ಬಿಜೆಪಿಗೆ ಬಿಗ್ ಶಾಕ್ ನೀಡಿ, ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಿಸಿದ ವೀರಶೈವ-ಲಿಂಗಾಯಿತರು.

ರಾಜ್ಯ

ಬಿಜೆಪಿಗೆ ಲಿಂಗಾಯಿತರ ಅಗತ್ಯವಿಲ್ಲದಿದ್ದರೆ ಲಿಂಗಾಯಿತರಿಗೂ ಬಿಜೆಪಿ ಬೇಕಿಲ್ಲ ಎಂದು ಹೇಳಿರುವ ವೀರಶೈವ-ಲಿಂಗಾಯಿತ ಸಮುದಾಯವು,ಕಾಂಗ್ರೆಸ್ ಗೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.ರಾಜ್ಯ ಚುನಾವಣೆ ಪರ್ವ.ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಾಮಾನಗಳನ್ನು ಗಮನಿಸಿದರೆ ಲಿಂಗಾಯತ ಮತ್ತು ವೀರಶೈವ ಸಮುದಾಯಕ್ಕೆ ಆತಂಕಕಾರಿ ಬೆಳವಣಿಗೆಗಳು ಸ್ಪಷ್ಟವಾಗಿ ಗೋಚರಿಸುತ್ತಿದೆ. ವೈದಿಕಶಾಹಿ ಮನ:ಸ್ಥಿತಿಯ ಮನುವಾದಿಗಳು ನಡೆಸುತ್ತಿರುವ ಕುತಂತ್ರ ಮೇಲುಗೈ ಸಾಧಿಸುತ್ತಿದೆಯೇನೋ ಎಂದೆನಿಸುತ್ತಿದೆ.ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸುಳಿದಾಡುತ್ತಿರುವ ಬಿಜೆಪಿ ಪಕ್ಷದ ಮುಖಂಡರು ಆಡಿದರು ಎನ್ನಲಾದ ಮಾತುಗಳು ಇದನ್ನು ಪುಷ್ಟೀಕರಿಸುತ್ತಿವೆ. ಮೊನ್ನೆ ನಡೆದ ಸಭೆಯೊಂದರಲ್ಲಿ ಬಿಜೆಪಿ ಮತ್ತು ಪರಿವಾರದ ಮುಂದಾಳು ನೀಡಿದರು ಎನ್ನಲಾದ ಹೇಳಿಕೆ ಇಡೀ ನಮ್ಮ ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆ ತರುವ ಆತಂಕಕಾರಿ ವಿಷಯವಾಗಿದೆ.’ನಾವು ಹಿಂದುತ್ವದಲ್ಲಿ ಮುಂದುವರೆಯುತ್ತೇವೆ.ನಮಗೆ ಲಿಂಗಾಯಿತ ಅಗತ್ಯವಿಲ್ಲ’. ನಾವು ಇನ್ನೆಷ್ಟು ದಿನ ಲಿಂಗಾಯತರ ಓಲೈಕೆ ಮಾಡಿಕೊಂಡಿರಬೇಕು ಎಂಬ ಅವರ ಮಾತುಗಳು ಇಡೀ ಸಮುದಾಯವನ್ನೇ ಘಾಸಿಗೊಳಿಸಿದೆ.

ಒಂದೆಡೆ ಹಾಲಿ ಸಿಎಂ ಮತ್ತು ಅವರ ಸಂಪುಟದ ಲಿಂಗಾಯಿತ ಸಮುದಾಯದ ಮಂತ್ರಿಗಳು ನಾವುಗಳು ಬಸವ ಪಥದಲ್ಲೇ ಸಾಗುತ್ತಿದ್ದೇವೆಂಬ ಘೋಷಣೆಗಳು ಮತ್ತು ಪರಿವಾರದ ಒಬ್ಬ ನಾಯಕರ ಮಾತುಗಳನ್ನೊಮ್ಮೆ ಮನನ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಬಿಜೆಪಿ ಸರ್ಕಾರ ಬಂದಾಗಿನಿಂದ ಒಂದಲ್ಲಾ ಒಂದು ರೀತಿಯಲ್ಲಿ ಲಿಂಗಾಯಿತರ ಮೇಲೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ದಬ್ಬಾಳಿಕೆ ನಡೆಸುತ್ತಲೇ ಬರುತ್ತಿದೆ. ಕಳೆದ 5 ವರ್ಷಗಳಿಂದ ಗಮನಿಸಿದಾಗ ಪಠ್ಯಪುಸ್ತಕಗಳಲ್ಲಿ ವಚನಕಾರರ ವಚನ ಸಾಹಿತ್ಯವನ್ನು ಕೈಬಿಟ್ಟಿರುವುದು ಮತ್ತು ಬಸವಣ್ಣನವರ ವಿಚಾರಧಾರೆಯನ್ನು ತಿರುಚಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಹೇಳಿದೆ.

ಇತ್ತೀಚಿನ ರಾಜಕೀಯ ಬೆಳವಣಿಗೆಯನ್ನು ಗಮಿಸಿದಾಗ ಮಾಜಿ ಸಿ.ಎಂ, ರಾಜ್ಯದ ಅಗ್ರಗಣ್ಯ ನಾಯಕರನ್ನು ಏಕಾಏಕಿಯಾಗಿ ಸಿಎಂ ಸ್ಥಾನದಿಂದ ಕೆಳಗಿಳಿಸಿ ಅವರನ್ನು ಕಣ್ಣೀರು ಹಾಕುವಂತೆ ಮಾಡಿದ್ದು ನಮ್ಮೆಲ್ಲರ ಕಣ್ಮುಂದ ಇದೆ.ಅವರಂತ ಲಿಂಗಾಯಿತ ಮಹಾ ನಾಯಕರ ಮೇಲೆ ದಾಳಿ ಶುರು ಮಾಡಿ,ಪ್ರಭಾವಿ ಲಿಂಗಾಯಿತ ನಾಯಕರುಗಳನ್ನು ಮೂಲೆಗುಂಪು ಮಾಡಿರುವುದು ಸ್ಪಷ್ಟವಾಗಿದೆ.

ಸೋಮಣ್ಣ ಅವರನ್ನು ವರುಣದಿಂದ ಸ್ಪರ್ಧಿಸಲು ನಿರ್ದೇಶನ ನೀಡಿ, ಅವರನ್ನು ಹರಕೆಯ ಕುರಿಯನ್ನಾಗಿ ಮಾಡಲಾಗಿದೆ. ಹೀಗೆ ಕರ್ನಾಟಕದ ರಾಜಕಾರಣದಲ್ಲಿ ಲಿಂಗಾಯಿತ ನಾಯಕತ್ವವನ್ನು ನಿರ್ನಾಮ ಮಾಡುವ ಬಿಜೆಪಿಯ ಕುತಂತ್ರ ಇದೀಗ ಸ್ಪಷ್ಟವಾಗಿದೆ.

ಮೋದಿ ಹಾಗೂ ಅಮಿತ್ ಶಾ ಅವರು ಲಿಂಗಾಯಿತರಿಗೆ ರಾಜ್ಯದ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಲು ಆ ಸಮುದಾಯದ ರಾಜ್ಯಮಟ್ಟದ ಬಿಜೆಪಿ ಮುಖಂಡರು ವಿನಂತಿಸಿದಾಗ ಅದನ್ನು ಸ್ಪಷ್ಟವಾಗಿ ನಿರಾಕರಿಸುವುದು ದೊಡ್ಡ ದ್ರೊಹವಾಗಿದೆ.ತಮ್ಮ ಭಾಷಣಗಳಲ್ಲಿ ಕಾಂಗ್ರೆಸ್ ಪಕ್ಷವು ಲಿಂಗಾಯಿತರಿಗೆ ದ್ರೋಹ ಮಾಡಿದೆ ಎಂದು ಎಲ್ಲೆಡೆ ಬಿಂಬಿಸುವ ಪ್ರಯತ್ನಗಳನ್ನು ರಾಷ್ಟ್ರಮಟ್ಟದ ಬಿಜೆಪಿ ನಾಯಕರು ಮಾಡುತ್ತಿದ್ದು, ಇದು ಸತ್ಯಕ್ಕೆ ದೂರವಾದ ಮಾತು. ಎಸ್.ನಿಜಲಿಂಗಪ್ಪ, ಬಿಡಿ.ಜತ್ತಿ, ವೀರೇಂದ್ರ ಪಾಟೀಲ್, ರಾಜಶೇಖರ ಮೂರ್ತಿ, ಎಸ್ಆರ್.ಪಾಟೀಲ್. ಎಂ.ಬಿ ಪಾಟೀಲ್ ಮುಂತಾದವರನ್ನು ರಾಜ್ಯ ಮಟ್ಟದಲ್ಲಿ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಮುಖ ಸ್ಥಾನವನ್ನು ನೀಡಿ ನಿರಂತರವಾಗಿ ಗೌರವಿಸುತ್ತಿರುವುದು ಕಾಂಗ್ರೆಸ್ ಪಕ್ಷವೆಂದು ಸ್ಮರಿಸಬೇಕಾಗಿದೆ. ಎಲ್ಲಾ ಲಿಂಗಾಯಿತ ಮತ್ತು ವೀರಶೈವ ಸಮುದಾಯದವರು ಈ ಬಗ್ಗೆ ಎಚ್ಚೆತ್ತುಕೊಂಡು ಈ ಬಾರಿ ಬಿಜೆಪಿಗೆ ತಕ್ಕ ಪಾಠ ಕಲಿಸುವುದಲ್ಲದೆ, ಸ್ಪಷ್ಟ ಸಂದೇಶವನ್ನು ರವಾನಿಸಬೇಕು ಎಂದು ತಿಳಿಸಿದೆ.