ಮಾಜಿ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್,ಸುನಿಲ್ ಕಾನುಗೋಲು ಇವರ ಪಾತ್ರ
ಬುಧವಾರ ಮತದಾನ ಮುಕ್ತಾಯವಾಗಿದ್ದು,ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆರುವ ನಿರೀಕ್ಷೆಯಲ್ಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾಗಿ ಉತ್ಸಾಹದ ಪ್ರಚಾರ ನಡೆಸಿದ ಐವರು ಪ್ರಮುಖರಿದ್ದಾರೆ. ಅವರು ತೆರೆ ಮರೆಯಲ್ಲಿ ನಿಂತು ಕಠಿಣ ಶ್ರಮ ವಹಿಸಿದ್ದಾರೆ. ಪ್ರಣಾಳಿಕೆಯಿಂದ ಹಿಡಿದು ಆಕ್ರಮಣಕಾರಿ ಪ್ರಚಾರದವರೆಗೆ, ರಾಜ್ಯದಲ್ಲಿ ಕಾಂಗ್ರೆಸ್ ಹೈಲೈಟ್ ಮಾಡಿದ ಎಲ್ಲಾ ಅಂಶಗಳು ರಾಜ್ಯದ ಜನರ ಗಮನ ಸೆಳೆಯಿತು. ಯಶಸ್ವಿ ಪ್ರಚಾರದ ಹಿಂದೆ ಪಕ್ಷದ ಮುಖಂಡರಾದ ಜಿ. ಪರಮೇಶ್ವರ, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಎಂ.ಬಿ. ಪಾಟೀಲ್, ಶಶಿಕಾಂತ್ ಸೆಂಥಿಲ್ ಮತ್ತು ಸುನೀಲ್ ಕಾನುಗೋಲು ಪ್ರಮುಖ ಪಾತ್ರ ವಹಿಸಿದ್ದರು.
ಸುರ್ಜೇವಾಲಾರನ್ನು ಕರ್ನಾಟಕ ಉಸ್ತುವಾರಿಯಾಗಿ ನೇಮಿಕಗೊಳಿಸಲಾಯಿತು.ಇವರು ರಾಜ್ಯ ಉಸ್ತುವಾರಿಯಾಗಿ ನೇಮಕಗೊಳ್ಳುವ ಮೊದಲು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ರಾಜ್ಯ ನಾಯಕತ್ವದಲ್ಲಿನ ಭಿನ್ನಾಭಿಪ್ರಾಯಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದವು.ಈ ಇಬ್ಬರು ಪ್ರಮುಖ ನಾಯಕರ ನಡುವಿನ ಭಿನ್ನಾಭಿಪ್ರಾಯಗಳು ಚುನಾವಣೆಗೆ ಮುಂಚೆಯೇ ಕೊನೆಗೊಳ್ಳುವಂತೆ ಸುರ್ಜೇವಾಲಾ ಮಾಡಿದರು.ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ರಾಹುಲ್ ಗಾಂಧಿಯವರೊಂದಿಗೆ ಇಬ್ಬರು ನಾಯಕರನ್ನು ಒಟ್ಟಿಗೆ ತಂದರು.ಅವರು ಚುನಾವಣಾ ಪೂರ್ವದಲ್ಲಿ ಪಕ್ಷದ ನಾಯಕತ್ವದಲ್ಲಿ ಒಗ್ಗಟ್ಟಿನ ಸಂದೇಶವನ್ನು,ಒಗ್ಗಟ್ಟಿನ ಮಂತ್ರವನ್ನು ಪಠಿಸುತ್ತಲೇ ಇದ್ದರು.
ಪ್ರಚಾರ ಸಮಿತಿಯ ಅಧ್ಯಕ್ಷರಾಗಿರುವ ಮತ್ತೊಬ್ಬ ಪ್ರಬಲ ಲಿಂಗಾಯತ ನಾಯಕ ಎಂಬಿ ಪಾಟೀಲ್ ಅವರು ಕರ್ನಾಟಕದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಉತ್ಸಾಹಭರಿತ ಪ್ರಚಾರ ನಡೆಸಿದರು. ರಾಜ್ಯದ ಪ್ರಬಲ ಲಿಂಗಾಯತ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಪಕ್ಷಕ್ಕೆ ಕರೆತರುವಲ್ಲಿ ಪಾಟೀಲ್ ಮುಖ್ಯ ಪಾತ್ರ ವಹಿಸಿದ್ದಾರೆ.ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆಗಳು, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಸಾರ್ವಜನಿಕ ಸಭೆ,ರೋಡ್ ಶೋಗಳ ಮೂಲಕ ರಾಜ್ಯದಲ್ಲಿ ಆಕ್ರಮಣಕಾರಿ ಪ್ರಚಾರವನ್ನು ರೂಪಿಸುವ ಹಿಂದೆ ಎಂಬಿ ಪಾಟೀಲ್ ಇದ್ದಾರೆ. ಮತದಾರರನ್ನು ಓಲೈಸಲು ಪಕ್ಷದ ಮನೆ-ಮನೆ ಪ್ರಚಾರದಲ್ಲೂ ಗಮನ ಹರಿಸಿದರು.ಸೋನಿಯಾ ಗಾಂಧಿಯವರನ್ನು ಕರೆತಂದು ಚುನಾವಣಾ ಪ್ರಚಾರ ಸಭೆ ನಡೆಸಿದರು.ಎಂ.ಬಿ ಪಾಟೀಲ್ ತನ್ನ ಶಕ್ತಿ ಮೀರಿ ದುಡಿದರು.
ಜಿ. ಪರಮೇಶ್ವರ್ ಅವರನ್ನು ಕರ್ನಾಟಕ ಕಾಂಗ್ರೆಸ್ ಪ್ರಣಾಳಿಕೆ, ನೀತಿ ಮತ್ತು ದೂರದೃಷ್ಟಿ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಯಿತು.
ಜಿ.ಪರಮೇಶ್ವರ್ ಅವರು ರಾಜ್ಯದ ಜನರಿಗೆ ಪಕ್ಷದ ಐದು ಭರವಸೆಗಳನ್ನು ಪ್ರಸ್ತಾಪಿಸಿದರು.ಅದು ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. 2008ರ ಬ್ಯಾಚ್ ನ ಐಎಎಸ್ ಅಧಿಕಾರಿ,ಮಂಗಳೂರಿನ ಜಿಲ್ಲಾಧಿಕಾರಿಯಾಗಿದ್ದ ಸಮಯ 2019ರಲ್ಲಿ ತನ್ನ ಹುದ್ದೆಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ ಸೆಂಥಿಲ್ ಅವರನ್ನು ಚುನಾವಣೆಗೆ ಒಳಪಡುವ ರಾಜ್ಯದಲ್ಲಿ ಕಾಂಗ್ರೆಸ್ ವಾರ್ ರೂಂ ನ ಉಸ್ತುವಾರಿಯನ್ನಾಗಿ ಮಾಡಲಾಯಿತು.ಅವರು ಶಿಸ್ತು ಬದ್ದ ತಂಡದೊಂದಿಗೆ ನಿಕಟವಾಗಿ ಕೆಲಸ ಮಾಡಿರುವುದಲ್ಲದೆ,ಪಕ್ಷವು ಫ್ಯಾಕ್ಟ್ ಚೆಕ್ಕಿಂಗ್ ಮೇಲ್ವಿಚಾರಣೆ ಮತ್ತು ಸಮಸ್ಯೆಗಳ ಬಗ್ಗೆ ಆಡಳಿತಾರೂಢ ಬಿಜೆಪಿಯನ್ನು ಎದುರಿಸಲು ಮತ್ತು ಬಿಜೆಪಿಯನ್ನು ಮೂಲೆಗುಂಪು ಮಾಡಲು ಪಕ್ಷದ ನಾಯಕರಿಗೆ ಬೆಂಬಲವನ್ನು ನೀಡುವತ್ತ ಕೆಲಸ ಮಾಡಿದರು. ಶಶಿಕಾಂತ್ ಸೆಂಥಿಲ್ ನೇತೃತ್ವದಲ್ಲಿ ಕಾಂಗ್ರೆಸ್ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಪ್ರಚಾರದ ಮೇಲೆ ನಿಗಾ ಇರಿಸಿತ್ತು.
ಕಾಂಗ್ರೆಸ್‌ಗೆ ರಣತಂತ್ರ ರೂಪಿಸುವ ಕೆಲಸ ಮಾಡುತ್ತಿರುವ ಮತ್ತೊಬ್ಬ ಮೆಧಾವಿ ಸುನಿಲ್ ಕಾನುಗೋಲು ಅವರು ಸಮೀಕ್ಷೆ, ಪ್ರಚಾರ, ಅಭ್ಯರ್ಥಿಗಳ ಆಯ್ಕೆ ನಿರ್ಧಾರ, ಗೆಲುವಿನ ತಂತ್ರಗಾರಿಕೆಯ ಹೊಣೆ ಹೊತ್ತಿದ್ದರು. ಪಕ್ಷದ ನಾಯಕರ ಪ್ರಕಾರ, ಬಹುತೇಕ ತೆರೆಮರೆಯಲ್ಲಿಯೇ ಇದ್ದ ಕಾನುಗೋಲು ಅವರು ರಾಜ್ಯದ ಪ್ರತಿ ವಿಧಾನಸಭಾ ಸ್ಥಾನಕ್ಕೆ ರಣತಂತ್ರವನ್ನು ಸಿದ್ಧಪಡಿಸಿದ್ದಾರೆ. ಕರ್ನಾಟಕದಲ್ಲಿ ತ್ರಿಕೋನ ಸ್ಪರ್ಧೆಯಾಗದಂತೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ಮೂಲೆಗುಂಪು ಮಾಡಲು ಅವರು ತಂತ್ರವನ್ನು ಸಿದ್ಧಪಡಿಸಿದ್ದಾರೆ.ಪಕ್ಷದ ನಾಯಕರ ಪ್ರಕಾರ,ಆಡಳಿತಾರೂಢ ಬಿಜೆಪಿ ವಿರುದ್ಧ ರೇಟ್ ಕಾರ್ಡ್ ಬಿಡುಗಡೆ, ಪೇ-ಸಿಎಂ ಮತ್ತು 40 ಪರ್ಸೆಂಟ್ ಕಮಿಷನ್ ಸರ್ಕಾರ್ ಮುಂತಾದ ಕಾಂಗ್ರೆಸ್ ಪ್ರಚಾರಗಳಿಗೆ ಸುನಿಲ್ ಕಾನುಗೋಲು ಕಾರಣ. ಈ ಹಿಂದೆ ಬಿಜೆಪಿಯ ಪ್ರಚಾರದ ಭಾಗವಾಗಿ ಸುನಿಲ್ ಕಾನುಗೋಲು ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೆಲಸ ಮಾಡಿದ್ದರು. ಅವರನ್ನು ಮೇ 2022 ರಲ್ಲಿ ಕಾಂಗ್ರೆಸ್ ತೆಕ್ಕೆಗೆ ತರಲಾಯಿತು.ಬಳಿಕ ಕಾಂಗ್ರೆಸ್ ಪಕ್ಷದ ರಣತಂತ್ರ ಹೆಣೆಯಲು ಆರಂಭಿಸಿದರು. ಅವರು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಗೆ ಕೊಡುಗೆ ನೀಡಿದ್ದಾರೆ. ಅವರು ಉತ್ತರ ಪ್ರದೇಶದಲ್ಲಿ ಬಿಜೆಪಿಗಾಗಿ ಕೆಲಸ ಮಾಡಿದ್ದರು.2017 ರಲ್ಲಿ ಯೋಗಿ ಆದಿತ್ಯನಾಥ್ ಅವರ ಅದ್ಭುತ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.2014ರಲ್ಲಿ ಪ್ರಶಾಂತ್ ಕಿಶೋರ್ ಜೊತೆ ಸುನಿಲ್ ಕಾನುಗೋಲು ಕೆಲಸ ಮಾಡಿದ್ದರು