ಬೆಂಗಳೂರು ಜೆ.ಪಿ ನಗರದ ಪರೋಸ ಅಗರ್ವಾಲ್ ಅನ್ನುವ ಯುವಕ ಟ್ರೆಕ್ಕಿಂಗ್ ಗಾಗಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ರಾಣಿಝರಿ ಪ್ರದೇಶದ ಮೂಲಕ ಬೆಳ್ತಂಗಡಿ ಬಂಡಾಜೆ ಫಾಲ್ಸ್ ಕಡೆ ತೆರಳಿ ಟ್ರೆಕ್ಕಿಂಗ್ ಗೆ ಬಂದ ಬೆಂಗಳೂರಿನ ಯುವಕನೊಬ್ಬ ದಾರಿ ತಪ್ಪಿ ನಾಪತ್ತೆಯಾದ ಪ್ರಸಂಗ ಆದಿತ್ಯವಾರದಂದು ನಡೆದಿದ್ದು, ಈ ಪ್ರದೇಶದಲ್ಲಿ ಕೆಲವು ಕಾಲ ಆತಂಕಕ್ಕೆ ಒಳಗಾದ ಪ್ರಸಂಗವೂ ನಡೆದಿದೆ.

ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ ಪರೇಶ್ ಕಿಶಾನ್ ಲಾಲ್ ಅಗರ್ವಾಲ್ ಅನ್ನುವ 25 ರ ಯುವಕ ಟ್ರೆಕ್ಕಿಂಗ್ ಗಾಗಿ ಬಂದು ಮಿಸ್ಸಾದಾತ. ಆದಿತ್ಯವಾರ ಸಂಜೆ 6 ಗಂಟೆಗೆ ಬಂದಿದ್ದ ಈತ ಸುಮಾರು 16 ಕಿಲೋ ಮೀಟರ್ ತೆರಳಿದ್ದಾನೆ. ರಾತ್ರಿಯಾಗುತ್ತಿದ್ದಂತೆ ಕಾಡಿನಲ್ಲಿ ದಾರಿ ಕಾಣದೆ ಕಂಗಾಲಾಗಿದ್ದಾನೆ. ಮೇಲಾಗಿ ಈ ಪ್ರದೇಶ ಜನವಸತಿ ಇಲ್ಲದ ಪ್ರದೇಶ, ಅರಣ್ಯಗಳು ತುಂಬಿರುವ ಪ್ರದೇಶ. ಮೊಬೈಲ್ ನೆಟ್ವರ್ಕ್ ಸಿಗುವುದಿಲ್ಲ. ಹುಲಿ, ಆನೆಯಂತಹ ಪ್ರಾಣಿಗಳು ತಿರುಗಾಡುವ ಪ್ರದೇಶ. ಇಂತಹ ಪ್ರದೇಶಗಳಲ್ಲಿ ಸಿಲುಕಿದರೆಂದರೆ ಜೀವ ಹೋದಂತೆಯೇ. ಕೇವಲ ಮೋಜಿಗಾಗಿ ಟ್ರೆಕ್ಕಿಂಗ್ ಗಾಗಿ ಬಂದ ಯುವಕ ದಾರಿ ಕಾಣದೇ ತನ್ನ ಆಪ್ತ ಸ್ನೇಹಿತ ಚಾರ್ಮಾಡಿಯ ಹನೀಫ್ ಎಂಬಾತನಿಗೆ ತಾನು ಸಿಲುಕಿರುವ ಪ್ರದೇಶದ ಲೋಕೇಶನ್ ಕಳಿಸಿದ್ದಾನೆ. ಕೂಡಲೇ ಹನೀಫ್, ಚಾರ್ಮಾಡಿ ಭಾಗದಲ್ಲಿ ಸಮಾಜ ಸೇವೆಯ ಮೂಲಕ ಹೆಸರುವಾಸಿಯಾಗಿರುವ ಸಿನಾನ್ ಗೆ ವಿಷಯ ತಿಳಿಸುತ್ತಾನೆ. ಸಿನಾನ್ ಕೂಡಲೇ ಸನ್ನದ್ಧರಾಗಿ ತನ್ನ ಜೊತೆ ಮುಬಾಶೀರ್, ಸಂಶು, ಕಾಜೂರು ನಾಸೀರ್, ಅಶ್ರಫ್ ಜೊತೆಗೆ ಕಾಡಿನಲ್ಲಿ ಹುಡುಕಾಡಲು ಆರಂಭಿಸಿದ್ದರು. ಅದಾಗಲೇ ರಾತ್ರಿ 10 ಗಂಟೆಯಾಗಿತ್ತು. ವಿಷಯ ಪೊಲೀಸರಿಗೂ, ಅರಣ್ಯ ಇಲಾಖೆಗೂ ತಿಳಿದು ಸ್ಥಳಕ್ಕೆ ಆಗಮಿಸಿದ್ದರು. ದಟ್ಟ ಕಾಡಿನ ಪ್ರದೇಶ ಆಗಿರುವುದರಿಂದ ಪೊಲೀಸರಿಗೂ ಹುಡುಕಾಡುವ ಧೈರ್ಯ ಬರಲಿಲ್ಲ. ಬೆಳಿಗ್ಗೆ ಕಾರ್ಯಾಚರಣೆಗೆ ಇಳಿಯೋಣ ಅಂದಿದ್ದರು. ಆದರೆ ಸಿನಾನ್ ಮತ್ತವರ ತಂಡ ಪ್ರಾಣದ ಹಂಗು ತೊರೆದು ಯುವಕನನ್ನು ಬಚಾವ್ ಮಾಡಲು ಆಪರೇಷನ್ ಗೆ ಇಳಿದು ಬಿಡುತ್ತಾರೆ. ಕಲ್ಲು, ಬಂಡೆ, ಅರಣ್ಯ ದಾಟಿ ಬೆಳಿಗ್ಗೆ 4 ರ ಹೊತ್ತಿಗೆ ಮಿಸ್ಸಾಗಿದ್ದ ಪರೇಶ್ ಲಾಲ್ ನನ್ನು ಪತ್ತೆ ಹಚ್ಚುತ್ತಾರೆ. ಆ ಹೊತ್ತಿಗೆ ಆನೆ ಸೇರಿದಂತೆ ಇತರ ಪ್ರಾಣಿಗಳು ಇವರನ್ನು ಅಟ್ಟಾಡಿಸಿಕೊಂಡು ಬಂದಿತ್ತು. ಅದೆಲ್ಲದರಿಂದ ಸೇಫ್ ಆಗಿತ್ತು ತಂಡ. ಭಯದಿಂದ ಸಂಪೂರ್ಣವಾಗಿ ಪರೇಶ್ ಸುಸ್ತಾಗಿ ಬಿಟ್ಟಿದ್ದ. ಸಿನಾನ್ ಮತ್ತವರ ತಂಡ ಆತನನ್ನು ಎತ್ತಿಕೊಂಡು ಕಾಡಿನಿಂದ ಹೊರಕ್ಕೆ ತಂದು ಮಾನವೀಯತೆ ಮೆರೆಯುತ್ತಾರೆ. ಸಿನಾನ್ ಮತ್ತವರ ತಂಡದ ಮಾನವೀಯ ಕಾರ್ಯಕ್ಕೆ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ಇಡೀ ಬೆಳ್ತಂಗಡಿ ಕೊಂಡಾಡುತ್ತಿದೆ.
ಮೋಜು ಮಸ್ತಿಗಾಗಿ ಟ್ರೆಕ್ಕಿಂಗ್ ಗಾಗಿ ಹೊರಡುವ ಯುವಕರೇ ಇನ್ನಾದರೂ ಅರ್ಥ ಮಾಡಿಕೊಳ್ಳಿ. ಸ್ವಲ್ಪ ಎಡವಟ್ಟಾಗಿದ್ದರೂ ಒಂದು ಜೀವ ಹೊರಟು ಹೋಗುತ್ತಿತ್ತು.
ಸಮಾಜ ಸೇವಕ ಸಿನಾನ್ ಚಾರ್ಮಾಡಿ ಆಸುಪಾಸಿನಲ್ಲಿ ರಸ್ತೆ ಅಪಘಾತ, ಇನ್ನಿತರ ಅವಘದ ಸಂಭವಿಸಿದಾಗ ಮೊದಲು ಸ್ಥಳಕ್ಕೆ ಬರುತ್ತಿದ್ದ ವ್ಯಕ್ತಿ. ಇದೀಗ ಅವರ ತಂಡ ಪ್ರಾಣದ ಹಂಗು ತೊರೆದು ಯುವಕನೊಬ್ಬನನ್ನು ರಕ್ಷಿಸಿದ್ದು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಇದೀಗ ಯುವಕನನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆತಂದು ಬಾಳೂರು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.