ಕಾಂಗ್ರೆಸ್ಸಿನಲ್ಲಿ ಮತೀಯ ಮನಸ್ಥಿತಿಯವರು, ಕೋಮುವಾದಿಗಳು,ಕಡುಭ್ರಷ್ಟರು,ಮುಸ್ಲಿಮರನ್ನು ಕಂಡರಾಗದವರು ಬಹಳಷ್ಟು ಮಂದಿ ಇದ್ದಾರೆ.
✍️. ಇಸ್ಮಾಯಿಲ್ ಸುನಾಲ್
ಖ್ಯಾತ ವಕೀಲರು,ಮಂಗಳೂರು.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವನ್ನು ಕಂಡಿದೆ. ಸೋಲಿನ ಮೇಲೆ ಸೋಲು ಕಾಣುತ್ತಿದ್ದ ಕಾಂಗ್ರೆಸ್ ಕೊನೆಗೂ ಗೆದ್ದು ಬೀಗಿದೆ. ಈ ಹಿಂದೆ ಪಂಜಾಬಿನಲ್ಲಿ ಆದಂತ ಸೋಲಂತೂ ಕಾಂಗ್ರೆಸ್ಸಿಗೆ ಬಹು ದೊಡ್ಡ ಆಘಾತವನ್ನೇ ನೀಡಿತ್ತು. ಜೊತೆಗೆ ಗೋವಾದಂತಹ ಸಣ್ಣ ಪುಟ್ಟ ರಾಜ್ಯದಲ್ಲಿಯೂ ಅಧಿಕಾರಕ್ಕೆ ಬರಲು ಕಾಂಗ್ರೆಸ್ಸಿಗೆ ಸಾಧ್ಯವಾಗಲಿಲ್ಲ. ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಂತೂ ಈ ಪಕ್ಷ ಹೀನಾಯ ಸೋಲು ಕಂಡಿತು. ಹೇಗೆ ನೋಡಿದರೂ ಕಾಂಗ್ರೆಸ್ ಎಲ್ಲೆಡೆ ನಿರಾಸೆ ಮೂಡಿಸಿತ್ತು. ಜತೆಗೆ ರಾಹುಲ್ ಗಾಂಧಿಯ ವಿಫಲ ನಾಯಕತ್ವ, ಅವಧಿ ಮೀರಿದ ಸೋನಿಯಾ ಗಾಂಧಿ, ಪ್ರಭಾವವಿಲ್ಲದ ಪ್ರಿಯಾಂಕಾ ವಾಧ್ರಾ ನೀರಾಸೆಯನ್ನಷ್ಟೇ ಮೂಡಿಸಿ, ಒಟ್ಟು ನಾಯಕತ್ವವೇ ನೆಲಕಚ್ಚಿದ ಸ್ಥಿತಿಯಲ್ಲಿ ಕಾಂಗ್ರೆಸ್ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆಯವರನ್ನು ಅಧ್ಯಕ್ಷರಾಗಿ ಮಾಡಿ ಅದರ ರಿಮೋಟನ್ನು ನೆಹರೂ ಕುಟುಂಬದಲ್ಲಿ ಉಳಿಸಿಕೊಡಿತ್ತು. ಈ ಪರಿಸ್ಥಿಯಲ್ಲಿ ಕಾಂಗ್ರೆಸ್ಸಿಗೆ ಮತ್ತೆ ಜೀವ ತುಂಬಿ ಚೈತನ್ಯ ಕೊಟ್ಟು ಪುಟಿದೇಳಿಸಬಲ್ಲ ನಾಯಕರಾರು ಎಲ್ಲಿಯೂ ಕಾಣಿಸುತ್ತಿರಲಿಲ್ಲ. ರಾಜಸ್ಥಾನದಲ್ಲಿ ಮೂಡಿಬರುತ್ತಿದ್ದ ಪೈಲಟ್ ಎಂಬ ಯುವ ನಾಯಕನನ್ನು ಮ್ಯೂಟರ್ ಮಾಡಿದ ಬೆಕ್ಕಿನಂತೆ ಮಾಡಿದ್ದರು. ಮಧ್ಯಪ್ರದೇಶದಲ್ಲಿನ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾರಿಗೆ ಸೂಕ್ತ ಸ್ಥಾನ ಮಾನ ನೀಡದೆ, ಅವರೂ ಬಿಜೆಪಿಯ ಮೊರೆಹೋಗುವಂತೆ ಮಾಡಲಾಗಿತ್ತು. ಅಷ್ಟೇ ಏಕೆ ಇದೆ ಕರ್ನಾಟಕದಲ್ಲಿಯೂ ತನ್ನದೇ ಬೆಂಬಲದ ಸರಕಾರವನ್ನು, ತನ್ನದೇ ನಾಯಕರು ಹೊಡೆದುರುಳಿಸಿದಾಗಲೂ, ಈ ಬಗ್ಗೆ ಏನೊಂದು ಮಾಡಲು ಸಾಧ್ಯವಾಗದ ಸ್ಥಿತಿಗೆ ಕಾಂಗ್ರೆಸ್ಸು ತಲಪಿತ್ತು.
ಜಾತ್ಯತೀತ ಸರ್ಕಾರವನ್ನು ಹಂಬಲಿಸುವ ಜನರು ನಮ್ಮ ಬಗ್ಗೆ ಮಾತನಾಡುವವರು ಯಾರು ಎಂದು ಕೇಳುವಂತಹಾ ಪರಿಸ್ಥಿತಿ ಇತ್ತು. ಅವರ ಈ ಕಾಳಜಿ, ಆತಂಕ ಸಹಜವಾದದ್ದೆ ಆಗಿತ್ತು. ಆಗ್ಗಾಗ್ಯೆ ಮುಗ್ಗರಿಸಿ ಅವನತಿಯ ಹಾದಿಯನ್ನು ಹಿಡಿದಿದ್ದ ಪಕ್ಷವನ್ನು ಗೆದ್ದು ಬೀಗುವ ಬಿಜೆಪಿ ಪಕ್ಷ, ದೇಶದಿಂದಲೇ ಮುಕ್ತ ಗೊಳಿಸಿದ್ದೇವೆ, ಅಥವಾ ಮುಕ್ತಗೊಳಿಸುತ್ತೇವೆ ಎಂದು ಪರಿಹಾಸ್ಯ ಮಾಡುತ್ತಿತ್ತು. ರಾಹುಲ್, ಸೋನಿಯಾ ಮತ್ತು ಪ್ರಿಯಾಂಕಾರ ನಾಯಕತ್ವ ವಿಫಲವಾಗಿತ್ತು.
ಈ ನಡುವೆ ಈ ಮೂವರಿಗೂ ಪರಿಸ್ಥಿಯ ಅರಿವಾಯಿತೋ ಅಥವಾ ಯಾರಾದರೂ ತಿಳಿಸಿಕೊಟ್ಟರೋ ಗೊತ್ತಿಲ್ಲ. ಆದರೆ ಮೂವರಲ್ಲೂ ಈ ದೇಶಕ್ಕೆ ಅತ್ಯಂತ ಅಗತ್ಯವಾಗಿರುವ ಜೀವಪರ, ಮಾನವೀಯ ನಿಲುವುಗಳು ಹಾಗೂ ಪ್ರೀತಿ, ಅಂತಃಕರಣ, ಇತ್ಯಾದಿ ಗುಣಗಳು ಮೂಡತೊಡಗಿದವು.
ಇತ್ತೀಚಿನ ದಿನಗಳಲ್ಲಿ ಈ ದೇಶದಲ್ಲಿ ಚುನಾವಣಾ ರಾಜಕೀಯದ ವಿಷಯಕ್ಕೆ ಬಂದಾಗ ದ್ವೇಷ, ಅಸಹನೆ, ಕ್ರೌರ್ಯಕ್ಕೆ ಹೆಚ್ಚು ಮನ್ನಣೆ ದೊರೆಯುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಅದು ದುರಂತ ಎಂದರೂ ತಪ್ಪಾಗಲಾರದು. ನಿನ್ನೆ ಮೊನ್ನೆ ತನಕ ಜಾತ್ಯಾತೀತನಾಗಿದ್ದವ ಇಂದು ಪಕ್ಕಾ ಜಾತಿವಾದಿಯಾಗಿ, ಇನ್ನೊಂದು ಜಾತಿಯ ಅಥವಾ ಧರ್ಮದ ಜನರನ್ನು ಕೊಚ್ಚಿ ಹಾಕುವ ಮಾತುಗಳನ್ನಾಡುತ್ತಾನೆಂದರೆ, ಈ ಧರ್ಮದ ಅಫೀಮು ಅದೆಂತದ್ದೆಂದು ನಾವು ಮನಗಾಣ ಬಹುದಾಗಿದೆ. ವಿವಿಧ ರಾಜ್ಯಗಳಲ್ಲಿ ಬಿಜೆಪಿ ಎದುರು ಕಾಂಗ್ರೆಸ್ಸಿನ ಸೋಲು ಭಾರತದ ಜಾತ್ಯತೀತತೆ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಒಟ್ಟು ಭಾರತದ ನೆಮ್ಮದಿಗೆ ನಿಜಕ್ಕೂ ಮಾರಕವಾಗಿ ಪರಿಣಮಿಸಿತ್ತು. ಪ್ರೀತಿ, ಅಂತಃಕರಣಕ್ಕೆ ಮತ್ತು ಹೋರಾಟದ ರಾಜಕೀಯಕ್ಕೆ ಮತ ಸಿಗುತ್ತಿಲ್ಲ ಎಂಬುದು ಒಳ್ಳೆಯ ಸುದ್ದಿಯಂತೂ ಆಗಿರಲಿಲ್ಲ.
ಕಾಂಗ್ರೆಸ್ಸಿನ ಈ ಹಿಂದಿನ ಎಲ್ಲಾ ಸೋಲಿಗೆ ಕಾಂಗ್ರೆಸ್ ಮಾಡಿದ ನೂರಾರು ತಪ್ಪುಗಳು, ತಪ್ಪು ನಿರ್ಧಾರಗಳು ಕೂಡ ಕಾರಣವೂ ಹೌದು. ಹಾಗಂತ ಈ ಸೋಲಿನ ಬಳಿಕ ಕಾಂಗ್ರೆಸ್ ಅನ್ನು ಟೀಕಿಸಿ, ಬೈದು, ನಿಂದಿಸಿ, ಅವಮಾನಿಸಿ “ಕಾಂಗ್ರೆಸ್ ಕತೆ ಮುಗಿದೇ ಬಿಟ್ಟಿದೆ” “ಕಾಂಗ್ರೆಸ್ ಮುಕ್ತವಾಗಿದೆ” ಎಂದು ಎಂದು ಬಿಜೆಪಿ ಹೇಳುತ್ತಿದ್ದರಲ್ಲಿ ಅರ್ಥವಿರಲಿಲ್ಲ. ಹಾಗೆ ಕಾಂಗ್ರೆಸ್ ಅನ್ನು ನಾವು ಮೂಲೆಗೆ ತಳ್ಳಲು ಸಾಧ್ಯವೇ ಇಲ್ಲ. ಕಾಂಗ್ರೆಸ್ ಈಗಲೂ ಭಾರತದಾದ್ಯಂತ ನೆಲೆ ಇರುವ ಏಕೈಕ ರಾಷ್ಟ್ರೀಯ ಪಕ್ಷ. ಶಾಸಕರು, ಸಂಸದರು ಕಡಿಮೆ ಇರಬಹುದು, ಆದರೆ ಒಂದು ಪಕ್ಷವಾಗಿ ಕಾಂಗ್ರೆಸ್ ಭಾರತದ ಎಲ್ಲೆಡೆ ಇದೆ, ಕ್ಷೀಣಗೊಂಡಿದ್ದರು ಕೂಡ.!
ಕಳೆದ ಹಲವು ವರ್ಷಗಳಲ್ಲಿ ಬಿಜೆಪಿ ದ್ವೇಷ ರಾಜಕಾರಣವನ್ನೇ ನೆಚ್ಚಿಕೊಂಡು ಒಂದಾದ ಮೇಲೊಂದು ರಾಜ್ಯಗಳಲ್ಲಿ ಅಧಿಕಾರಕ್ಕೆ ಬರುತ್ತಿದ್ದರೂ ಕಾಂಗ್ರೆಸ್ ದ್ವೇಷ ರಾಜಕೀಯದ ಮೊರೆ ಹೋಗಲಿಲ್ಲ. ಬದಲಾಗಿ ಎಲ್ಲರನ್ನೂ ಒಳಗೊಳ್ಳುವ ಸಹಿಷ್ಣುತೆಯ ರಾಜಕಾರಣವನ್ನು ಕಾಂಗ್ರೆಸ್ ನಾಯಕತ್ವ ಮಾಡಿದೆ.
ರಾಜಕೀಯ ಪಕ್ಷಗಳು ಸಾಮಾನ್ಯವಾಗಿ ಬಂಡವಾಳಶಾಹಿಗಳು, ಬೃಹತ್ ಉದ್ಯಮಪತಿಗಳ ವಿರುದ್ಧ ಮಾತನಾಡುವುದಿಲ್ಲ. ಆದರೆ ಕಾಂಗ್ರೆಸ್ ಬೃಹತ್ ಉದ್ಯಮಪತಿಗಳ ಹೆಸರನ್ನು ಹೇಳಿಯೇ ಭಾರತಕ್ಕೆ ಆ ಉದ್ಯಮಪತಿಗಳು ಮಾಡುತ್ತಿರುವ ಬೃಹತ್ ಅನ್ಯಾಯದ ವಿರುದ್ಧ, ಮಾತನಾಡಿದ್ದಾರೆ.
ಬಿಜೆಪಿ ಮತ್ತು ಆರೆಸ್ಸೆಸ್ ಕಾಂಗ್ರೆಸ್ ಅನ್ನು ಹಿಂದೂ ವಿರೋಧಿ ಎಂದು ಬಿಂಬಿಸುತ್ತಿದ್ದರಿಂದ ಕಾಂಗ್ರೆಸ್ ಹಿಂದೂಗಳ ಮತಗಳನ್ನು ಕಳೆದು ಕೊಳ್ಳಬೇಕಾಗಬಹುದು ಎಂಬ ಸ್ಥಿತಿ ಇದ್ದರೂ, ಅದಕ್ಕೆ ಅಂಜದೆ ಕಾಂಗ್ರೇಸ್ ಮಾತಾಡಿದೆ, ಅನ್ಯಾಯದ ವಿರುದ್ಧ ನಿಂತಿದೆ ಮತ್ತು ಸತ್ಯ ಹೇಳಿದೆ. ಕರ್ನಾಟಕದಲ್ಲಿ ಹಿಜಾಬ್ ವಿವಾದ ದೊಡ್ಡದಾದಾಗ ಸಿದ್ಧರಾಮಯ್ಯ ಹಿಜಾಬ್ ಪರವಾಗಿ ಮಾತನಾಡಿರುವುದು ಸಹ ಅದಕ್ಕೊಂದು ಉದಾಹರಣೆ.
ಅಲ್ಪಸಂಖ್ಯಾತರು, ದಲಿತರು, ಸ್ತ್ರೀಯರ ಪರವಾಗಿ ಇನ್ನೂ ಹೆಚ್ಚಿನದನ್ನು ಕಾಂಗ್ರೆಸ್ ಮಾಡಬೇಕಿತ್ತು ಎಂಬುದು ನಿಜವಾದರೂ ಆಪ್, ಸಮಾಜವಾದಿ ಪಕ್ಷ, ಬಿಎಸ್ಪಿ ಮುಂತಾದ ಪಕ್ಷಗಳು ಹಲವು ಸೂಕ್ಷ್ಮ ಸಂದರ್ಭಗಳಲ್ಲಿ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರ ಹಾಕುತ್ತಾ ಕೂತು ಮೌನಕ್ಕೆ ಶರಣಾದರೂ ಕಾಂಗ್ರೆಸ್ ಬಹುತೇಕ ಹಾಗೆ ಮಾಡಿಲ್ಲ.
ಈ ಹಿನ್ನೆಲೆಯಲ್ಲಿ, ಕರ್ನಾಟಕದ ಚುನಾವಣೆ ಹತ್ತಿರ ಬಂದಿತ್ತು. ಈ ಹಿಂದೆ ಇದ್ದ ಲವ್ ಜಿಹಾದ್, ಹಿಜಾಬ್ ಹಾಗೂ ಇನ್ನಿತರ ದಮನಕಾರಿ ವಿಷಯಗಳನ್ನೆತ್ತಿದ್ದ ಬಿಜೆಪಿ ಸಾಕಷ್ಟು ಯಶಸ್ಸು ಗಳಿಸಿ ಗೆಲುವು ತನ್ನದೇ ಎಂದು ಬಗೆದಿತ್ತು. ಅದಕ್ಕಾಗಿಯೇ 40% ಕಮಿಷನ್ ಸೇರಿದಂತೆ, ಶಾಸಕರ ಮನೆ ಮಠಗಳಿಂದ ಕೋಟಿ ಕೋಟಿ ನಗದು ಹಿಡಿದಾಗಲೂ ಭ್ರಷ್ಟಾಚಾರವನ್ನು ನಿಲ್ಲಿಸುವುದಾಗಲೀ, ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಗೋಜಿಗೆ ಬಿಜೆಪಿ ಹೋಗಲಿಲ್ಲ. ಬದಲಾಗಿ, ಅದಾಗಲೇ ಪ್ರಚಲಿತದಲ್ಲಿದ್ದ ಲವ್ ಜಿಹಾದ್ ಹಾಗೂ ಹಿಜಾಬ್ ಪದಗಳಿಗೆ ಮತ್ತಷ್ಟು ಎಣ್ಣೆ ಸುರಿಯುವ ಸಲುವಾಗಿ ಹಲಾಲ್ ಕಟ್ ಹಾಗೂ ಅದರೊಂದಿಗೆ ಇತಿಹಾಸಕ್ಕೂ ಅಪಚಾರ ಎಸಗುವ ಸಲುವಾಗಿ ಟಿಪ್ಪು, ಉರಿ ಗೌಡ ನಂಜೇ ಗೌಡ ಪದಗಳನ್ನು ಸಹಿತ ಜಾರಿಗೆ ತರಲಾಯಿತು. ಜನರು ಮೂಢರೂ, ಮೂಗರೂ, ಕಿವುಡರೂ ಎಂದು ಆ ಪಕ್ಷ ಭಾವಿಸಿದಂತಿತ್ತು. ಅದರೊಂದಿಗೆ ದೇಶದ ಪ್ರಧಾನ ಮಂತ್ರಿಯವರು ಸರ್ಕಸ್ ಮಾಲಕನಂತೆ ಗಲ್ಲಿ ಗಲ್ಲಿ ಪ್ರಚಾರ ಆರಂಭಿಸಿದರು, ಮಾತ್ರವಲ್ಲ ಯಾವ ರೀತಿ ಸರ್ಕಸ್ ಕಂಪೆನಿ ಮಾಲಕ ತನ್ನ ಸರ್ಕಸ್ ನ್ನು ಪ್ರಚಾರ ಮಾಡುತ್ತಾನೋ ಅದೇ ರೀತಿ ತನ್ನದೇ ಅಜೆಂಡಾ ಹೊಂದಿದ್ದ ಸಿನಿಮಾ ಒಂದರ ಪ್ರಚಾರಕ್ಕೂ ಇಳಿದರು. ದೇಶದ ಪ್ರಧಾನ ಮಂತ್ರಿಯೊಬ್ಬರು, ಜುಜುಬಿ ವಿಧಾನಸಭಾ ಪ್ರಚಾರಕ್ಕಾಗಿ ಹಾದಿ ಬೀದಿಗಳಲ್ಲಿ ಸುತ್ತಿ, ಆ ಬಳಿಕ ಟೀವಿಯಲ್ಲೂ ಪ್ರತ್ಯಕ್ಷವಾಗಿ ತನ್ನ ಪಕ್ಷಕ್ಕೆ ಮತ ನೀಡಿ ಎಂದು ಬೇಡಿಕೊಳ್ಳುವ ಮೂಲಕ ಪ್ರಧಾನ ಮಂತ್ರಿ ಹುದ್ದೆಯ ಹಿರಿಮೆಯನ್ನು ಗಿರವಿಗಿಟ್ಟರು.
ತಮ್ಮ ಯಾತನೆ, ಬೇಸರ, ದುಃಖ, ಧುಮ್ಮನಾ ಹಾಗೂ ಕಷ್ಟಗಳಿಗೆ ಪರಿಹಾರ ನೀಡುವ ಸಂಜೀವಿನಿ ಯಾರಾಗಬಹುದೆಂದು ಕಾತರದಿಂದ ಕಾಯುತ್ತಿರುವಾಗ, ಕಾಂಗ್ರೆಸ್ ಪಕ್ಷ ಮೈಕೊಡವಿ ಎದ್ದು ನಿಂತಿತು. ತನ್ನ ಹಲವು ತಪ್ಪುಗಳನ್ನು ತಿದ್ದಿ ಕೊಂಡು, ಬಹುತೇಕ ಬಹಳ ಹೋಮ್ ವರ್ಕ್ ಮಾಡಿ ಅರ್ಹ ಅಭ್ಯರ್ಥಿಗಳಿಗೆ ಸೀಟು ನೀಡುವ ಮೂಲಕ ಸೈ ಎನ್ನಿಸಿಕೊಂಡಿತು. ಇದಕ್ಕೆ ವಿರುದ್ಧವಾಗಿ ಬಿಜೆಪಿ ಶೆಟ್ಟರ್, ಸವದಿ, ಈಶ್ವರಪ್ಪ, ಯಡಿಯೂರಪ್ಪ ಮುಂತಾದ ಘಟಾನುಘಟಿ ನಾಯಕರುಗಳನ್ನು ಕಡೆಗಣಿಸಿ, ಎಲ್ಲೂ ಸಲ್ಲದ ಸಂತೋಷ್ ರನ್ನು ತಂದು ಜನರ ಮುಂದೆ ಇಟ್ಟಿತು. ಬಹುದೊಡ್ಡ ಸಮುದಾಯವಾದ ಲಿಂಗಾಯತ ಸಮುದಾಯವನ್ನು ಅವಮಾನಿಸಿತು. ಚುನಾವಣೆಗೆ ಕೆಲವೇ ಕೆಲವು ದಿನಗಳಿರುವಾಗ ಒಂದು ಸಮುದಾಯದ ಮತಗಳನ್ನು ಕ್ರೋಡೀಕರಿಸುವ ಸಲುವಾಗಿಯೇ, ಅಲ್ಪಸಂಖ್ಯಾತ ಮುಸ್ಲಿಮರ ಮೀಸಲಾತಿಯನ್ನು ರದ್ಧು ಪಡಿಸಿ ಬೇರೆ ಸಮುದಾಯಕ್ಕೆ ನೀಡಿತು. ಇದರಿಂದ ನಮಗೆ ತುಂಬಾ ಲಾಭವಾಗಬದುದೆಂಬ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ, ಅದು ಉಲ್ಟಾ ಹೊಡಿಯಿತೆಂದೇ ಹೇಳಬಹುದು. ಯಾಕೆಂದರೆ ಇದರಿಂದ ಈ ತನಕ ಹರಿದು ಹಂಚಿ ಹೋಗುತ್ತಿದ್ದ ಮುಸ್ಲಿಂ ಮತಗಳು ಸಂಪೂರ್ಣವಾಗಿ ಕಾಂಗ್ರೆಸ್ ಕಡೆಗೆ ವಾಲಿತು. ಸೀಟು ಹಂಚುವಲ್ಲಿ ಬಹಳಷ್ಟು ಎಡವಟ್ಟು ಮಾಡಿಕೊಂಡ ಬಿಜೆಪಿಯ ತಪ್ಪುಗಳ ಸಂಪೂರ್ಣ ಲಾಭವನ್ನು ಕಾಂಗ್ರೆಸ್ ಪಡೆದುಕೊಂಡಿತು. ತಮ್ಮ ಬಾಹುಳ್ಯದ ಎಲ್ಲಾ ದೃಶ್ಯ ಹಾಗೂ ಪ್ರಿಂಟ್ ಮಾಧ್ಯಮಗಳನ್ನು ಬಳಸಿಕೊಡ ಬಿಜೆಪಿ ಗೆಲ್ಲುತ್ತೇವೆ ಎನ್ನುವ ಗುಂಗಿನಲ್ಲಿಯೇ ಇತ್ತು. ಅದಕ್ಕಾಗಿ ಡಿಕೆಶಿ ಹಾಗೂ ಸಿದ್ಧರಾಮಯ್ಯ ನಡುವಿನ ವೈಮನಸ್ಸನ್ನು ವೈಭರೀಕರಿಸುತ್ತಾ ಸಾಗಿತು. ಇದಕ್ಕೆ ಉತ್ತರವಾಗಿ ಈ ಇಬ್ಬರೂ ಹಲವಾರು ಸಲ ಒಟ್ಟಾಗಿ ಕಾಣಿಸಿಕೊಡು ತಮ್ಮ ಬಗ್ಗೆ ಬಿಜೆಪಿ ಹಾಗೂ ಮಾಧ್ಯಮಗಳು ಸುಳ್ಳು ಎಂದು ಜನತೆಗೆ ಮನದಟ್ಟು ಮಾಡಿಕೊಟ್ಟರು.
ಇದು ಕಾಂಗ್ರೆಸ್ಸನ್ನು ಮೈದಡವಿ ಬೇಜಾರಾಗದಿರು ಎಂದು ಹೇಳುವ ಸೌಜನ್ಯದ ಬರಹವಷ್ಟೇ. ನನ್ನ ಈ ಬರಹದ ಹೊರತಾಗಿಯೂ ನಾನು ಕಾಂಗ್ರೆಸ್ಸಿನ ವಿರೋಧಿಯೇ. ಯಾಕೆಂದರೆ ಕಾಂಗ್ರೆಸ್ಸಿನಲ್ಲಿ ಮತೀಯ ಮನಸ್ಥಿತಿಯವರು, ಕೋಮುವಾದಿಗಳು, ಕಡುಭ್ರಷ್ಟರು ಮುಸ್ಲಿಮರನ್ನು ಕಂಡರಾಗದವರು ಬಹಳಷ್ಟು ಮಂದಿ ಇದ್ದಾರೆ. ಅವರ ಕುರಿತು ನನಗೆ ಕಿಂಚಿತ್ ಪ್ರೀತಿಯೂ ಇಲ್ಲ, ಹಾಗೂ ಈ ಅಭಿನಂದನೆ ಅವರಿಗೆ ಸಲ್ಲುವುದೂ ಇಲ್ಲ. ಈ ಅಭಿನಂದನೆ ಏನಿದ್ದರೂ, ಜಾತ್ಯತೀತ ಮನೋಭಾವವಿರುವ, ಸರ್ವಜನಾಂಗದ ಶಾಂತಿಯ ತೋಟವಾಗಿ ಈ ದೇಶ ಎಂದೆಂದಿಗೂ ಉಳಿಯಬೇಕು ಎಂಬ ಭಾವನೆಯಿರುವ, ಭ್ರಷ್ಟಾಚಾರವನ್ನು ವಿರೋಧಿಸುವ, ಪ್ರೀತಿ-ಸಹನೆ-ಮಾನವೀಯತೆಯ ರಾಜಕೀಯ ನಿಲುವುಗಳನ್ನು ಒಪ್ಪುವ, ಪಾಲಿಸುವ ಕಾಂಗ್ರೆಸ್ ನಾಯಕರಿಗೆ ಮಾತ್ರ.
ಕಾಂಗ್ರೆಸ್ ಕುರಿತ ನನ್ನ ಟೀಕೆ ಟಿಪ್ಪಣಿಗಳು ಇನ್ನು ಮುಂದೆಯೂ ಮುಂದುವರಿಯುತ್ತದೆ. ಅದು ಬೇರೆ ವಿಚಾರ. ಆದರೆ ಎಷ್ಟು ಬೇಗ ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ನೆಗೆದೇಳುತ್ತದೋ ಅಷ್ಟೂ ಈ ದೇಶದ ಪ್ರಜಾಪ್ರಭುತ್ವ ಸಂಸ್ಕೃತಿಗೆ ಒಳಿತು. ಒಳ್ಳೆಯ ಆಡಳಿತ ನೀಡಬೇಕಾದ ಆಡಳಿತ ಪಕ್ಷ, ಈ ವಿಷಯದಲ್ಲಿ ಎಡವಿದಲ್ಲಿ ಅದನ್ನು ವಿರೋಧಿಸುವ ಒಂದು ಸಶಕ್ತ ವಿರೋಧ ಪಕ್ಷವಂತೂ ಪ್ರಜಾಪ್ರಭುತ್ವ ದೇಶಕ್ಕೆ ಅವಶ್ಯಕ.
ಕಾಂಗ್ರೆಸ್ ಈ ದಿಕ್ಕಿನಲ್ಲಿ ಹೇಗೆ ಮುಂದುವರಿಯಲಿದೆ ಎನ್ನುವದರ ಮೇಲೆ ಅದರ ಭವಿಷ್ಯ ಅವಲಂಬಿಸಿದೆ. ಇಲ್ಲವಾದಲ್ಲಿ ಅದಕ್ಕೆ ಬದಲಾಗಿ ಬೇರೆಯೇ ಶಕ್ತಿ ತನ್ನಿಂತಾನಾಗಿ ಉದಯಿಸಲಿದೆ, ಹಾಗೂ ಈ ದೇಶ ಎಂದಿಗೂ ಪ್ರಜಾಪ್ರಭುತ್ವ ದೇಶವಾಗಿ ಮುಂದುವರಿಯಲಿದೆ.!