ಮತೀಯ ಹಿಂಸೆಗೆ ಪ್ರಚೋದಿಸುವವರನ್ನುಸರಕಾರ ಗಮನಿಸಬೇಕು. ಕೊಲೆಗಡುಕ, ಕ್ರಿಮಿನಲ್ ಗಳಿಗೆ ಸನ್ಮಾನ, ಔತಣ ಕೂಟ ಏರ್ಪಡಿಸಿದ ಸೂಲಿಬೆಲೆ

ರಾಜ್ಯ

*✍️.ಮುನೀರ್ ಕಾಟಿಪಳ್ಳ, ರಾಜ್ಯಾಧ್ಯಕ್ಷರು ಡಿವೈಎಪ್ಐ *

ಇದ್ರಿಸ್ ಪಾಷಾ ಗುಂಪು ಹತ್ಯೆ ಪ್ರಕರಣದಲ್ಲಿ ಕೊಲೆ ಸೆಕ್ಷನ್ ಅಡಿ ಬಂಧಿತರಾಗಿದ್ದ ಕುಖ್ಯಾತ ಕ್ರಿಮಿನಲ್ ಪುನಿತ್ ಕೆರೆಹಳ್ಳಿ ಹಾಗೂ ಸಂಗಡಿಗರಿಗೆ 45 ದಿನಗಳ ಒಳಗಡೆ ಜಾಮೀನು ದೊರಕಿರುವುದು ನಾಡಿನ ನೆಮ್ಮದಿ ಬಯಸುವ ಎಲ್ಲರಿಗೂ ಆಘಾತ ತಂದಿತ್ತು. ಬಿಜೆಪಿ ಸರಕಾರದ ನಾಲ್ಕು ವರ್ಷಗಳ ಅವಧಿಯಲ್ಲಿ ಸರಕಾರದ ಬೆಂಬಲದೊಂದಿಗೆ ಪುನೀತ್ ಕೆರೆಹಳ್ಳಿ ಬಳಗ ಉಂಟು‌ ಮಾಡಿದ ಅನಾಹುತ ಒಂದೆರಡಲ್ಲ. ಈಗ ಬಿಜೆಪಿ‌ ಸರಕಾರದ ಕೊನೆಯ ಕ್ಷಣಗಳಲ್ಲಿ ಕೊಲೆಗಡುಕ ಕೆರೆಹಳ್ಳಿ ಮತ್ತು ಸಂಗಡಿಗರಿಗೆ ಜಾಮೀನು ದೊರಕುವಂತೆ ಮಾಡಲಾಗಿದೆ.

ರಾಜ್ಯಾದ್ಯಂತ ಆಕ್ರೋಶ ಸೃಷ್ಟಿಸಿದ್ದ ಇದ್ರಿಸ್ ಪಾಷಾ ಕೊಲೆ ಪ್ರಕರಣದಲ್ಲಿ ಪುನೀತ್ ಕೆರೆಹಳ್ಳಿ ಬಂಧನಕ್ಕೆ ರಾಮನಗರ ಎಸ್ ಪಿ ಮೀನಾಮೇಷ ಎಣಿಸಿದ್ದರು. ಈಗ ಸುಲಭದಲ್ಲಿ ಜಾಮೀನು ದೊರಕಿದೆ. ರಾಮನಗರ ಎಸ್ ಪಿ ಮತ್ತು ತನಿಖಾಧಿಕಾರಿಯ ತೀರಾ ದುರ್ಬಲ ಎಫ್ಐಆರ್ ಹಾಗೂ ತನಿಖಾ ಪ್ರಕ್ರಿಯೆಯಿಂದಷ್ಟೇ ಹೀಗೆ ಕೊಲೆ ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಕೆ ಅವಧಿಗೆ ಮುಂಚಿತವಾಗಿ ಕೊಲೆಗಡುಕರು ಹೊರಬರಲು ಸಾಧ್ಯ.

ಇದೀಗ ಜಾಮೀನಿನಲ್ಲಿ ಬಿಡುಗಡೆಗೊಂಡಿರುವ ಕೊಲೆಗಡುಕ ಕ್ರಿಮಿನಲ್ ಗಳಿಗೆ ಬಹಿರಂಗ ಸನ್ಮಾನ, ಔತಣ ಕೂಟಗಳು ನಡೆಯತೊಡಗಿದೆ. ಮಹಾನ್ ದೇಶಭಕ್ತ ಎಂದು ಸ್ವಯಂಘೋಷಣೆ ಮಾಡಿಕೊಂಡಿರುವ “ನಮೋ ಬ್ರಿಗೇಡ್” ನ ಚಕ್ರವರ್ತಿ ಸೂಲಿಬೆಲೆ ಔತಣ ಕೂಟ ಏರ್ಪಡಿಸಿ ಅಭಿನಂದಿಸಿರುವ ಫೋಟೋಗಳನ್ನು ತನ್ನ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದಾನೆ. ಈತ ಈ ಹಿಂದೆ (ಆಗಲೂ ಕಾಂಗ್ರೆಸ್ ಸರಕಾರ ಇತ್ತು) ವಿನಾಯಕ ಬಾಳಿಗಾ ಕೊಲೆ ಪ್ರಕರಣದ ಆರೋಪಿಗೆ ಜಾಮೀನು ದೊರೆತಾಗ ಜೈಲಿನ ಬಾಗಿಲಿಗೆ ಹೋಗಿ ಸ್ವಾಗತಿಸಿದ್ದ. ತನ್ನ ಇಂತಹ ನಡೆಗಳಿಂದ ಯುವಕರನ್ನು ಮತೀಯ ಹಿಂಸೆಗೆ ಪ್ರಚೋದಿಸುವ ಕೆಲಸವನ್ನು ಯೋಜಿತವಾಗಿ ಈತ ಮಾಡುತ್ತಿದ್ದಾನೆ. ಸರಕಾರ ಇದನ್ನೆಲ್ಲ ಗಮನಿಸಬೇಕು.

ಜಾತ್ಯಾತೀತ ಶಕ್ತಿಗಳ ಒಗ್ಗಟ್ಟಿನ ಪ್ರಯತ್ನದಿಂದ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ನೇತೃತ್ವದ ಹೊಸ ಸರಕಾರ ತನ್ನ ಆದ್ಯತೆಯ ಕೆಲಸವಾಗಿ ಮತೀಯ ಗೂಂಡಾಗಿರಿಗೆ ಕಡಿವಾಣ ಹಾಕಲು ಮುಂದಾಗಬೇಕು. ಅಭದ್ರತೆ, ಅಸಹಾಯಕತೆಯಿಂದ ನರಳುತ್ತಿರುವ ಮುಸ್ಲಿಂ ಸಮುದಾಯಕ್ಕೆ ಸರಕಾರ ಅವರೊಂದಿಗೆ ನ್ಯಾಯಯುತವಾಗಿ ನಡೆದುಕೊಳ್ಳುತ್ತದೆ ಎಂಬ ಸಂದೇಶವನ್ನು ನೀಡಬೇಕು. ಅದಕ್ಕಾಗಿ ಇದ್ರೀಸ್ ಪಾಷಾ ಕೊಲೆ ಪ್ರಕರಣದ ಮರು ತನಿಖೆಗೆ ಆದೇಶ ಹೊರಡಿಸಬೇಕು. ಪಕ್ಷಪಾತದ ತನಿಖೆ ನಡೆಸಿದ ರಾಮ ನಗರ ಎಸ್ ಪಿ ಮತ್ತು ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಮತೀಯ ದ್ವೇಷದಿಂದ ಕೊಲೆಗೀಡಾಗಿ, ಬಿಜೆಪಿ ಸರಕಾರದಿಂದ ಪರಿಹಾರ ನಿರಾಕರಿಸಲ್ಪಟ್ಟು ಬಹಿರಂಗ ತಾರತಮ್ಯಕ್ಕೆ ಒಳಗಾದ ಸುರತ್ಕಲ್ ನ ಫಾಝಿಲ್, ಜಲೀಲ್, ಸುಳ್ಯದ ಮಸೂದ್ ನರಗುಂದದ ಸಮೀರ್ ಕುಟುಂಬಕ್ಕೆ ನಿಯಮ ಬದ್ದವಾಗಿ ಪರಿಹಾರ ಧನ ಒದಗಿಸಬೇಕು.

ನಾಡಿನ ಜನಪರ ಶಕ್ತಿಗಳು, ಸಾಹಿತಿ,ಬರಹಗಾರರು ಸರಕಾರವನ್ನು ಈ ಕುರಿತು ಪ್ರಬಲವಾಗಿ ಒತ್ತಾಯಿಸಬೇಕು.

✍️ಮುನೀರ್ ಕಾಟಿಪಳ್ಳ