ಸಿಸಿಬಿ ಪೊಲೀಸರ ಕಾರ್ಯಾಚರಣೆ, ನಕಲಿ ಪದವಿ ಪ್ರಮಾಣ ಪತ್ರದ ಜಾಲ ಬಯಲಿಗೆ, 30 ಸಾವಿರಕ್ಕೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಅಂಕಪಟ್ಟಿ ಬಿಕಾರಿ.!

ರಾಜ್ಯ

ಸರಕಾರದ ಮಾನ್ಯತೆ ಪಡೆಯದೇ ಕರೆಸ್ಪಾಂಡೆನ್ಸ್‌ ಶಿಕ್ಷಣ ಸಂಸ್ಥೆ ತೆರೆದು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ತತ್ಸಮಾನ ಎಂದು ನಮೂದಿಸಿ ರಾಜ್ಯದ ಸ್ಟಡಿ ಸೆಂಟರ್‌ಗಳ ಮೂಲಕ ನಕಲಿ ಅಂಕಪಟ್ಟಿಗಳನ್ನು ವಿತರಿಸುತ್ತಿದ್ದ ಬೃಹತ್‌ ಜಾಲವನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಭೇದಿಸಿದ್ದಾರೆ.ಜಾಲದ ಪ್ರಮುಖ ಆರೋಪಿ, ಹುಬ್ಬಳ್ಳಿ ಮೂಲದ ಪ್ರಭುರಾಜ್‌,ಬೆಂಗಳೂರಿನ ಜರಗನಹಳ್ಳಿ ನಿವಾಸಿ ಮೈಲಾರಿ ಪಾಟೀಲ್‌ ಮತ್ತು ಅರಕೆರೆ ನಿವಾಸಿ ಮೊಹಮ್ಮದ್‌ ತೈಹೀಬ್‌ ಅಹಮ್ಮದ್‌ ಎಂಬವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕ ಇನ್‌ಸ್ಟಿಟ್ಯೂಷನ್‌ ಆಫ್ ಒಪನ್‌ ಸ್ಕೂಲಿಂಗ್‌ ಕರ್ನಾಟಕ ಸರ್ಕಾರ,ಎಂದು ನಮೂದಿಸಿರುವ 10 ಮತ್ತು 12ನೇ ತರಗತಿ ಎಂದು ಉಲ್ಲೇಖೀಸಿರುವ ವಿದ್ಯಾರ್ಥಿ ಹೆಸರು, ನೋಂದಣಿ ಸಂಖ್ಯೆ ಹಾಗೂ ಇತರೆ ಮಾಹಿತಿಗಳನ್ನು ನೋಂದಾಯಿಸಿದ 70 ಅಂಕಪಟ್ಟಿಗಳು, ವಿದ್ಯಾರ್ಥಿ, ನೋಂದಣಿ ಸಂಖ್ಯೆ, 190 ಅಂಕಪಟ್ಟಿಗಳು, 7100 ಖಾಲಿ ಅಂಕಪಟ್ಟಿಗಳು, 5500 ಉತ್ತರ ಪ್ರತಿಗಳು, ವಿದ್ಯಾರ್ಥಿಗಳನ್ನು ಅಡ್ಮಿಷನ್‌ ಮಾಡಿಕೊಂಡಿರುವ ಬಗ್ಗೆ 25 ಅಡ್ಮಿಷನ್‌ ರಿಜಿಸ್ಟ್ರಾರ್‌ಗಳನ್ನು ಜಪ್ತಿ ಮಾಡಲಾಗಿದೆ.

ಇದೇ ವೇಳೆ ನಕಲಿ ಅಂಕಪಟ್ಟಿ ತಯಾರಿಸಲು ಬಳಸುವ ಜೆರಾಕ್ಸ್‌ ಯಂತ್ರ, 4 ಲ್ಯಾಪ್‌ಟಾಪ್‌ಗ್ಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು. ಆರೋಪಿಗಳ ಪೈಕಿ ಪ್ರಭುರಾಜ್‌, ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ನೋಂದಾಯಿಸಿ ಕರ್ನಾಟಕ ಇನ್‌ ಸ್ಟಿಟ್ಯೂಷನ್‌ ಆಫ್ ಒಪನ್‌ ಸ್ಕೂಲಿಂಗ್‌ (ಕೆಐಒಎಸ್‌) ಸಂಸ್ಥೆ ಸ್ಥಾಪಿಸಿದ್ದಾನೆ. ಆದರೆ, ಅದನ್ನು ಸಾರ್ವಜನಿಕ ಶಿಕ್ಷಣ ಸಂಸ್ಥೆಯಿಂದ ಮಾನ್ಯತೆ ಪಡೆದು ಕೊಂಡಿಲ್ಲ. ಇನ್ನು ಮೈಲಾರಿ ಪಾಟೀಲ್‌ ಕೂಡ ವೈಇಟಿ ಗ್ರೂಪ್‌ ಆಫ್ ಎಜ್ಯುಕೇಷನ್‌ ಇನ್‌ಸ್ಟಿಟ್ಯೂಷನ್‌ ಸ್ಥಾಪಿಸಿದ್ದಾನೆ. ಮೂರನೇ ಆರೋಪಿ ಮೊಹಮ್ಮದ್‌ ತೈಹೀದ್‌ ಅಹಮ್ಮದ್‌ ಬೇರೆ ಬೇರೆ ಪದವಿ ಕಾಲೇಜು ಮತ್ತು ಶಾಲೆಗಳ ಆಡಳಿತ ಮಂಡಳಿ ಸಂಪರ್ಕದಲ್ಲಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಅಂಕಪಟ್ಟಿಗಳಿಗೆ ತಲಾ 20-30 ಸಾವಿರ ರೂ. ಪಡೆಯುತ್ತಿದ್ದರು. ಪದವಿಗೆ ಒಂದೂವರೆ ಲಕ್ಷ ರೂ. ಪಡೆದಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಈ ಸಂಬಂಧ ಹುಬ್ಬಳ್ಳಿಯ ವಿದ್ಯಾನಗರದ ಪ್ರಶಾಂತ್‌ ಕಾಲೋನಿಯಲ್ಲಿರುವ ಕೆಐಒಸ್‌ ಸಂಸ್ಥೆ ಮೇಲೆ ದಾಳಿ ನಡೆಸಿದಾಗ ಅಕ್ರಮವಾಗಿ ಸಂಸ್ಥೆ ನಡೆಸುತ್ತಿರುವುದು ಪತ್ತೆಯಾಗಿದೆ. ಈ ವೇಳೆ ಮಿರತ್‌ನ ಚರಣ್‌ಸಿಂಗ್‌ ಯೂನಿವರ್ಸಿಟಿಯ ಮೂರು ಬಿಎ ಪದವಿ ಅಂಕಪಟ್ಟಿಗಳು, 14 ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಗಳು ವಶಕ್ಕೆ ಪಡೆಯಲಾಗಿದೆ. ಸಾರ್ವಜನಿಕ ಶಿಕ್ಷಣ ಸಂಸ್ಥೆ ನೀಡುತ್ತಿದ್ದ ಮಾದರಿಯಲ್ಲೇ ಅಂಕಪಟ್ಟಿ ನೀಡುತ್ತಿದ್ದರಿಂದ ವಿದ್ಯಾರ್ಥಿಗಳು ನಕಲಿ ಅಂಕಪಟ್ಟಿ ಪಡೆದು ಬೇರೆ ಉದ್ಯೋಗ ಹಾಗೂ ಇತರೆ ಸೌಲಭ್ಯ ಪಡೆದುಕೊಂಡಿದ್ದಾರೆ ಎಂಬುದು ಪತ್ತೆಯಾಗಿದೆ. ಅಲ್ಲದೆ, ಸಾರ್ವಜನಿಕ ಶಿಕ್ಷಣ ಇಲಾಖೆ ಕೂಡ ಆರೋಪಿತ ಸಂಸ್ಥೆಗಳಿಗೆ ಯಾವುದೇ ಮಾನ್ಯತೆ ನೀಡಿಲ್ಲ ಎಂಬುದನ್ನು ದೃಢಪಡಿಸಿವೆ.ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿ,ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ