ಪ್ರಾಧ್ಯಾಪಕನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

ರಾಷ್ಟ್ರೀಯ

ಪಶ್ಚಿಮ ಬರ್ಧಮಾನ್ ಜಿಲ್ಲೆಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರ ವಿರುದ್ಧ ಬಾಂಗ್ಲಾದೇಶದ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಜೀವ ಬೆದರಿಕೆ ಆರೋಪ ಮಾಡಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ಪಶ್ಚಿಮ ಬಂಗಾಳ ಮಹಿಳಾ ಆಯೋಗ ಸೋಮವಾರ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವುದಾಗಿ ತಿಳಿಸಿದೆ.ಪೊಲೀಸ್ ತನಿಖೆಯ ನಂತರ ಆರೋಪ ನಿಜವೆಂದು ಕಂಡುಬಂದಲ್ಲಿ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಲಿದೆ.

ಸರ್ಕಾರಿ ಸ್ವಾಮ್ಯದ ಕಾಜಿ ನಜ್ರುಲ್ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ವಾಸಿಸುವ ದೂರುದಾರ ಯುವತಿ ಸೇರಿದಂತೆ ಸಂಬಂಧಿಸಿದ ಎಲ್ಲರೊಂದಿಗೆ ಮಾತನಾಡಿರುವುದಾಗಿ ಮಹಿಳಾ ಆಯೋಗದ ಅಧ್ಯಕ್ಷೆ ಅವರು ಪಿಟಿಐಗೆ ತಿಳಿಸಿದ್ದಾರೆ.ಆರೋಪಿಯು ಎಸ್‌ಎಂಎಸ್‌ ಮೂಲಕ ಯುವತಿಗೆ ಕಳುಹಿಸಿದ್ದ ಜೀವ ಬೆದರಿಕೆ ಸೇರಿದಂತೆ ಮಹಿಳೆಯ ದೂರಿನಲ್ಲಿ ಉಲ್ಲೇಖಿಸಿರುವ ಎಲ್ಲ ಅಂಶಗಳನ್ನು ಪರಿಶೀಲಿಸುವಂತೆ ಆಯೋಗದ ಸದಸ್ಯರು ಪೊಲೀಸರಿಗೆ ಶಿಫಾರಸು ಮಾಡಿದ್ದಾರೆ.

ಸ್ನಾತಕೋತ್ತರ ವಿದ್ಯಾರ್ಥಿನಿಯಿಂದ ಆಯೋಗಕ್ಕೆ ದೂರು ಬಂದಿರುವುದಾಗಿ ಆಯೋಗದ ಅಧ್ಯಕ್ಷೆಯವರು ಹೇಳಿದ್ದಾರೆ. ಅಲ್ಲದೆ ದೂರುದಾರ ವಿದ್ಯಾರ್ಥಿನಿಯೊಂದಿಗೆ ಒಂದಕ್ಕಿಂತ ಹೆಚ್ಚು ಬಾರಿ ಫೋನ್ ಮೂಲಕ ಸಂವಾದ ನಡೆಸಿದ್ದೇನೆ ಮತ್ತು ಅವರ ಅಭಿಪ್ರಾಯಗಳನ್ನು ಪಡೆದಿದ್ದೇನೆ. ಪೊಲೀಸರಿಗೆ ದೂರು ನೀಡಿದ ನಂತರ ಎಸ್ಎಂಎಸ್ ಮೂಲಕ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ತಮಗೆ ತಿಳಿಸಿರುವುದಾಗಿ ಮಹಿಳಾ ಆಯೋಗದ ಅಧ್ಯಕ್ಷೆ ಹೇಳಿದ್ದಾರೆ.