ವಿಜಯೇಂದ್ರ ಸ್ಪರ್ಧಿಸಿರುವ ಕ್ಷೇತ್ರದಲ್ಲಿ ಅಚ್ಚರಿಯ ಬೆಳವಣಿಗೆ.. ಮಲೆನಾಡಲ್ಲಿ‌ ಮೊಳಗಿದ ಕ್ರೈಸ್ತರ ಘೋಷಣೆ

ರಾಜ್ಯ

ಶಿವಮೊಗ್ಗ: ಮಲೆನಾಡ ಸೆರಗು ಶಿವಮೊಗ್ಗ ಜಿಲ್ಲೆಯ ಚುನಾವಣಾ ಆಖಾಡವು ರಾಜಕೀಯ ಪಕ್ಷಗಳ ಭರ್ಜರಿ ಕಾದಾಟಕ್ಕೆ ಸಾಕ್ಷಿಯಾಗುತ್ತಿದೆ.ಬಿಜೆಪಿ-ಕಾಂಗ್ರೆಸ್ ಪಕ್ಷಗಳ ಸೆಣಸಾಟದ ನಡುವೆ ಶಿಕಾರಿಪುರದಲ್ಲಿನ ಕ್ರೈಸ್ತ ಸಮುದಾಯದ ನಿರ್ಧಾರವೊಂದು ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಕ್ಷೇತ್ರದ ಬಿಜೆಪಿ ಹುರಿಯಾಳು ವಿಜಯೇಂದ್ರ ಅವರನ್ನು ಭೇಟಿಯಾದ ಕ್ರೈಸ್ತ ಸಮುದಾಯದ ಪ್ರಬಲ ಸಂಘಟನೆಯಾಗಿರುವ ಶಾಜಿ ಟಿ ವರ್ಗೀಸ್ ಅವರನ್ನೊಳಗೊಂಡ ಕ್ರಿಶ್ಚಿಯನ್ ಸೇವಾ ಸಂಘದ ಪ್ರಮುಖರು ಹಾಗೂ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್ ರೋಡ್ರಿಗಸ್ ನೇತೃತ್ವದ ಮಲೆನಾಡಿನ ಕ್ರಿಶ್ಚಿಯನ್ ಮುಖಂಡರು ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಅವರಿಗೆ ಬೆಂಬಲ ಘೋಷಿಸಿದರು. 

ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸುವಂತೆ ಯುವನಾಯಕನಿಗೆ ಈ ಪ್ರಮುಖರು ಶುಭ ಹಾರಿಸಿದರು. ಈ ಸಂದರ್ಭದಲ್ಲಿ ಕ್ರೈಸ್ತ ಸಮುದಾಯದ ಧರ್ಮಗುರುಗಳು ಧಾರ್ಮಿಕ ಮುಖಂಡರು ಉಪಸ್ಥಿತರಿದ್ದು ವಿಜಯೇಂದ್ರ ಗೆಲುವಿಗೆ ತಮ್ಮ ಸಮುದಾಯದ ಆಭಯ ಇದೆ ಎಂದರು.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡವ ಕ್ರಿಶ್ಚಿಯನ್ ಸೇವಾ ಸಂಘದ (CSS) ರಾಜ್ಯಾಧ್ಯಕ್ಷರೂ ಆದ ಹಿರಿಯ ವಕೀಲ ಶಾಜಿ ಟಿ.ವರ್ಗೀಸ್, ರಾಜ್ಯಕ್ಕೆ ಸಮರ್ಥ ನಾಯಕನೊಬ್ಬನನ್ನು ನೀಡುವ ಪ್ರಯತ್ನ ಶಿಕಾರಿಪುರದಿಂದಲೇ ನಡೆದಿದೆ. ಮಲೆನಾಡಿನ ಜನರೊಂದಿಗೆ ನಾವೂ ಕೈ ಜೋಡಿಸುತ್ತಿದ್ದೇವೆ ಎಂದು ಘೋಷಿಸಿದರು.

ಬಿಎಸ್‌ವೈ ಅವರು ಈ ನಾಡು ಕಂಡ ರಾಜಹುಲಿ ಎಂದೇ ಖ್ಯಾತರಾಗಿದ್ದಾರೆ. ಅವರು ಸಿಎಂ ಆಗಿದ್ದಾಗ ಸರ್ಕಾರವು ಎಲ್ಲಾ ಸಮಾಜಗಳ ಅಭ್ಯುದಯಕ್ಕೆ ಯೋಜನೆಗಳನ್ನು ರೂಪಿಸಿತ್ತು. ಈಗ ಅವರ ಉತ್ತರಾಧಿಕಾರಿಯಾಗಿ ಸ್ಪರ್ಧಿಸಿತ್ತಿರುವ ಬಿ.ವೈ.ವಿಜಯೇಂದ್ರ ಅವರೂ ಅಭಿವೃದ್ಧಿ ಬಗ್ಗೆ ದೂರದೃಷ್ಟಿ ಉಳ್ಳವರಾಗಿದ್ದಾರೆ. ಅವರು ಗೆದ್ದು ಜನಸೇವೆ ಮಾಡುವ ಅವಕಾಶ ಸಿಕ್ಕಿದಲ್ಲಿ ರಾಜ್ಯದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು ಸಹಿತ ಅನೇಕ ನಗರರಗಳಲ್ಲಿನ ಸ್ಲಂ ಪ್ರದೇಶಗಳಲ್ಲಿ ಕ್ರೈಸ್ತ ಸಮುದಾಯದವರೇ ಹೆಚ್ಚಿದ್ದಾರೆ. ಪ್ರಸ್ತುತ ಡಿಜಿಟಲ್ ಯುಗದಲ್ಲೂ ಈ ಸ್ಲಂ ಪ್ರದೇಶದ ಮಂದಿ ಹಳೇಯ ವ್ಯವಸ್ಥೆಯಲ್ಲೇ ಬದುಕುತ್ತಿರುವುದು ವಿಷಾದದ ಸಂಗತಿ. ಈ ಸ್ಲಂ ಪರಿಸ್ಥಿತಿ ಬದಲಾವಣೆಯಾಗಬೇಕು, ಅಭಿವೃದ್ಧಿ ಆಗಬೇಕು ಎಂಬ ಆಗ್ರಹವನ್ನು CSS ಮುಂದಿಟ್ಟ ಸಂದರ್ಭದಲ್ಲಿ ವಿಜಯೇಂದ್ರ ಅವರು ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ನಮ್ಮ ಆಗ್ರಹ ಈಡೇರಿಸಲು ತಾವೂ ಪ್ರಯತ್ನ ಮಾಡುವುದಾಗಿ ಬಿ.ವೈ.ವಿಜಯೇಂದ್ರ ಭರವಸೆ ನೀಡಿದ್ದಾರೆ. ಹಾಗಾಗಿ ಅವರಿಗೆ ನಮ್ಮ ಸಮುದಾಯದ ಸಂಪೂರ್ಣ ಬೆಂಬಲ ಇದೆ ಎಂದು ಶಾಜಿ ಟಿ.ವರ್ಗೀಸ್ ತಿಳಿಸಿದರು. ರಾಜ್ಯದ ವಿವಿಧೆಡೆಯ CSS ಪದಾಧಿಕಾರಿಗಳು ಹಾಗೂ ಪ್ರಮುಖರು ವಿಜಯೇಂದ್ರ ಪರವಾಗಿ ಪ್ರಚಾರ ಮಾಡಲಿದ್ದಾರೆ ಎಂದು ಶಾಜಿ ಟಿ.ವರ್ಗೀಸ್ ಪ್ರಕಟಿಸಿದರು..

ವಿಜಯೇಂದ್ರ ದಿಗ್ವಿಜಯಕ್ಕೆ ಪ್ರಾರ್ಥನೆ..
ಮಲೆನಾಡಿನ ಕ್ರಿಶ್ಚಿಯನ್ ಸಂಘಟನೆಗಳ ಮುಖಂಡರೂ ಆದ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್ ರೋಡ್ರಿಗಸ್ ಮಾತನಾಡಿ, ಬಿ.ವೈ. ವಿಜಯೇಂದ್ರ ಅವರು ಬಿಜೆಪಿಗಷ್ಟೇ ಪ್ರಭಾವಿಯಲ್ಲ, ಅವರು ಇಡೀ ರಾಜ್ಯಕ್ಕೆ ಪ್ರಭಾವಿ ಯುವನಾಯಕ ಎಂದರು. ಮಾಜಿ ಸಿಎಂ ಯಡಿಯೂರಪ್ಪ ಅವರ ಗರಡಿಯಲ್ಲಿ ಪಳಗಿರುವ ವಿಜಯೇಂದ್ರ ಅವರು ಆಡಳಿತ ನಿರ್ವಹಣೆ ಬಗ್ಗೆ ಅನುಭವ ಉಳ್ಳವರಾಗಿದ್ದು ಅವರು ವಿಧಾನಸಭೆ ಪ್ರವೇಶಿಸಿದರೆ ತಮ್ಮ ಕ್ಷೇತ್ರದ ಜನರಿಗೆ ಒಳಿತಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 
ಮಲೆನಾಡಿನಲ್ಲಿ ಕ್ರಿಶ್ಚಿಯನ್ ಸಮುದಾಯವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಬಗ್ಗೆ ನಾವು ವಿಜಯೇಂದ್ರ ಬಳಿ ಹೇಳಿಕೊಂಡಾಗ ಅವರು ನಮ್ಮ ಸಮಾಜಕ್ಕೆ ಬೆಂಗಾವಲಾಗಿ ನಿಲ್ಲುವ ಭರವಸೆ ನೀಡಿದ್ದಾರೆ ಎಂದ ವಿನ್ಸೆಂಟ್ ರೋಡ್ರಿಗಸ್, ಅನೇಕ ಚರ್ಚ್ ಹಾಗೂ ಸಮುದಾಯಗಳ ವಿಚಾರಗಳಲ್ಲಿ ವಿಜಯೇಂದ್ರ ಅವರು ತಕ್ಷಣ ಸ್ಪಂದಿಸಿದ್ದಾರೆ. ಹಾಗಾಗಿ ಈ ಬಾರಿ ಕ್ರೈಸ್ತ ಸಮುದಾಯವು ವಿಜಯೇಂದ್ರ ಅವರ ಗೆಲುವಿಗಾಗಿ ಪ್ರಾರ್ಥಿಸುತ್ತಿದೆ  ಎಂದು ತಿಳಿಸಿದರು.