ದಯಾ ನಾಯಕ್ ಮುಂಬೈ ಕ್ರೈಂ ಬ್ರ್ಯಾಂಚ್‌ ಇನ್ಸ್‌ಪೆಕ್ಟರ್ ಆಗಿ ನೇಮಕ

ರಾಷ್ಟ್ರೀಯ

ಎನ್‌ಕೌಂಟರ್ ಸ್ಪೆಷಲಿಸ್ಟ್ ‘ ಎಂದೇ ಪ್ರಖ್ಯಾತಿ ಪಡೆದಿರುವ ಕಾರ್ಕಳ ಎಣ್ಣೆಹೊಳೆ ಮೂಲದವರಾದ ದಯಾ ನಾಯಕ್ ಮುಂಬೈ ಪೊಲೀಸ್‌ ಅಪರಾಧ ವಿಭಾಗದ 9 ನೇ ಘಟಕದ ಪೊಲೀಸ್ ಇನ್ಸ್​ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದಲ್ಲಿ ಮೂರು ವರ್ಷಗಳ ಅವಧಿ ಪೂರ್ಣಗೊಳಿಸಿದ್ದ ನಾಯಕ್ ಅವರನ್ನು ಮಾರ್ಚ್ 28 ರಂದು ಎಟಿಎಸ್​ನಿಂದ ಮುಂಬೈ ಪೊಲೀಸ್ ಇಲಾಖೆಗೆ ವರ್ಗಾಯಿಸಲಾಗಿತ್ತು.

ಮಹಾರಾಷ್ಟ್ರ ರಾಜ್ಯ ಕೇಡರ್‌ನ 1995ರ ಬ್ಯಾಚ್ ಅಧಿಕಾರಿಯಾದ ದಯಾ ನಾಯಕ್ ಅವರು​, ಎಂಪಿಎಸ್​ಸಿ ಪರೀಕ್ಷೆ ಬರೆದು ಉತ್ತೀರ್ಣರಾದ ನಂತರ ಪೊಲೀಸ್ ಪಡೆಗೆ ನೇಮಕವಾಗಿದ್ದರು. ನಂತರ ಪಶ್ಚಿಮ ಉಪನಗರದ ಜುಹು ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್​ ಇನ್ಸ್‌ಪೆಕ್ಟರ್ ಆಗಿ ಮೊದಲ ಪೋಸ್ಟಿಂಗ್​ ಆಗಿತ್ತು. ಈ ವೇಳೆ ಮುಂಬೈ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿ ಮತ್ತು ಎನ್‌ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್​ ಶರ್ಮಾ ಅವರೊಂದಿಗೆ ದಯಾ ನಾಯಕ್ ಕೆಲಸ ಮಾಡಿದ್ದರು.ದಯಾ ನಾಯಕ್ ಭೂಗತ ಪಾತಕಿ ಬಬ್ಲು ಶ್ರೀವಾಸ್ತನ್​ ಗ್ಯಾಂಗ್​ನ ಇಬ್ಬರು ಗೂಂಡಾಗಳಿಗೆ ಗುಂಡಿಕ್ಕಿದ್ದರು. ಇದೇ ಅವರ ಮೊದಲ ಎನ್​ಕೌಂಟರ್.ಈ ಪ್ರಕರಣದ ಮೂಲಕವೇ ದಯಾ ನಾಯಕ್ ಎನ್‌ಕೌಂಟರ್ ಸ್ಪೆಷಲಿಸ್ಟ್​ ಆಗಿ ಹೆಸರು ಮಾಡಿದರು.

ಜೊತೆಗೆ,ದರೋಡೆಕೋರ ಅಮರ್ ನಾಯ್ಕ್ ಬಳಿ ಕೆಲಸ ಮಾಡುತ್ತಿದ್ದ LTTE ಯ 3 ಸದಸ್ಯರನ್ನೂ ಸಹ ದಯಾ ನಾಯಕ್ ಎನ್​ಕೌಂಟರ್‌ನಲ್ಲಿ ಮುಗಿಸಿದರು.ಸಾದಿಕ್ ಕಾಲಿಯಾ, ರಫೀಕ್ ದಿಬ್ಸ್​ವಾಲಾ, ಶ್ರೀಕಾಂತ್ ಮಾಮಾ, ಪರ್ವೇಜ್ ವಿನೋದ್ ಭಟ್ಕರ್, ಸಿದ್ದಿಕಿ ಮತ್ತು ಸುಭಾಷ್ ಸೇರಿದಂತೆ ಹತ್ತಾರು ಗ್ಯಾಂಗ್‌ಸ್ಟರ್‌ಗಳನ್ನು ಎನ್‌ಕೌಂಟರ್‌ ಮಾಡುವಲ್ಲಿ ನಾಯಕ್​ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ದಯಾ ನಾಯಕ್ ಮುಂಬೈನಲ್ಲಿ ಮಾತ್ರವಲ್ಲದೇ ದೇಶದಲ್ಲೇ ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂದು ಹೆಸರು ಪಡೆದರು.