ರಾಜ ರಸ್ತೆಯಲ್ಲೇ “ರಾಶಿ,ರಾಶಿ ಕಸ,ಬೀರುತ್ತಿದೆ ಗಬ್ಬು ನಾತ” ಸಮಸ್ಯೆಗೆ ಸ್ಪಂದಿಸದ ಗಂಜಿಮಠ ಗ್ರಾಮ ಪಂಚಾಯತ್ ಅಧಿಕಾರಿಗಳು.!!

ಕರಾವಳಿ

ಕೈಕಂಬ: ಕೈಕಂಬದಿಂದ ಮರ್ಕಝ್ ನಗರಕ್ಕೆ ಹೋಗುವ ರಾಜ ರಸ್ತೆಯ ಪಕ್ಕದಲ್ಲೇ ಪ್ಲಾಸ್ಟಿಕ್, ಮನೆ ಕಸ, ಹೋಟೆಲ್ ತ್ಯಾಜ್ಯ ಸೇರಿದಂತೆ ವಿವಿಧ ರೀತಿಯ ಕಸಗಳ ರಾಶಿ ಬಿದ್ದು ದುರ್ವಾಸನೆ ಬೀರುತ್ತಿರುವ ಸಮಸ್ಯೆಯಿಂದ ಪರಿಸರದ ನಿವಾಸಿಗಳಿಗೆ ಬಹಳ ತೊಂದರೆಯಾಗುತ್ತಿದೆ.ಸಾರ್ವಜನಿಕರು ನಡೆದಾಡುವ ದಾರಿಯ ಪರಿಸ್ಥಿತಿಯೇ ಹೀಗಾದರೆ ಹೇಗೆ.? ಹಲವು ಸಮಯಗಳಿಂದ ಕಸ ವಿಲೇವಾರಿ ಮಾಡಿಲ್ಲ. ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಿದೆ. ವಾಹನ ಸವಾರರಿಗೆ ಅಸಹ್ಯವಾಗಿ ಕಾಣುತ್ತಿದೆ. ಇದರ ಬಗ್ಗೆ ಗಂಜಿಮಠ ಗ್ರಾಮ ಪಂಚಾಯತಿನ ಸಂಬಂಧ ಪಟ್ಟ ಅಧಿಕಾರಿಗಳಲ್ಲಿ ಎಷ್ಟು ಸಲ ಹೇಳಿದ್ರು,ಈ ಸಮಸ್ಯೆಗೆ ಸ್ಪಂದನೆ ಸಿಗ್ತಾ ಇಲ್ಲ ಎನ್ನುವುದು ಸ್ಥಳೀಯರ ಅಳಲು.ಇದರ ಬಗ್ಗೆ ಯಾರು ಗಮನ ಹರಿಸಿಲ್ಲ ಎಂದು ಅಸಮಾಧಾನ ತೋರಿದ್ದಾರೆ.

ಕೈಕಂಬ-ಮಳಲಿ ರಸ್ತೆಯ ನಡುವೆ ಇರುವ ಅಸ್ರಾರ್ ನಗರ,ಮರ್ಕಝ್ ನಗರ ಈ ಪ್ರದೇಶದ ಬಳಿ ಇಂತಹ ಸಮಸ್ಯೆ ಎದುರಾಗಿದೆ.ಬೇಡದ ಕಸಗಳನ್ನು ರಾತ್ರಿ ಹೊತ್ತು ಬೈಕುಗಳಲ್ಲಿ,ಅಟೋ ರಿಕ್ಷಾಗಳಲ್ಲಿ ತಂದು ಇಲ್ಲಿ ಸುರಿದು ಹೋಗುತ್ತಿದ್ದಾರೆ.ಈ ದಾರಿಯಲ್ಲಿ ಸಂಚರಿಸುವ ದಾರಿ ಹೋಕರಿಗೆ ಮೂಗು ಮುಚ್ಚಿ ಕೊಂಡು ಹೋಗುವ ಪರಿಸ್ಥಿತಿ ಬಂದಿರುತ್ತದೆ.ಪಕ್ಕದಲ್ಲೇ ಅಂಗನವಾಡಿ ಕೇಂದ್ರವಿದ್ದು ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಹೆದರಿಕೆಯಾಗುತ್ತಿದೆ. ಕಾರಣ ಈ ತ್ಯಾಜ್ಯಗಳನ್ನು ತಿಂದು ಕೊಬ್ಬಿದ ಬೀದಿ ನಾಯಿಗಳು ಯಾವ ಸಮಯದಲ್ಲಿ ಪಾದಾಚಾರಿಗಳ, ಶಾಲಾ ಮಕ್ಕಳ ಮೇಲೆ,ಮಹಿಳೆಯರ ಮೇಲೆ ಯಾವ ಸಮಯದಲ್ಲೂ ದಾಳಿ ನಡೆಸುವ ಸಾಧ್ಯತೆ ಇದೆ.ಆದರೂ ಪಂಚಾಯತ್ ಅಧಿಕಾರಿಗಳ ಈ ನಿರ್ಲಕ್ಷಕ್ಕೆ ಕಾರಣವಾದರೂ ಏನೂ.? ಇಂತಹ ಸಮಸ್ಯೆಗಳನ್ನು ಗಮನಕ್ಕೆ ತಂದರೂ ಕ್ರಮ ತೆಗೆದುಕೊಳ್ಳುವುದಿಲ್ಲ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳು ಇದ್ದರೆಷ್ಟು ಬಿಟ್ಟರೆಷ್ಟು.! ಇಲ್ಲಿನ ಅಧಿಕಾರಿ ಕುರುಡು ಕಾಂಚಣದ ಬೆನ್ನು ಬಿದ್ದಿದ್ದಾರೆ.ಅನಾಧಿಕೃತ ಸಮುಚ್ಚಾಯಕ್ಕೆ, ಪರವಾನಿಗೆ, ಅಕ್ರಮವನ್ನು ಸಕ್ರಮ ಮಾಡುವುದರಲ್ಲಿ ಎತ್ತಿದ ಕೈ ಎಂಬ ಅಪವಾದವಿದ್ದು, ಜನರ ಸಮಸ್ಯೆಯ ಕಡೆಗೆ ಗಮನ ಹರಿಸುತ್ತಿಲ್ಲವೆಂದು,ಬೆಳ್ತಂಗಡಿಯಲ್ಲಿ ನಿರ್ಮಾಣ ಹಂತದಲ್ಲಿರುವ ತನ್ನ ಬೇನಾಮಿ ಕಟ್ಟಡದ ವ್ಯವಹಾರದಲ್ಲಿ ಬ್ಯೂಸಿಯಾಗಿದ್ದಾರೆ ಎಂದು ಸಾರ್ವಜನಿಕರು ಹೇಳಿಕೊಳ್ಳುತ್ತಿದ್ದಾರೆ.

ಸದ್ಯ ಎಲ್ಲಾ ಕಡೆಯಲ್ಲೂ ರಸ್ತೆ ಬದಿಯಲ್ಲಿ ಕಸ ಎಸೆಯುವ ಪ್ರಕರಣಗಳು ಹೆಚ್ಚಾಗುತ್ತಿವೆ. ಸಂಬಂಧಪಟ್ಟವರು ಅಂಥವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕಾಗಿದೆ.ಅಧಿಕಾರಿಗಳು ಸ್ವಚ್ಛತೆ ಬಗ್ಗೆ ಇನ್ನಷ್ಟು ಗಮನ ಹರಿಸಬೇಕಾಗಿದೆ. ತ್ಯಾಜ್ಯದ ರಾಶಿ ದುರ್ವಾಸನೆ ಬೀರುತ್ತಿದ್ದರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗಮನ ಹರಿಸಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಇಲ್ಲಿನ ಪರಿಸರದ ನಿವಾಸಿಗಳು.ಅಧಿಕಾರಿಗಳು ಗಮನ ಹರಿಸಿ ಶೀಘ್ರವೇ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕಾಗಿದೆ.ಇಲ್ಲದಿದ್ದಲ್ಲಿ ಇಲ್ಲಿನ ಕಸಗಳನ್ನು ಪಂಚಾಯತ್ ಕಛೇರಿ ಮುಂದೆ ಸುರಿದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ ಇಲ್ಲಿನ ಪರಿಸರದ ನಿವಾಸಿಗಳು.