ಕರಾವಳಿ ಈ ಬಾರಿ ಬಿಜೆಪಿಯನ್ನು ಕೈ ಹಿಡಿದು ಬೂಸ್ಟ್ ನೀಡಿರುವ ಪ್ರದೇಶ. ಇಲ್ಲವಾದರೆ ಬಿಜೆಪಿ ವಿರೋಧ ಪಕ್ಷ ಅಪಪ್ರಚಾರ ಮಾಡಿದಂತೆ 40 ಸ್ಥಾನಗಳಿಗೆ ಬಂದು ನಿಲ್ಲುತ್ತಿತ್ತು. ಇಡೀ ಕರಾವಳಿ ಗೆದ್ದರೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಿಗೆ ತನ್ನ ಸ್ವಕ್ಷೇತ್ರ ಪುತ್ತೂರನ್ನು ಗೆಲ್ಲಿಸಿಕೊಡಲು ಸಾಧ್ಯವಾಗಿಲ್ಲ. ಇದು ಕಟೀಲು ರಿಗೆ ಹೈಕಮಾಂಡ್ ಮಟ್ಟದಲ್ಲಿ ತೀವ್ರ ಹಿನ್ನಡೆಯನ್ನು ತಂದುಕೊಟ್ಟಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಸದಾ ಅದೃಷ್ಟದಿಂದ ರಾಜಕೀಯ ಸ್ಥಾನಮಾನ ಪಡೆಯುತ್ತಿದ್ದ ಕಟೀಲು , ಕರಾವಳಿಯಲ್ಲಿ ಎಷ್ಟೇ ಟ್ರೋಲ್ ಆದರೂ ಮೂರು ಬಾರಿ ಭಾರೀ ಅಂತರದಿಂದ ಗೆದ್ದು ಬಂದು ಎಂ.ಪಿಯಾದರು. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಹಲವು ಉಪಚುನಾವಣೆಗಳು ಗೆದ್ದ ಪರಿಣಾಮ ಸ್ಥಾನ ಭದ್ರಪಡಿಸಿದರು. ಈ ಬಾರಿ ಒಂದೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದರೆ ಎಲ್ಲರನ್ನೂ ಬದಿಗೆ ಸರಿಸಿ ಕಟೀಲು ಮುಖ್ಯಮಂತ್ರಿ ಅಭ್ಯರ್ಥಿ ಕೂಡ ಆಗುತ್ತಿದ್ದರು. ಆದರೆ ರಾಜಕಾರಣದಲ್ಲಿ ಎಲ್ಲ ಸಂದರ್ಭಗಳಲ್ಲೂ ಅದೃಷ್ಟ ಕೈ ಹಿಡಿಯುವುದಿಲ್ಲ ಎಂಬುದಕ್ಕೆ ಈ ಬಾರಿಯೇ ಸಾಕ್ಷಿ. ಕರಾವಳಿಯಲ್ಲಿ ನಳಿನ್ ಪ್ರಬಲರಾಗಿ ಇರುವಾಗಲೇ ಬಿಜೆಪಿಯಲ್ಲಿ ನ ಒಂದು ಗುಂಪು ಟಕ್ಕರ್ ಕೊಡಲು ಪುತ್ತಿಲ ರನ್ನು ಮುನ್ನೆಲೆಗೆ ತರಲಾಗಿದೆ. ಪುತ್ತಿಲ ಕೌಂಟರ್ ಎದುರು ಇದೀಗ ಕಟೀಲು ಮಂಕಾದಂತೆ ಕಾಣುತ್ತಿದೆ. ಕರಾವಳಿಯ ಗಲ್ಲಿ ಗಲ್ಲಿಗೂ ತೆರಳಿದರೂ ಎಲ್ಲೆಡೆ ಕಟೀಲು ಭಾವಚಿತ್ರ ಮಾಯವಾಗಿ ಪುತ್ತಿಲರದ್ದೇ ಕಾಣಸಿಗುತ್ತದೆ. ಇತ್ತ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿ ಮುಂದೆಯೇ ಆಳೆತ್ತರದ ‘ಲೋಕಸಭೆಗೆ ಪುತ್ತಿಲ’ ಬ್ಯಾನರ್ ಎದ್ದು ನಿಂತಿದ್ದು, ಅರೆ ಕ್ಷಣದ ಹೊತ್ತಲ್ಲೇ 150ಕ್ಕೂ ಅಧಿಕ ವಾಟ್ಸ್ಯಾಪ್ ಗ್ರೂಪ್ ಸೃಷ್ಟಿಯಾಗಿ ಕಾರ್ಯಕರ್ತರ ಪಡೆ ರಚನೆಯಾಗಿರುವುದು ಕೂಡ ಪುತ್ತಿಲ ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟಿಸಿದೆ. ಕಟೀಲು ಕನಸಿಗೆ ತಣ್ಣೀರು ಎರಚಿದೆ.

ಈ ಮಧ್ಯೆ, ಈ ಬಾರಿ ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ನಿರಾಕರಿಸುವ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ನಾಲ್ಕನೇ ಬಾರಿ ಕಟೀಲಿಗೆ ಟಿಕೆಟ್ ಕೊಟ್ಟರೆ ಪುತ್ತೂರು ವಿಧಾನಸಭೆಯ ಫಲಿತಾಂಶ ಮಂಗಳೂರು ಲೋಕಸಭೆಯಲ್ಲೂ ಮರುಕಳಿಸಬಹುದು ಎಂಬ ಆತಂಕ ದೆಹಲಿ ನಾಯಕರಲ್ಲಿ ಮೂಡಿಸಿದೆ.ಈ ಹಿನ್ನೆಲೆಯಲ್ಲಿ ಪ್ರಭಾವಿ ಯುವ ನಾಯಕರೊಬ್ಬರ ಹುಡುಕಾಟವನ್ನು ಆಂತರಿಕವಾಗಿ ನಡೆಸಲಾಗಿದ್ದು ಆಗ ಧುತ್ತೆಂದು ಕಣ್ಣಿಗೆ ಬಿದ್ದವರು ಕ್ಯಾಪ್ಟನ್ ಬೃಜೇಶ್ ಚೌಟ.ಮಂಗಳೂರು ಕಂಬಳದ ಮೂಲಕ ಜಿಲ್ಲೆಯಲ್ಲಿ ಮನೆ ಮಾತಾಗಿರುವ ಕ್ಯಾ. ಬೃಜೇಶ್ ಚೌಟ ಪಾದರಸದಂತಹ ವ್ಯಕ್ತಿತ್ವದ ರಾಷ್ಟ್ರೀಯವಾದಿ ನಾಯಕ. ಮೃಧು ಭಾಷಿ, ಸಂಘಟನಾ ಚತುರ. ಎಂಥವರನ್ನೂ ಸೆಳೆಯುವ ಯುವ ನಾಯಕತ್ವ ಅವರದ್ದು.
ಇಲ್ಲಿಯವರೆಗೆ ಯಾವುದೇ ಕಪ್ಪು ಚುಕ್ಕೆ ಇಲ್ಲದ ಬೃಜೇಶ್ ರಾಷ್ಟ್ರೀಯ ನಾಯಕರ ಗಮನ ಸೆಳೆದಿರುವುದು ಹೇಗೆ ಎನ್ನುವ ಕುತೂಹಲ ಇದ್ದದ್ದೇ… ಬಿಜೆಪಿಯ ರಾಜ್ಯಸಭಾ ಸದಸ್ಯ ಹಾಗೂ ಮಾಹಿತಿ ಹಾಗೂ ತಂತ್ರಜ್ಙಾನ ಸಚಿವ ರಾಜೀವ್ ಚಂದ್ರಶೇಖರ್ ಅವರ ಆತ್ಮೀಯ ಒಡನಾಟ ಹೊಂದಿರುವ ಬೃಜೇಶ್ ಚೌಟ, ನಿರಾಯಾಸವಾಗಿ ರಾಷ್ಟ್ರೀಯ ಮಟ್ಟದ ನಾಯಕರ ನೀಲಿ ಕಣ್ಣಿನ ಹುಡುಗನಾಗಿ ಕಂಗೊಳಿಸಿದ್ದಾರೆ. ಇದುವರೆಗೆ ನಡೆದಿರುವ ಬೆಳವಣಿಗೆಗಳು ಮತ್ತು ಸಾಧ್ಯತೆಗಳನ್ನು ನೋಡಿದಾಗ, ಬೃಜೇಶ್ ಚೌಟ ಅವರನ್ನೇ ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯನ್ನಾಗಿ ಹೆಸರಿಸುವ ಸಾಧ್ಯತೆ ಇದೆ. ಇತ್ತ ಕಾಂತಾರ ಹೀರೋ ರಿಷಬ್ ಶೆಟ್ಟಿಯನ್ನು ಲೋಕಸಭೆ ಅಭ್ಯರ್ಥಿಯಾಗಿ ನಿಲ್ಲಿಸುವ ಪ್ರಯತ್ನವೂ ಬಿಜೆಪಿಯ ಮತ್ತೊಂದು ಕಡೆಯಿಂದಲೂ ನಡೆಯುತ್ತಿದೆ. ಪುತ್ತಿಲ-ಕಟೀಲು ಸೈಡಿಗೆ ಹೋಗಿ ಚೌಟ ಮುಂದಿನ ದಿನಗಳಲ್ಲಿ ರಾರಾಜಿಸುವ ಎಲ್ಲಾ ಸಾಧ್ಯತೆಗಳೂ ಇವೆ ಅನ್ನುವುದು ಬಿಜೆಪಿ ವಲಯಗಳಿಂದ ಕೇಳಿ ಬರುತ್ತಿದೆ.