ಬುಡಕಟ್ಟು ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ. ಸಂತ್ರಸ್ತೆಯ ಮೃತದೇಹವನ್ನು ರಸ್ತೆಯಲ್ಲಿ ಪೊಲೀಸರು ಎಳೆದುಕೊಂಡು ಹೋಗಿದ್ದಾರೆ, ಬಿಜೆಪಿ ಆರೋಪ

ರಾಷ್ಟ್ರೀಯ

ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ಕಲಿಯಾಗಂಜ್‌ನಲ್ಲಿ ಬುಡಕಟ್ಟು ಬಾಲಕಿಯನ್ನು ಸಾಮೂಹಿಕ ಅತ್ಯಾಚಾರಕ್ಕೊಳಪಡಿಸಿ, ಕೊಲೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ತೀವ್ರ ಹಿಂಸಾಚಾರ ಭುಗಿಲೆದ್ದಿದೆ. ಮನೆ ಪಾಠಕ್ಕೆಂದು ಗುರುವಾರ ತೆರಳಿದ್ದ ಗಂಗುವಾ ಗ್ರಾಮದ ಬಾಲಕಿ ನಾಪತ್ತೆಯಾಗಿದ್ದಳು. ಇಡೀ ರಾತ್ರಿ ಕುಟುಂಬಸ್ಛರು ಮತ್ತು ಗ್ರಾಮಸ್ಥರು ಹುಡುಕಾಟ ನಡೆಸಿದರೂ ಸುಳಿವು ದೊರೆಯಲಿಲ್ಲ. ಶುಕ್ರವಾರ ಬೆಳಗ್ಗೆ ಕಲಿಯಾಗಂಜ್‌ನ ಕೆರೆಯ ದಡದಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು.
ಶನಿವಾರ ಉದ್ರಿಕ್ತ ಜನರು, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಚ್‌ ಮತ್ತು ಅಶ್ರುವಾಯು ಸಿಡಿಸಿದ್ದಾರೆ. ಪರಿಸ್ಥಿತಿ ಕೈಮೀರಿದೆ. ಮೃತದೇಹವನ್ನು ಪೊಲೀಸರು ವಶಕ್ಕೆ ಪಡೆದು,ತನಿಖೆಯ ಹಿನ್ನೆಲೆಯಲ್ಲಿ ಅತಿ ಮುಖ್ಯ ಸಾಕ್ಷಿಯಾಗಿದೆ ಇದು. ತಡಮಾಡದೇ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಬೇಕಿದೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಇದೇ ವೇಳೆ ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ಮತ್ತು ಬಾಳೂರ್‌ಘಾಟ್‌ ಸಂಸದ ಸುಕಾಂತ ಮಜುಂದಾರ್‌ ಅವರು ಸಂತ್ರಸ್ತೆಯ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಘಟನೆಯ ಬಗ್ಗೆ ತನಿಖೆ ನಡೆಸಲು ರಾಜ್ಯ ಪೊಲೀಸರು ಅಸಮರ್ಥರಾಗಿದ್ದಾರೆ. ಸಂತ್ರಸ್ತೆಯ ಮೃತದೇಹವನ್ನು ರಸ್ತೆಯಲ್ಲಿ ಪೊಲೀಸರು ಎಳೆದುಕೊಂಡು ಹೋಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.ಬಾಲಕಿಯ ಅತ್ಯಾಚಾರ,ಸಾವಿನ ಹಿನ್ನೆಲೆಯಲ್ಲಿ ಸೂಕ್ತ ನ್ಯಾಯಕ್ಕೆ ಒತ್ತಾಯಿಸಿ ಸ್ಥಳೀಯರು ಪ್ರತಿಭಟನೆ ಮುಂದುವರಿಸಿದ್ದಾರೆ. ಇನ್ನೊಂದೆಡೆ, ಘಟನೆಗೆ ಸಂಬಂಧಿಸಿದಂತೆ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿದ್ದು, ತನಿಖೆಗೆ ಮುಂದಾಗಿದೆ. ಆಯೋಗದ ಮುಖ್ಯಸ್ಥರು ಮತ್ತು ಅವರ ತಂಡ ಘಟನಾ ಸ್ಥಳಕ್ಕೆ ಆಗಮಿಸಿದೆ.