ದ್ವೇಷ ಭಾಷಣ ಸ್ವಯಂಪ್ರೇರಿತ ಕೇಸ್ ದಾಖಲಿಸಬೇಕು, ವಿಳಂಬವಾದರೆ ನ್ಯಾಯಾಂಗ ನಿಂದನೆ: ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ

ರಾಷ್ಟ್ರೀಯ

ಸುಪ್ರೀಂ ಕೋರ್ಟ್ 2022 ರ ಅಕ್ಟೋಬರ್ ನಲ್ಲಿ ನೀಡಿರುವ ಆದೇಶವನ್ನು ಇದೀಗ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಿಸಿದೆ. ಆದ್ದರಿಂದ ಈಗ, ಎಲ್ಲಾ ರಾಜ್ಯಗಳು, ಕೇಂದ್ರಾಡಳಿತಕ್ಕೆ ಸಂಬಂಧಿಸಿದ ಪ್ರದೇಶಗಳು ಯಾವುದೇ ಔಪಚಾರಿಕ ದೂರಿಗೆ ಕಾಯದೆ ದ್ವೇಷ ಭಾಷಣಗಳ ವಿರುದ್ಧ ಎಫ್ಐಆರ್ ದಾಖಲಿಸಲು ಸ್ವಯಂಪ್ರೇರಿತ ಕ್ರಮ ತೆಗೆದುಕೊಳ್ಳಲು ಆದೇಶಿಸಲಾಗಿದೆ. ಅಕ್ಟೋಬರ್ 21, 2022 ರಂದು ಹೊರಡಿಸಿದ ಆರಂಭಿಕ ಆದೇಶವು ದೆಹಲಿ, ಉತ್ತರಾಖಂಡ, ಉತ್ತರ ಪ್ರದೇಶದ ಎನ್ಸಿಟಿ ಸರ್ಕಾರಗಳಿಗೆ ಮಾತ್ರ ಅನ್ವಯಿಸುತ್ತದೆ.

ಧರ್ಮವನ್ನು ಲೆಕ್ಕಿಸದೆ ಕ್ರಮ ತೆಗೆದುಕೊಳ್ಳಬೇಕು. ನಿರ್ದೇಶನಗಳ ಪ್ರಕಾರ ಕಾರ್ಯನಿರ್ವಹಿಸಲು ಯಾವುದೇ ಹಿಂಜರಿಕೆಯನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಸಿದೆ.
ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರನ್ನೊಳಗೊಂಡ ನ್ಯಾಯಪೀಠವು ದೇಶಾದ್ಯಂತ ದ್ವೇಷದ ಅಪರಾಧಗಳ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಪರಿಗಣಿಸಿತು.

ದ್ವೇಷ ಭಾಷಣ ಮಾಡಿದಾಗ ಯಾವುದೇ ದೂರುಗಳಿಲ್ಲದೆ ಪೊಲೀಸರು ಸ್ವಯಂಪ್ರೇರಿತ ಕ್ರಮ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.ದ್ವೇಷ ಭಾಷಣ ಪ್ರಕರಣಗಳನ್ನು ದಾಖಲಿಸುವಲ್ಲಿನ ವಿಳಂಬವನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಇದೇ ವೇಳೆ ಹೇಳಿದೆ.ದ್ವೇಷ ಭಾಷಣವನ್ನು ಗಂಭೀರ ಅಪರಾಧವೆಂದು ಕರೆದಿದೆ. ಇದು ದೇಶದ ಜಾತ್ಯತೀತ ರಚನೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.