ಸಾರ್ವಜನಿಕ ವಲಯದ ಮತ್ತಷ್ಟು ಬ್ಯಾಂಕ್ ಗಳನ್ನು ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಇದಕ್ಕಾಗಿ ಅಂತಹ ಸಾರ್ವಜನಿಕ ಬ್ಯಾಂಕ್ ಗಳ ಪಟ್ಟಿ ಮಾಡಲು ಸಮಿತಿಯೊಂದನ್ನು ಕೇಂದ್ರ ಸರಕಾರ ಸದ್ಯದಲ್ಲೇ ರಚಿಸಲಿದೆ ಎಂದು ಮೂಲಗಳು ತಿಳಿಸಿವೆ.
ಬ್ಯಾಂಕ್ ಗಳ ಸುಸ್ತಿ ಸಾಲ, ಕಾರ್ಯದಕ್ಷತೆ ಸೇರಿದಂತೆ ಹಲವು ಮಾನದಂಡಗಳನ್ನು ಆಧರಿಸಿ ಮಧ್ಯಮ ಗಾತ್ರ ಮತ್ತು ಸಣ್ಣ ಗಾತ್ರದ ಹಲವು ಸರಕಾರಿ ಬ್ಯಾಂಕ್ ಗಳನ್ನು ಖಾಸಗೀಕರಣಗೊಳಿಸಲು ಸಮಿತಿ ಶಿಫಾರಸು ಮಾಡುವ ಸಾಧ್ಯತೆ ಇದೆ. ಈ ಬ್ಯಾಂಕ್ ಗಳ ಪಾಲುದಾರಿಕೆ ಮಾರಾಟದ ಮೂಲಕ ಖಾಸಗೀಕರಣ ಮಾಡುವ ಸಾಧ್ಯತೆಯಿದೆ.
ನೀತಿ ಆಯೋಗ 2021 ರಲ್ಲೇ ಸಾರ್ವಜನಿಕ ವಲಯದ ‘ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ’ ಮತ್ತು ‘ಇಂಡಿಯನ್ ಓವರ್ ಸೀಸ್ ಬ್ಯಾಂಕ್’ ಗಳನ್ನು ಖಾಸಗೀಕರಣಗೊಳಿಸಲು ಶಿಫಾರಸು ಮಾಡಿತ್ತಾದರೂ ಈ ಸಂಬಂಧ ಯಾವುದೇ ನಿರ್ಧಾರ ಕೈಗೊಂಡಿಲ್ಲ. 2021 ರ ಬಜೆಟ್ ನಲ್ಲೇ ವಿತ್ತ ಸಚಿವ ಬ್ಯಾಂಕ್ ಗಳ ಖಾಸಗೀಕರಣದ ಬಗ್ಗೆ ಪ್ರಸ್ತಾಪಿಸಿದ್ದರು.