ಕಾಂಗ್ರೆಸ್ ಹಳೆಯ ತಪ್ಪುಗಳಿಂದ ಪಾಠ ಕಲಿತಿಲ್ಲ.! ಪರಮೇಶ್ವರ್ ಅವದಿಯಲ್ಲಿ ಸಾಲು,ಸಾಲು ಮತೀಯ ದ್ವೇಷದ ಕೊಲೆಗಳು, ಹಿಂಸಾಚಾರ ನಡೆದಿದೆ: ಮುನೀರ್ ಕಾಟಿಪಳ್ಳ

ರಾಜ್ಯ

“ಕಾಂಗ್ರೆಸ್ ಈ ಅವಧಿಯಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲಿದೆ, ಹಳೆಯ ತಪ್ಪುಗಳಿಂದ ಪಾಠ ಕಲಿತಿದೆ” ಎಂಬು ನಂಬಿಕೆ ಹುಸಿಯಾಗುವಂತೆ ಸಂಪುಟ ವಿಸ್ತರಣೆ, ಖಾತೆಗಳ ಹಂಚಿಕೆ ನಡೆದಿದೆ. ಡಾ. ಜಿ ಪರಮೇಶ್ವರ್ ರಿಗೆ ಗೃಹ ಖಾತೆ ನೀಡಿದ್ದು ಯಾವ ಆಧಾರದಲ್ಲಿ !. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ಗೃಹ ಸಚಿವರಾಗಿ ಪರಮೇಶ್ವರ್ ಸಾಧನೆ ಏನು ? ಸಾಲು ಸಾಲು ಮತೀಯ ದ್ವೇಷದ ಕೊಲೆಗಳು, ಹಿಂಸಾಚಾರ ನಡೆದ ಆ ಅವಧಿಯಲ್ಲಿ ಪರಮೇಶ್ವರ್ ದಕ್ಷತೆ ಏನಿತ್ತು. ವಿನಾಯಕ ಬಾಳಿಗಾ ಕೊಲೆಯ ತನಿಖೆಯ ಸಂದರ್ಭದ ಅನುಭವಗಳು ಏನು ? ವಿರೋಧ ಪಕ್ಷವಾಗಿ ಬಿಜೆಪಿ ಸರಕಾರದ ಅವಧಿಯಲ್ಲಿ ಪರಿವಾರದ ಮತೀಯ ವಿಭಜನೆಯ ರಾಜಕಾರಣ ಎದುರಿಸಲು ಇವರ ಕೊಡುಗೆ ಏನಿತ್ತು ?

ಓರ್ವ ದಕ್ಷ, ಧೈರ್ಯಶಾಲಿ, ಸೈದ್ದಾಂತಿಕ ತಿಳುವಳಿಕೆಯುಳ್ಳ ಗೃಹ ಸಚಿವನ ನಿರೀಕ್ಷೆಯಲ್ಲಿದ್ದ ಜನಸಾಮಾನ್ಯರಿಗೆ, ಸಮಾಜದಲ್ಲಿ ಶಾಂತಿ ಬಯಸುವವರಿಗೆ ಹೊಸ ಸರಕಾರ ನಿರಾಶೆ ಉಂಟು ಮಾಡಿದೆ. ಪಾಠ ಕಲಿಯುವುದು ಕಾಂಗ್ರೆಸ್ ಗುಣ ಅಲ್ಲ ಎಂದು ಮತ್ತೊಮ್ಮೆ ಸಾಬೀತು ಪಡಿಸಲು ಹೊರಟ ಹಾಗಿದೆ. ಹಾಗಾಗದಿರಲಿ ಎಂದು ಹಾರೈಸೋಣ.

ಬಿಕೆ ಹರಿಪ್ರಸಾದ್ ಸಂಪುಟಕ್ಕೆ ಸೇರಿ ದಕ್ಷಿಣ ಕನ್ನಡಕ್ಕೆ ಉಸ್ತುವಾರಿ ಸಚಿವರಾಗಿ ಬರಲಿ ಎಂಬ ಜನಾಭಿಪ್ರಾಯ ಅಲ್ಪಸಂಖ್ಯಾತರು ಸೇರಿದಂತೆ ಕರಾವಳಿ ಭಾಗದಲ್ಲಿತ್ತು. ಅವರನ್ನು ಸಂಪುಟದಿಂದಲೇ ಹೊರಗಿಡಲಾಯಿತು.(ಕಾರಣ ನಿಗೂಢ) ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಗಾಧ ಪ್ರಮಾಣದಲ್ಲಿ ಮತ ನೀಡಿ ದೊಡ್ಡ ಬಹುಮತಕ್ಕೆ ಕಾರಣರಾದದ್ದು ಮುಸ್ಲಿಮರು. ಅವರಿಗೆ ಸಂಪುಟದಲ್ಲಿ ಸಿಕ್ಕಿದ್ದು ಎರಡು ಸ್ಥಾನ ಮಾತ್ರ. ಅದೂ ನಗಣ್ಯ ಖಾತೆಗಳು.

ಇನ್ನು, ಇದ್ರೀಸ್ ಪಾಷಾ ಕೊಲೆ ಪ್ರಕರಣದ ಮರು ತನಿಖೆ, ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ. ಬಿಜೆಪಿ ಸರಕಾರದಿಂದ ಪರಿಹಾರ ಧನ ನಿರಾಕರಿಸಲ್ಪಟ್ಟ ಫಾಝಿಲ್, ಮಸೂದ್ ಬೆಳ್ಳಾರೆ, ಜಲೀಲ್ ಕಾಟಿಪಳ್ಳ, ಸಮೀರ್ ನರಗುಂದ ಕುಟುಂಬಕ್ಕೆ ಪರಿಹಾರ ಧನ ಸಲ್ಲಿಕೆ ನಿರೀಕ್ಷಿಸವುದು ದುಬಾರಿಯಾಗಬಹುದೆ ?

ಕಾಂಗ್ರೆಸ್ ಪಕ್ಷ, ಸರಕಾರ ಸರಿಯಾದ ದಾರಿಯಲ್ಲಿ‌ ನಡೆಯಲಿ ಎಂದು ಈಗಲೂ ಹಾರೈಸುವೆ.

✍️. ಮುನೀರ್ ಕಾಟಿಪಳ್ಳ