ವಿಶ್ವದ ಅತೀ ಬಲಿಷ್ಠ ಆರ್ಥಿಕ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿರುವ ಅಮೆರಿಕದ ಬ್ಯಾಂಕಿಂಗ್ ಕ್ಷೇತ್ರ ಮತ್ತೊಮ್ಮೆ ತಲ್ಲಣಗೊಂಡಿದೆ. ಎರಡು ಪ್ರತಿಷ್ಠಿತ ಬ್ಯಾಂಕುಗಳು ಮುಳುಗಡೆಯಾಗಿ ಎರಡು ತಿಂಗಳು ಪೂರ್ಣಗೊಳ್ಳುವ ಮುನ್ನವೇ ಮತ್ತೊಂದು ಜನಪ್ರಿಯ ಬ್ಯಾಂಕ್ ಪತನಗೊಂಡಿದೆ. ಅಮೆರಿಕದ ಫಸ್ಟ್ ರಿಪಬ್ಲಿಕ್ ಬ್ಯಾಂಕ್ ದಿವಾಳಿ ಅಂಚಿಗೆ ಸಿಲುಕಿದ ಹಿನ್ನೆಲೆಯಲ್ಲಿ ಕ್ಯಾಲಿರ್ಫೋನಿಯಾದ ಹಣಕಾಸು ಸಂರಕ್ಷಣೆ ಅದನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇದರ ಬೆನ್ನಲ್ಲೇ, ಸಂಕಷ್ಟಕ್ಕೆ ಸಿಲುಕಿದ್ದ ಬ್ಯಾಂಕನ್ನು ಜೆಪಿ ಮೊರ್ಗಾನ್ ಚೇಸ್ ಅಂಡ್ ಕಂಪನಿಗೆ ಮಾರಾಟ ಮಾಡುವ ಒಪ್ಪಂದ ಮಾಡಿಕೊಳ್ಳಲಾಗಿದೆ. ಹೀಗಾಗಿ ಫಸ್ಟ್ ರಿಪಬ್ಲಿಕ್ ಬ್ಯಾಂಕ್‌ನ ಆಸ್ತಿ ಹಾಗೂ ಠೇವಣಿಗಳ ಬಗ್ಗೆ ಜೆಪಿ ಮೊರ್ಗಾನ್ ಕಾಳಜಿ ತೆಗೆದುಕೊಳ್ಳಲಿದ್ದು, ಹೂಡಿಕೆದಾರರಿಗೆ ಅಭಯ ಸಿಕ್ಕಂತಾಗಿದೆ. ಕೆಲವೇ ವಾರಗಳ ಹಿಂದೆ ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ ಹಾಗೂ ಸಿಗ್ನೇಚರ್ ಬ್ಯಾಂಕ್‌ಗಳು ಮುಳುಗಡೆಯಾಗಿ ಬ್ಯಾಂಕಿಂಗ್ ಕ್ಷೇತ್ರವನ್ನೇ ನಡುಗಿಸಿದ್ದವು. ಅದರಿಂದ ಗ್ರಾಹಕರಲ್ಲಿ ಮೂಡಿದ ಆತಂಕವೇ ಫಸ್ಟ್ ರಿಪಬ್ಲಿಕ್ ಪತನಕ್ಕೆ ಕಾರಣವಾಗಿದೆ.
1985ರಲ್ಲಿ ಕೇವಲ 10 ಸಿಬ್ಬಂದಿಯೊಂದಿಗೆ ಆರಂಭವಾದ ಫಸ್ಟ್ ರಿಪಬ್ಲಿಕ್ ಬ್ಯಾಂಕ್ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನಂತೆಯೇ ಶ್ರೀಮಂತರನ್ನು ಗುರಿಯಾಗಿಸಿಕೊಂಡು ಸೇವೆಯನ್ನು ಒದಗಿಸುತ್ತಿತ್ತು. 2000ದ ವೇಳೆಗೆ ಅಮೆರಿಕದ 14ನೇ ಅತಿದೊಡ್ಡ ಬ್ಯಾಂಕ್ ಎಂಬ ಅಭಿದಾನಕ್ಕೆ ಪಾತ್ರವಾಗಿತ್ತು. 2022ರ ಅಂತ್ಯದ ವೇಳೆಗೆ ಬ್ಯಾಂಕು ಅಮೆರಿಕದ 7 ರಾಜ್ಯಗಳಲ್ಲಿ 80 ಶಾಖೆ ಹಾಗೂ 7 ಸಾವಿರ ಸಿಬ್ಬಂದಿಯನ್ನು ಹೊಂದಿತ್ತು. ಇದೀಗ ಬ್ಯಾಂಕು 8 ರಾಜ್ಯಗಳಲ್ಲಿ 84 ಶಾಖೆಗಳನ್ನು ಹೊಂದಿದ್ದು, ಈ ಎಲ್ಲಾ ಶಾಖೆಗಳು ಜೆಪಿ ಮೊರ್ಗಾನ್ ಹೆಸರಲ್ಲಿ ಇನ್ನು ಮುಂದೆ ಕಾರ್ಯಾಚರಣೆ ನಡೆಸಲಿವೆ.