ಕೊನೆಗೂ ಗೆದ್ದ ಸಿದ್ದರಾಮಯ್ಯ ಹಠ.. ಬಿ.ಕೆ ಹರಿಪ್ರಸಾದ್ ಗೆ ತಪ್ಪಿದ ಸಚಿವ ಸ್ಥಾನ .!

ರಾಜ್ಯ

ಮಹತ್ವದ ಬೆಳವಣಿಗೆಯೊಂದರಲ್ಲಿ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಹಿರಿಯ ಕಾಂಗ್ರೆಸ್ ನಾಯಕ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಬಿ.ಕೆ ಹರಿಪ್ರಸಾದ್ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಅನ್ನುವ ಗುಸು ಗುಸು ಕೇಳಿಬಂದಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಿಕೆ ಹರಿಪ್ರಸಾದ್ ಅವರಿಗೆ ಮಂತ್ರಿ ಸ್ಥಾನ ಫಿಕ್ಸ್ ಅನ್ನಲಾಗಿತ್ತು. ಅದರಲ್ಲೂ ಮಹತ್ವದ ಗೃಹ ಖಾತೆ ಬಿಕೆ ಹೆಗಲಿಗೆ ಬೀಳಲಿದೆ ಎಂದೇ ಹೇಳಲಾಗಿತ್ತು. ಹೈಕಮಾಂಡ್ ಮಟ್ಟದಲ್ಲಿ ಅಷ್ಟೇ ಪ್ರಬಲರಾಗಿದ್ದರು. ವಿಧಾನ ಪರಿಷತ್ ವಿಪಕ್ಷ ನಾಯಕರಾಗಿದ್ದುಕೊಂಡು ಬಿಜೆಪಿ ಸರಕಾರದ ವಿರುದ್ಧ ಗುಡುಗುವ ಮೂಲಕ ತನ್ನದೇ ಆದ ವರ್ಚಸ್ಸು ಹೊಂದಿದ್ದರು. ಇಷ್ಟೆಲ್ಲಾ ವರ್ಚಸ್ಸು ಇದ್ದರೂ ತನ್ನ ಸ್ವಕ್ಷೇತ್ರದಲ್ಲಿ ತನ್ನ ಸ್ವಂತ ಸಹೋದರ ಮಗನನ್ನೇ ಕಣಕ್ಕಿಳಿಸಿದರೂ ಗೆಲ್ಲಿಸಿ ಕೊಡಲು ಸಾಧ್ಯವಾಗಿಲ್ಲ. ತಮ್ಮದೇ ಸಮುದಾಯದ ಸಂಖ್ಯೆ ಪ್ರಬಲರಾಗಿರುವ ಕ್ಷೇತ್ರವೂ ಆಗಿತ್ತು. ಇದು ರಾಜಕೀಯವಾಗಿ ಬಿಕೆಗೆ ಸ್ವಲ್ಪ ಹಿನ್ನಡೆ ತರಿಸಿದ್ದು ಸುಳ್ಳಲ್ಲ.

ಬಿಕೆ ಸಂಪುಟಕ್ಕೆ ಸೇರ್ಪಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್ ಮಟ್ಟದಲ್ಲಿ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದರು. ಇತ್ತ ಉಪಮುಖ್ಯಮಂತ್ರಿ ಡಿಕೆಶಿ ಬಿಕೆ ಪರ ಬ್ಯಾಟ್ ಮಾಡಿದ್ದರು. ಆದರೆ ಕೊನೆಗೆ ಸಿದ್ದರಾಮಯ್ಯ ಹಠ ಗೆದ್ದಿದೆ. ಯಾವುದೇ ಪಕ್ಷ ಚುನಾವಣೆಯಲ್ಲಿ ಅಧಿಕಾರ ಲಭಿಸಿದರೆ ಇಂಚಿಂಚೂ ಮಾಹಿತಿ ಹೈಕಮಾಂಡ್ ಗೆ ಶ್ರೀಘ್ರವಾಗಿ ತಲುಪಲು ತಮ್ಮಲ್ಲಿ ಕೆಲಸ ಮಾಡಿರುವ ಒಬ್ಬರನ್ನು ಸಚಿವ ಮಾಡುವುದು ವಾಡಿಕೆ. ಅದಕ್ಕೆ ಹೈಕಮಾಂಡ್ ಕೋಟಾ ಅನ್ನುತ್ತಾರೆ. ಬಿಕೆ ಹರಿಪ್ರಸಾದ್ ಇದೇ ಕೋಟಾದ ಮೂಲಕ ಸಚಿವರಾಗುತ್ತಿದ್ದರು. ಆದರೆ ಕೊನೆಗಳಿಗೆಯಲ್ಲಿ ಸಿದ್ದರಾಮಯ್ಯ ಎಐಸಿಸಿ ಕಾರ್ಯದರ್ಶಿ ಬೋಸರಾಜು ಹೆಸರನ್ನು ಮುನ್ನೆಲೆಗೆ ತಂದ ಕಾರಣ ಬಿಕೆ ಅವಕಾಶ ವಂಚಿತರಾಗಿದ್ದಾರೆ.

ಈಡಿಗ ( ಬಿಲ್ಲವ) ಕೋಟಾದಲ್ಲಿ ಹರಿಪ್ರಸಾದ್ ಬದಲು ಮಧು ಬಂಗಾರಪ್ಪ ರವರಿಗೆ ಸಚಿವ ಸ್ಥಾನ ಒಲಿದು ಬಂದಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಜಯ ತಂದುಕೊಟ್ಟ ಹಿನ್ನೆಲೆಯಲ್ಲಿ ಹಾಗೂ ಚಲನಚಿತ್ರ ನಟ ಶಿವರಾಜ್ ಕುಮಾರ್ ಕಾಂಗ್ರೆಸ್ ಪಕ್ಷದ ಪರ ಹಲವು ಕಡೆ ಕ್ಯಾಂಪೈನ್ ನಡೆಸಿ ಪಕ್ಷಕ್ಕೆ ಲಾಭ ತಂದುಕೊಟ್ಟ ಹಿನ್ನೆಲೆಯಲ್ಲಿ ಮಧು ಬಂಗಾರಪ್ಪ ರವರಿಗೆ ಸಚಿವ ಸ್ಥಾನ ದೊರೆತಿದೆ. ಡಿಕೆಶಿ ಕ್ಯಾಂಪ್ ನಲ್ಲಿ ಮಧು ಬಂಗಾರಪ್ಪ ಗುರುತಿಸಿಕೊಂಡರು, ಬಿಕೆ ಹರಿಪ್ರಸಾದ್ ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳುವುದನ್ನು ತಪ್ಪಿಸಲು ಮಧು ಬಂಗಾರಪ್ಪ ಸೇರ್ಪಡೆಗೆ ಸಿದ್ದರಾಮಯ್ಯ ಅಸ್ತು ಅಂದಿದ್ದರು.