ರಾಜಕೀಯ ನಿವೃತ್ತಿಯಿಂದ ಉಲ್ಟಾ ಹೊಡೆದ ರಮಾನಾಥ ರೈ; ಮುಂದಿನ ಚಿತ್ತ,ಲೋಕಸಭೆಯತ್ತ.?

ಕರಾವಳಿ

ಜಿಲ್ಲೆಯ ಹಿರಿಯ ರಾಜಕಾರಣಿ ಹಾಗೂ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಮೊನ್ನೆಯಷ್ಟೇ ಪತ್ರಿಕಾಗೋಷ್ಠಿ ನಡೆಸಿ ಘೋಷಿಸಿದ್ದರು. ಆದರೆ ಇದೀಗ ಮತ್ತೆ ರೈ ಯವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವ ಬಗ್ಗೆ ಯೂ ಟರ್ನ್ ಹೊಡೆದಿದ್ದು, ಪಕ್ಷ ಸೂಚಿಸಿದಲ್ಲಿ ಮತ್ತೆ ರಾಜಕೀಯ ಜವಾಬ್ದಾರಿಗಳನ್ನು ಹೊರುವುದಾಗಿ ಹೇಳಿಕೆ ನೀಡಿದ್ದಾರೆ. ನಿನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ ಅಭಿನಂದಿಸಿದ್ದರು. ಈ ಸಂದರ್ಭದಲ್ಲಿ ತನ್ನ ಮನದಾಳವನ್ನು ನಾಯಕರೊಂದಿಗೆ ಹಂಚಿಕೊಂಡಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಭದ್ರಕೋಟೆಯಾಗಿದ್ದು, ಹಿಂದುತ್ವದ ಕೋಟೆಯಾಗಿದ್ದ ಕೊಡಗಿನಲ್ಲಿ ಕಾಂಗ್ರೆಸ್ ವಿಜಯ ದುಂದುಭಿ ಬಾರಿಸಿದ್ದು, ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಮಾನಾಥ ರೈ ಯಂತಹ ಪ್ರಬಲ ಹಿರಿಯ ನಾಯಕರು ಹಿಂದುತ್ವದ ಅಲೆಗೆ ಸಿಲುಕಿ ಸೋಲು ಕಂಡಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ನಲ್ಲಿ ಪ್ರಬಲ ಅಭ್ಯರ್ಥಿ ಇಲ್ಲದೆ ಇರುವುದು ರಮಾನಾಥ ರೈ ಲೋಕಸಭಾ ಚುನಾವಣೆಯತ್ತ ತಮ್ಮ ದೃಷ್ಟಿ ಬೀರಿದ್ದಾರೆ.

ರಮಾನಾಥ ರೈ ಅವರು ಆರು ಬಾರಿ ಶಾಸಕರಾಗಿ, ಮೂರು ಬಾರಿ ಸಚಿವರಾಗಿದ್ದವರು. 2018 ಮತ್ತು 2023ರಲ್ಲಿ ಸತತ ಎರಡು ಬಾರಿ ಬಿಜೆಪಿಯ ರಾಜೇಶ್ ನಾಯ್ಕ್ ಅವರಿಂದ ಸೋಲು ಕಂಡವರು. ಈ ಮೊದಲು ನಾಗರಾಜ್ ಶೆಟ್ಟಿ ಎದುರು ಸೋತಿದ್ದರು. ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಇದು ನನ್ನ ಕೊನೆಯ ಚುನಾವಣೆ ಎಂದೇ ಹೇಳಿದ್ದರು. ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದಿದ್ದರು.

ಇದೀಗ ಮತ್ತೆ ನಿಲುವು ಬದಲಾಯಿಸಿದ ರಮಾನಾಥ ರೈ ಬಂಟ್ವಾಳದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೆ ನಾನು ಬಂಟ್ವಾಳಕ್ಕೆ ಮಾತ್ರ ಸೀಮಿತವಾಗಿದ್ದೆ, ಆದರೆ ಇನ್ನು ಪಕ್ಷ ನೀಡುವ ಎಲ್ಲ ಜವಾಬ್ದಾರಿಗಳನ್ನು ಸ್ವೀಕರಿಸುವುದಾಗಿ ಹೇಳುವ ಮೂಲಕ ಮುಂದಿನ ಲೋಕಸಭೆ ಚುನಾವಣೆಗೆ ಸ್ಪರ್ಧೆಗಿಳಿಯುವ ಕುರಿತು ಕಾದು ನೋಡಿ ಎನ್ನುವ ಮೂಲಕ ಕುತೂಹಲ ಮೂಡಿಸಿದ್ದಾರೆ.