಮಾಡಿ ರಾಜ್ಯಾಧ್ಯಕ್ಷರ ವೈಫಲ್ಯ ಎಂಬುದನ್ನು ಜಗಜ್ಜಾಹೀರು ಮಾಡಲು ತಂಡವೊಂದು ರೆಡಿಯಾಗುತ್ತಲೇ ಪಿಎಫ್ಐ ನಿಷೇಧಿಸಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದರು. ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ನೆಟ್ಟಾರ್ ಕುಟುಂಬಕ್ಕೆ ಹೊಸ ಮನೆಯೊಂದನ್ನು ಕಟ್ಟಿಸಿ ಕೊಟ್ಟಿಸಿದ್ದರು.

ಹಾಗೆ ತಣ್ಣಗಿದ್ದ ಪುತ್ತೂರು ರಾಜಕೀಯ ಪುತ್ತಿಲರಿಗೆ ಟಿಕೆಟ್ ತಪ್ಪಿಸಿದರೆಂದು ಕಟೀಲು ವಿರೋಧಿ ಗುಂಪು ಮತ್ತೆ ಭುಸುಗುಡತೊಡಗಿದೆ. ‘ಪುತ್ತೂರಿಗೆ ಪುತ್ತಿಲ’ ಘೋಷಣೆ ಮೂಲಕ ಕೇಸರಿ ಕಲಿಗಳು ಸಿಡಿದೆದ್ದು ಪುತ್ತಿಲರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಬೃಹತ್ ಸಂಖ್ಯೆಯಲ್ಲಿ ಮೆರವಣಿಗೆ ನಡೆಸಿ ಶಕ್ತಿ ಪ್ರದರ್ಶನ ತೋರಿಸಿದ್ದಾರೆ. ನರೇಂದ್ರ ಮೋದಿ, ಬಿಜೆಪಿ ವಿರುದ್ಧ ಇವರಿಗೆ ಯಾವುದೇ ಅಸಮಾಧಾನ ಇಲ್ಲ ‌ ಆದರೆ ಇವರಿಗೆ ಇರುವುದು ನಳಿನ್ ಕುಮಾರ್ ಕಟೀಲ್ ವಿರುದ್ಧ ಅಸಮಾಧಾನ ಎಂಬುದು ನಾಮಪತ್ರ ಸಲ್ಲಿಕೆ ದಿನದ ಹೇಳಿಕೆಗಳೇ ಸಾಕ್ಷಿ. ಬಹುಶಃ ಪುತ್ತೂರಿನ ಇತಿಹಾಸದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು ಇಂತಹದ್ದೊಂದು ಹವಾ ಸೃಷ್ಟಿಸಿದ್ದು ಇದೇ ಮೊದಲಿರಬೇಕು. ಸಹಜವಾಗಿ ಇದು ಬಿಜೆಪಿಯನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ.

ರಾಜ್ಯಾಧ್ಯಕ್ಷರಾದ ಕಟೀಲು ವಿರುದ್ಧ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಲ್ಲಿಯೇ ಒಂದು ಬಣ ದೊಡ್ಡ ಷಡ್ಯಂತ್ರ ನಡೆಸಿ ಸೈಡ್ ಲೈನಿಗೆ ತರಿಸುವ ಪ್ರಯತ್ನ ನಡೆಸಿತ್ತು. ಆದರೆ ಚಾಣಾಕ್ಷ ಕಟೀಲು ಆ ಆಟವನ್ನು ಚಿವುಟಿ ಹಾಕುವ ಮೂಲಕ ರಾಜಕೀಯ ಪಾರಮ್ಯ ಮೆರೆದಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಟೀಲು ಸೂಚಿಸಿದ ಅಭ್ಯರ್ಥಿಗಳೆಲ್ಲ ವಿಜಯದುಂಧುಬಿ ಸಾಧಿಸುವ ಮೂಲಕ ವಿರೋಧಿಗಳು ಹೆಣೆದ ತಂತ್ರದಿಂದ ಪಾರಾಗಿದ್ದರು. ಪ್ರವೀಣ್ ನೆಟ್ಟಾರ್ ಹತ್ಯೆಯ ನಂತರ ಪಿಎಫ್ಐ ನಿಷೇಧಿಸಿ ತಾವು ಸೇಫ್ ಆಗಿದ್ದರು.

ಆದರೆ ಈ ಬಾರಿ ಮತ್ತೊಮ್ಮೆ ಅಗ್ನಿಪರೀಕ್ಷೆ ಎದುರಾಗಿದೆ. ಪುತ್ತಿಲರ ಜನಬೆಂಬಲ ಮತವಾಗಿ ಪರಿವರ್ತನೆ ಆಗುತ್ತೋ? ಅಥವಾ ಇನ್ನಷ್ಟು ರಾಜಕೀಯ ಚಟುವಟಿಕೆಗಳು ನಡೆದು ಪುತ್ತಿಲರನ್ನು ಠೇವಣಿ ಪಡೆಯದಂತೆ ಪ್ರಯತ್ನ ನಡೆಯುತ್ತೋ? ಕಾದು ನೋಡಬೇಕಿದೆ.

ಈ ಬಾರಿ ಪುತ್ತೂರು ಕಣ ರಾಜ್ಯಾಧ್ಯಕ್ಷರಿಗೆ ಸಲೀಸಾಗಿಲ್ಲ. ಕಾಂಗ್ರೆಸ್ ಗೆದ್ದರೂ, ಪುತ್ತಿಲರು ಗಮನಾರ್ಹ ಮತ ಪಡೆದರೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಟೀಲು ಸಂಸದ ಸ್ಥಾನಕ್ಕೆ ಕುತ್ತುಬರುವ ಸಾಧ್ಯತೆ ಇದೆ. ಒಂದು ವೇಳೆ ಎಲ್ಲವನ್ನು ಮೆಟ್ಟಿನಿಂತು ಪುತ್ತೂರಿನಲ್ಲಿ ಬಿಜೆಪಿ ವಿಜಯಶಾಲಿಯಾದರೆ ರಾಜ್ಯಾಧ್ಯಕ್ಷರ ರಾಜಕೀಯ ನಾಗಲೋಟವನ್ನು ತಡೆಯುವವರು ಯಾರೂ ಇಲ್ಲ. ಈ ದೃಷ್ಟಿಯಲ್ಲಿ ಪುತ್ತೂರು ಈ ಬಾರಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.