ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರಿನಲ್ಲಿ ಹೊಸ ಹವಾ ಸೃಷ್ಟಿಸಿದ ಪುತ್ತಿಲ ಆಂಡ್ ಟೀಂ ಇದೀಗ ಮತ್ತೆ ರಂಗಕ್ಕೆ ಬಂದಿದೆ. ಕೇವಲ ಚುನಾವಣೆಗೆ ಮಾತ್ರ ಸ್ಪರ್ಧೆಯಲ್ಲ, ಹಿಂದೂಗಳ ರಕ್ಷಣೆಯ ಹೊಣೆಯನ್ನು ಹೊತ್ತುಕೊಂಡಿದೆ. ಬಿಜೆಪಿ ಪರಿವಾರಕ್ಕೆ ಸೆಡ್ಡು ಹೊಡೆದು ‘ಪುತ್ತಿಲ ಪರಿವಾರ’ ವನ್ನು ಅಸ್ತಿತ್ವಕ್ಕೆ ತಂದಿದ್ದಾರೆ.
ದರ್ಬೆಯಿಂದ ದೇವರಮಾರು ಗದ್ದೆಯವರೆಗೆ ನಡೆದ ನಮ್ಮ ನಡಿಗೆ ಮಹಾಲಿಂಗೇಶ್ವರನ ನಡೆಗೆ ಕಾಲ್ನಡಿಗೆ ಜಾಥಾದ ನಂತರ ನಡೆದ ಸೇವಾ ಸಮರ್ಪಣಾ ಸಮಾರಂಭದಲ್ಲಿ ಪುತ್ತಿಲ ಪರಿವಾರದ ಲೋಗೋ ಅನಾವರಣ ಮಾಡಲಾಯಿತು. ಆ ಮೂಲಕ ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ಮುಂದೆ ಪುತ್ತಿಲ ಹವಾ ಸದ್ದು ಮಾಡಲಿದೆ.
ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಅವರ ತಂಡದೊಂದಿಗೆ ಮುನಿಸಿಕೊಂಡಿದ್ದ ಪುತ್ತಿಲ ಈ ಬಾರಿಯ ಪುತ್ತೂರಿನ ಬಿಜೆಪಿಯ ಪ್ರಮುಖ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಅರುಣ್ ಕುಮಾರ್ ಪುತ್ತಿಲ ರಿಗೆ ಮಣೆ ಹಾಕದೆ ಯಾರೂ ನಿರೀಕ್ಷಿಸದ, ಪ್ರಚಲಿತದಲ್ಲಿ ಇಲ್ಲದ ಆಶಾ ತಿಮ್ಮಪ್ಪ ಗೌಡ ಎಂಬ ಮಹಿಳೆಯನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಿತ್ತು. ಇದರ ವಿರುದ್ಧ ಕೆಂಡಾಮಂಡಲರಾದ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಯಾರೂ ಊಹಿಸದ ರೀತಿಯಲ್ಲಿ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿ ಅಲ್ಪ ಮತಗಳ ಅಂತರದಿಂದ ಸೋತಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಈ ರೀತಿಯ ಹವಾ ಸೃಷ್ಟಿಸುವುದು ಸುಲಭದ ಮಾತಲ್ಲ. ಪುತ್ತಿಲ ಮತ್ತವರ ಕಾರ್ಯಕರ್ತರ ಸತತ ಪರಿಶ್ರಮ ದಿಂದ ಇಂತಹದ್ದೊಂದು ಹೊಸ ಮನ್ವಂತರಕ್ಕೆ ಸಾಕ್ಷಿಯಾಗಿತ್ತು.
ಪುತ್ತಿಲ ಪಕ್ಷೇತರ ರಾಗಿ ಸ್ಪರ್ಧಿಸುವ ಘೋಷಣೆ ಮಾಡಿದ್ದೇ ತಡ ಕಲ್ಲಡ್ಕ ಹೈಕಮಾಂಡ್ ಸೇರಿದಂತೆ ಹಲವಾರು ಹಿಂದೂ ನಾಯಕರು ಪುತ್ತಿಲ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದರು. ಪುತ್ತಿಲ ಹಿಂದೂ ನಾಯಕನಲ್ಲ, ಒಂದೆರಡು ಗೋವು ಹಿಡಿದಿದ್ದೇ ಸಾಧನೆ ಅನ್ನುವ ಟೀಕಾ ಪ್ರಹಾರ ಬಂದವು. ದೇವಸ್ಥಾನದ ಹುಂಡಿ ಕಳವಿನ ಆರೋಪಗಳು ಕೇಳಿ ಬಂದವು. ಬಿಜೆಪಿ ಪರಿವಾರ ಪುತ್ತಿಲ ವಿರುದ್ಧ ಪುಂಖಾನುಪುಂಖವಾಗಿ ಆರೋಪಗಳ ಸುರಿಮಳೆಗೈಯುತ್ತಿದ್ದರೂ ಧೃತಿಗೆಡದ ಪುತ್ತಿಲ ತನ್ನ ತಂಡದೊಂದಿಗೆ ಮನೆ ಮನೆಗೆ ತೆರಳಿ ಮತಯಾಚಿಸಿದರು. ಕೇವಲ 20 ದಿನಗಳಲ್ಲಿ 62000 ಮತ ಪಡೆಯುವ ಮೂಲಕ ದೊಡ್ಡ ಸಾಧನೆ ಮಾಡಿದರು. ಬಿಜೆಪಿ ಪರಿವಾರದ ಹುಟ್ಟಡಗಿಸಿದರು.
ಚುನಾವಣೆಯಲ್ಲಿ ಸೋತ ಬಿಜೆಪಿ ಪುತ್ತಿಲ ಕಾರ್ಯಕರ್ತರ ವಿರುದ್ಧ ಸೇಡು ತೀರಿಸಿಕೊಂಡಿತ್ತು. ಶ್ರದ್ಧಾಂಜಲಿ ಬ್ಯಾನರ್ ಹಾಕಿದ ಪುತ್ತಿಲ ಕಾರ್ಯಕರ್ತರ ವಿರುದ್ಧ ಪೊಲೀಸ್ ಇಲಾಖೆಯನ್ನು ಬಳಸಿ ಮೃಗೀಯ ರೀತಿಯಲ್ಲಿ ಹಿಂಸಿಸಲಾಯಿತು. ಅದು ದೊಡ್ಡ ಸುದ್ದಿಯಾಯಿತು.
ಇದೀಗ ಪುತ್ತಿಲ ಪರಿವಾರ ರಚನೆಯಾಗಿದೆ. ಕೇವಲ ಪುತ್ತೂರಿಗೆ ಸೀಮಿತವಾಗದೆ ಜಿಲ್ಲಾದ್ಯಂತ ಪುತ್ತಿಲ ಪರಿವಾರ ಕ್ರೇಜ್ ಹುಟ್ಟಿಸಿದೆ. ಹೊಸ ಇತಿಹಾಸಕ್ಕೆ ಸಾಕ್ಷಿಯಾಗುತ್ತಾ ಕಾದುನೋಡಬೇಕಿದೆ.