ಅಯೋಧ್ಯೆಯ ಬಗ್ಗೆ ಮೊಸಳೆ ಕಣ್ಣೀರು ಸುರಿಸುವವರು, ಆ ಪವಿತ್ರ ಭೂಮಿಯನ್ನು ಮುಂದಿಟ್ಟು ರಾಜಕಾರಣ ಮಾಡುವವರಿಗೆ ಇದೊಂದು ಪಾಠವಾಗಲಿ

ರಾಷ್ಟ್ರೀಯ

ಅಯೋಧ್ಯೆ ಎಂಬ ಆ ಪವಿತ್ರವಾದ ಭೂಮಿಯ ಆ ಮಣ್ಣಿನಲ್ಲಿ ವಾಸವಾಗಿರುವ ಹಿಂದೂ, ಮುಸ್ಲಿಂ ಮಾತ್ರವಲ್ಲದೆ ಅನ್ಯ ಜಾತಿಯ ಮತ ಧರ್ಮದ ವಿಶ್ವಾಸಿಗಳಿಗೆ ಅಲ್ಲಿ ಯಾವುದೇ ರೀತಿಯ ಬಿನ್ನಾಭಿಪ್ರಾಯವಾಗಲಿ,ವರ್ಗೀಯ ವಾದವಾಗಲಿ,ಮತೀಯವಾದವಾಗಲಿ, ಕಿಂಚಿತ್ತೂ ಇರುವುದಿಲ್ಲ.ಇದೆಲ್ಲವೂ ಈ ದೇಶದ ಕುಲಗೆಟ್ಟ ಕೋಮುವಾದಿ ರಾಜಕೀಯ ಪಕ್ಷಗಳ ಷಡ್ಯಂತರದಿಂದ ಅವರವರ ಲಾಭಕ್ಕಾಗಿ, ಜಾತಿ-ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ತಮ್ಮ ಸ್ವಾರ್ಥ ಸಾಧನೆಗೋಸ್ಕರ ಜಾತ್ಯಾತೀತ ರಾಷ್ಟ್ರದಲ್ಲಿ ಅರಾಜಕತೆಯನ್ನು ಸೃಷ್ಠಿಸುತ್ತಿದ್ದಾರೆ.ಇದನ್ನು ನಾವುಗಳು ಅರ್ಥಮಾಡಿಕೊಳ್ಳಬೇಕಾಗಿದೆ.

ಇತ್ತೀಚೆಗೆ ಅಯೋಧ್ಯೆಯಲ್ಲಿ ನಡೆದ ಮುನ್ಸಿಪಾಲಿಟಿಯ ಚುನಾವಣೆಯಲ್ಲಿ ಒಟ್ಟಾರೆ 60 ವಾರ್ಡ್ ಗಳಲ್ಲಿ 27 ವಾರ್ಡ್ ಗಳನ್ನು ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡರೆ, ಸಮಾಜವಾದಿ ಪಕ್ಷ 19 ಸ್ಥಾನ ಪಡೆದು,ಪಕ್ಷೇತರರಿಗೆ 10 ಸ್ಥಾನ ಲಭ್ಯವಾಗಿದೆ. ಇದರಲ್ಲೊಂದು ವಾರ್ಡಿನಲ್ಲಿ ಆಶ್ಚರ್ಯಕರವಾದ ರೀತಿಯ ಪಲಿತಾಂಶ ಬಂದಿರುತ್ತದೆ. “ರಾಮ್ ಅಭಿರಾಮ್ ದಾಸ್” ಎಂಬ ವಾರ್ಡಿನಿಂದ ಪಕ್ಷೇತರರಾಗಿ ಸ್ಪರ್ಧಿಸಿದ ಸುಲ್ತಾನ್ ಅನ್ಸಾರಿ ಎಂಬ ಹೆಸರಿನ ಮುಸ್ಲಿಂ ಅಭ್ಯರ್ಥಿ ಪ್ರಥಮ ಪ್ರಯತ್ನದಲ್ಲೇ ಜಯಗಳಿಸಿದ್ದಾನೆ. ಇಲ್ಲಿನ ವಿಶೇ಼ಷ ಏನೆಂದರೆ ಈ ವಾರ್ಡ್ “ರಾಮ ಜನ್ಮ” ಭೂಮಿಗೆ ಬೇಕಾಗಿ ತನ್ನ ಜೀವನವನ್ನೇ ಪಣವಾಗಿಟ್ಟು ಹೋರಾಟ ನಡೆಸಿದ ಒಬ್ಬ ಹಿಂದೂ ನೇತಾರ “ರಾಮ್ ಅಭಿರಾಮ್ ದಾಸ್” ಎಂಬವರ ಹೆಸರಿನಿಂದ ಗುರುತಿಸಿಕೊಂಡಿದೆ ಈ ವಾರ್ಡ್.

ಹಿಂದೂ ಬಾಂಧವರು ಅತೀ ಹೆಚ್ಚು ಸಂಖ್ಯೆಯಲ್ಲಿ ವಾಸವಾಗಿರುವ ಈ ವಾರ್ಡ್ ನಲ್ಲಿ ಸುಲ್ತಾನ್ ಅನ್ಸಾರಿಗೆ ಈ ವಾರ್ಡಿನ ಜನರೊಂದಿಗೆ ಆತ್ಮೀಯವಾದ ಸಂಬಂಧವಿದೆ.ಈ ಗೆಲುವು ಹಿಂದೂ,ಮುಸ್ಲಿಂ, ಬಾಂಧವರ ನಡುವೆ ಇರುವ ಗಾಢವಾದ ಪ್ರೀತಿ, ವಿಶ್ವಾಸ, ಐಕ್ಯತೆ, ಆತ್ಮೀಯತೆಯ ಸಂಕೇತವಾಗಿದೆ. ಅಲ್ಲದೆ ಈ ಗೆಲುವು ಎರಡೂ ವಿಭಾಗದ ಜನರು ಶಾಂತಿ, ಸೌಹಾರ್ಧತೆಯಿಂದ ಬದುಕಿ ಜೀವನ ನಡೆಸಬಹುದು ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ. ಇಲ್ಲಿನ ಹಿಂದೂ ಬಾಂಧವರಿಂದ ನನಗೆ ಚುನಾವಣೆಯಲ್ಲಿ ಯಾವುದೇ ರೀತಿಯ ತೊಂದರೆಯಾಗಿಲ್ಲ. ಮಾತ್ರವಲ್ಲದೆ ನಾನು ಒಬ್ಬ ಮುಸ್ಲಿಂ ಎಂಬ ಭೇದ-ಬಾವವನ್ನು ಅವರು ತೋರಲಿಲ್ಲ, ನನ್ನನ್ನು ಸಹೋದರತೆಯಿಂದ ಗೆಲ್ಲಿಸಿದ್ದಾರೆ. ನನ್ನ ಈ ಗೆಲುವಿನಲ್ಲಿ ಹಿಂದೂ ಸಹೋದರರ ಪಾತ್ರ ಬಹಳಷ್ಟಿದೆ. ಈ ಋಣವನ್ನು, ಪ್ರೀತಿಯ ಐಕ್ಯತೆಯನ್ನು ನಾನು ಎಂದೂ ಮರೆಯಲು ಸಾಧ್ಯವಿಲ್ಲವೆಂದು ವಿಜಯಿ ಅಭ್ಯರ್ಥಿ ಸುಲ್ತಾನ್ ಅನ್ಸಾರಿ ಹೇಳುತ್ತಾರೆ.

ಈ ವಾರ್ಡಿನಲ್ಲಿ ಮುಸ್ಲಿಮರ ಜನ ಸಂಖ್ಯೆ ಬಹಳ ಕಡಿಮೆ.ಕೇವಲ 11% ಶೇಕಡಾ ಮುಸ್ಲಿಮರ ಜನ ಸಂಖ್ಯೆಯಿದ್ದು, 440 ಮತಗಳಿವೆ. 3744 ಮತಗಳು ಹಿಂದೂ ಸಮುದಾಯಕ್ಕೆ ಸೇರಿದವರ ಮತಗಳು.ಸುಲ್ತಾನ್ ಅನ್ಸಾರಿ ಇಲ್ಲಿ 42% ಶೇಕಡಾ ಮತಗಳಿಸಿ ವಿಜಯಿಯಾಗಿದ್ದಾರೆ. ಒಟ್ಟು ಚಲಾವಣೆಯಾದ 2388 ಮತಗಳಲ್ಲಿ 966 ಮತಗಳನ್ನು ಸುಲ್ತಾನ್ ಅನ್ಸಾರಿ ಪಡಕೊಂಡು,ತನ್ನ ನಿಕಟ ಸ್ಪರ್ಧಿ ಹಿಂದೂ ಸಮುದಾಯದ ನಾಗೇಶ್ ಮಾಂಜಿಯವರನ್ನು ಸೋಲಿಸಿ,442 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 10 ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು.
ಅಯೋಧ್ಯೆ ಎಂಬ ಆ ಪವಿತ್ರವಾದ ಭೂಮಿಯನ್ನು ಮುಂದಿಟ್ಟುಕೊಂಡು ತಂತ್ರ-ಕುತಂತ್ರ ನಡೆಸುವವರು ಇನ್ನಾದರೂ ಪಾಠ ಕಲಿಯಬೇಕಾಗಿದೆ. ಮಾತ್ರವಲ್ಲದೆ ಈ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು.ಈ ವಾರ್ಡಿನಲ್ಲಿ ಬಿಜೆಪಿಯು 3ನೇ ಸ್ಥಾನಕ್ಕೆ ತಲ್ಲಲ್ಪಟ್ಟಿದೆ ಎಂಬುದನ್ನು ಮರೆಯಬಾರದು.

ಈ ವಾರ್ಡಿನಿಂದ ಸ್ಪರ್ಧಿಸುವಾಗ ನನಗೆ ಯಾವುದೇ ಅಂಜಿಕೆ, ಬೆದರಿಕೆ ಇರಲಿಲ್ಲವೆಂದು,ತನ್ನ ಹಿಂದೂ ಸಹೋದರರಲ್ಲಿ ಈ ವಾರ್ಡಿನಿಂದ ಸ್ಪರ್ಧೆ ಮಾಡುವ ಬಗ್ಗೆ ನನ್ನ ಇರಾದೆಯನ್ನು ವ್ಯಕ್ತ ಪಡಿಸಿದಾಗ ಅವರು ನನ್ನನ್ನು ಸ್ವೀಕರಿಸಿ, ನನಗೆ ಪ್ರೋತ್ಸಾಹ ನೀಡಿ, ನನ್ನ ಹೆಗಲಿಗೆ ಹೆಗಲು ಕೊಟ್ಟು ದುಡಿದು ಆಶ್ಚರ್ಯಕರವಾದ ವಿಜಯಕ್ಕೆ ಕಾರಣರಾದರು ಎಂದು ಸುಲ್ತಾನ್ ಅನ್ಸಾರಿ ಭಾವನಾತ್ಮಕವಾಗಿ ಹೇಳುವಾಗ, ಅಯೋಧ್ಯೆಯ ಪವಿತ್ರವಾದ ಭೂಮಿಯ ಬಗ್ಗೆ ಮೊಸಳೆ ಕಣ್ಣೀರು ಸುರಿಸುವವರು, ಯೋಗಿಯನ್ನು ತೋರಿಸಿ ಮತ ಬೇಟೆಯಾಡುವವರು, ರಾಜಕೀಯ ಲಾಭಕ್ಕಾಗಿ ವರ್ಗೀಯವಾದ ಸೃಷ್ಠಿಸಿ, ಅಶಾಂತಿಯನ್ನು ಮೂಡಿಸುವವರು, ಧರ್ಮದ ಹೆಸರಿನಲ್ಲಿ ದ್ವೇಷ ರಾಜಕಾರಣ ಮಾಡಿ ವಿಭಜನೆ ಮಾಡುವವರು ಇಂತಹ ಸೌಹಾರ್ಧತೆಯ ಮುಂದೆ ಮಂಡಿಯೂರಲೇಬೇಕಾಗಿದೆ.