ಮಂಡ್ಯ ಜಿಲ್ಲೆಗೆ ಯೋಗಿ ಆದಿತ್ಯನಾಥರ ದ್ವೇಷದ ಉಪದೇಶ ಬೇಕಾಗಿಲ್ಲ; ದ್ವೇಶವನ್ನೇ ಕಾರುವ ಕಾವಿಧಾರಿಯ ಆಡಳಿತ ಮಂಡ್ಯ ಜಿಲ್ಲೆಗೆ ಮಾದರಿಯಲ್ಲ:ಸಿಪಿಎಂ

ರಾಜ್ಯ

ಸೌಹಾರ್ದತೆಯ ಮಂಡ್ಯ ಜಿಲ್ಲೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ದ್ವೇಷದ ಉಪದೇಶ ಬೇಕಾಗಿಲ್ಲ. ಮೈಯೆಲ್ಲಾ ದ್ವೇಶವನ್ನೇ ಕಾರುವ ಕಾವಿಧಾರಿಯ ಆಡಳಿತ ಮಂಡ್ಯ ಜಿಲ್ಲೆಗೆ ಮಾದರಿಯಲ್ಲ. ಇವರ ಮಾತುಗಳಿಗೆ ಜಿಲ್ಲೆಯ ಜನತೆ ಕಿವಿಗೊಡಬಾರದು ಎಂದು ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಜಿಲ್ಲಾ ಸಮಿತಿ ಮನವಿ ಮಾಡಿದೆ. ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ನೆಲ ಕಚ್ಚಿದೆ. ಉನ್ನಾವೊ ಅತ್ಯಚಾರ ಪ್ರಕರಣದಲ್ಲಿ ಅತ್ಯಾಚಾರಿಗಳು ಹೇಳಿದಂತೆ ಕೇಳಲಿಲ್ಲ ಎಂಬ ಕಾರಣಕ್ಕೆ ಸಂತ್ರಸ್ತೆಯ ಕುಟುಂಬಕ್ಕೆ ಬೆಂಕಿ ಇಡಲಾಗಿದೆ. ಸಂತ್ರಸ್ತೆಯ ತಂದೆ, ತಾಯಿ ಮತ್ತು ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಹಸುಗೂಸುಗಳನ್ನು ಬೆಂಕಿಗೆ ಎಸೆಯಲಾಗಿದೆ. ಇಂತಹ ಮಾದರಿಯನ್ನು ಮಂಡ್ಯಕ್ಕೂ ಹೇಳಿ ಕೊಡಲು ಯೋಗಿ ಆದಿತ್ಯನಾಥರು ಆಗಮಿಸುತ್ತಿದ್ದಾರೆಯೆ? ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಟೀಕಿಸಿದ್ದಾರೆ.

ಪೊಲೀಸರ ವಶದಲ್ಲಿರುವಾಗಲೇ ಆರೋಪಿಗಳನ್ನು ಬೀದಿಯಲ್ಲಿ ಗುಂಡಿಟ್ಟು ಕೊಲ್ಲುವ ಹೀನಾಯ ಪರಿಸ್ಥಿತಿ ಉತ್ತರ ಪ್ರದೇಶದಲ್ಲಿ ಇದೆ. ಮಾಜಿ ಲೋಕಸಭಾ ಸದಸ್ಯ, ರೌಡಿ ಶೀಟರ್ ಅತೀಕ್ ಅಹ್ಮದ್ ಮತ್ತವನ ಸಹೋದರನನ್ನು ಪೊಲೀಸ್ ಕಸ್ಟಡಿಯಲ್ಲಿ ಇದ್ದಾಗಲೇ ಹೊರಗಿನವರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ರೌಡಿಗಳಾರು? ಪೊಲೀಸರಾರು? ಎಂಬುದೇ ತಿಳಿಯದಂತೆ ಆದಿತ್ಯನಾಥರ ಆಡಳಿತ ಇದೆ. ಇಂತವರಿಂದ ಮಂಡ್ಯದ ಜನತೆಗೆ ಯಾವ ಉಪದೇಶ ಕೊಡಿಸುತ್ತೀರಿ ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಜಾಪ್ರಭುತ್ವವಾದಿ ಶಕ್ತಿಗಳು, ನಿರ್ಭೀತ ಪತ್ರಕರ್ತರ ಮೇಲೆ ದಾಳಿ ನಡೆಸಿ ಅವರನ್ನು ಜೈಲಿಗಟ್ಟುವ ಪಾಠಶಾಲೆಯಂತೆ ಉತ್ತರ ಪ್ರದೇಶ ಆದಿತ್ಯನಾಥರ ಆಳ್ವಿಕೆಯಲ್ಲಿ ಬದಲಾಗಿದೆ. ದೇಶದ ಬಹು ಸಂಸ್ಕೃತಿ, ಸೌಹಾರ್ದತೆ, ಸಾಮರಸ್ಯದ ಮೇಲೆ ದಾಳಿ ಮಾಡುವಲ್ಲಿ ಆದಿತ್ಯನಾಥರ ಆಡಳಿತ ಮುಂಚೂಣಿಯಲ್ಲಿದೆ. ಇದು ಮಂಡ್ಯದ ಜನರಿಗಂತೂ ಆದರ್ಶವಲ್ಲ, ಇಂತಹ ವ್ಯಕ್ತಿಗಳನ್ನು ಕರೆಸಿ ಮಾತನಾಡಿಸುವ ಬಿಜೆಪಿ ಅಭ್ಯರ್ಥಿಗಳನ್ನು ತಿರಸ್ಕರಿಸಬೇಕೆಂದು ಅವರು ಮತದಾರರಲ್ಲಿ ಮನವಿ ಮಾಡಿದ್ದಾರೆ.

ಟಿಪ್ಪು ಸುಲ್ತಾನರ ಕಾಲದ ಜಾಮಿಯಾ ಮಸೀದಿ ಮೇಲಿನ ದಾಳಿ, ಉರೀಗೌಡ ಮತ್ತು ನಂಜೇಗೌಡ ಎಂಬ ನಕಲಿ ಸೃಷ್ಟಿ, ಇದ್ರೀಸ್ ಪಾಷಾ ಹತ್ಯೆ ಇಂತವುಗಳಿಂದ ಚುನಾವಣಾ ಲಾಭ ಪಡೆಯಲು ಸಾಧ್ಯವಾಗದು ಎಂಬ ಹತಾಶೆಯಿಂದ ಮಂಡ್ಯ ಜಿಲ್ಲಾ ಬಿಜೆಪಿ ಯೋಗಿ ಆದಿತ್ಯನಾಥರ ಮೊರೆ ಹೋಗಿದೆ. ಇದನ್ನು ಕೂಡ ಮಂಡ್ಯ ಜಿಲ್ಲೆಯ ಜನತೆ ವ್ಯರ್ಥ ಮಾಡಲಿದ್ದಾರೆ ಎಂದು ಅವರು ಹೇಳಿದ್ದಾರೆ.