ಸಂವಿಧಾನದ ಆರ್ಟಿಕಲ್ 30 ಮತ್ತು 30A ಯನ್ನು ರದ್ದು ಮಾಡುವ ಮೂಲಕ ಮೋದೀಜಿ ಇನ್ನೊಂದು ಪೆಟ್ಟು ನೀಡಲಿದ್ದಾರೆ. ದ್ವೇಷ ಎನ್ನುವುದು ತನ್ನನ್ನು ತಾನೇ ಸುಟ್ಟುಕೊಳ್ಳುತ್ತದೆ.

ರಾಷ್ಟ್ರೀಯ

✍️. ನವೀನ್ ಸೂರಿಂಜೆ

“ಸಂವಿಧಾನದ ಆರ್ಟಿಕಲ್ 30 ಮತ್ತು 30A ಯನ್ನು ರದ್ದು ಮಾಡುವ ಮೂಲಕ ಮೋದೀಜಿಯವರು ಇನ್ನೊಂದು ಪೆಟ್ಟು ನೀಡಲಿದ್ದಾರೆ. ನೆಹರೂ ಹಿಂದೂಗಳಿಗೆ ಮಾಡಿದ್ದ ಅನ್ಯಾಯವನ್ನು ಮೋದಿ ಸರಿಪಡಿಸಲಿದ್ದಾರೆ” ಎಂದು ಸಂದೇಶವೊಂದು ಹರಿದಾಡುತ್ತಿದೆ. ಆರ್ಟಿಕಲ್ 30 ಮತ್ತು 30A ಪ್ರಕಾರ ಶಾಲೆಗಳಲ್ಲಿ ಭಗವದ್ಗೀತೆ ಬೋಧಿಸುವಂತಿಲ್ಲ. ಆದರೆ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮವನ್ನು ಬೋಧಿಸಬಹುದು ಎಂದು ಈ ಆರ್ಟಿಕಲ್ ಹೇಳುತ್ತದೆ ಎಂದು ಈ ಸಂದೇಶದಲ್ಲಿ ಬರೆಯಲಾಗಿದೆ.

ಮೊದಲನೆಯದಾಗಿ, ಸಂವಿಧಾನದ ಆರ್ಟಿಕಲ್ 30 ಎಲ್ಲೂ ಭಗವದ್ಗೀತೆ, ಹಿಂದೂ ಧರ್ಮ, ಮುಸ್ಲಿಂ ಧರ್ಮದ ಬಗ್ಗೆ ಹೇಳುವುದಿಲ್ಲ. ಆರ್ಟಿಕಲ್ 30, 30(1), 30(1A), 30(2) ಹೇಳುವ ಸಾರಾಂಶವೇನೆಂದರೆ “ಭಾಷಾ, ಧಾರ್ಮಿಕ ಅಲ್ಪಸಂಖ್ಯಾತರು ತನ್ನ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಬಹುದು. ಹಾಗೆ ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳ ಬಗ್ಗೆ ಭಾಷೆ ಮತ್ತು ಧರ್ಮದ ಕಾರಣಕ್ಕಾಗಿ ರಾಜ್ಯ ಸರ್ಕಾರಗಳು ತಾರತಮ್ಯ ಮಾಡತಕ್ಕದ್ದಲ್ಲ” ಎಂದು ಹೇಳುತ್ತದೆ.

ಅಲ್ಪಸಂಖ್ಯಾತ ಕೋಟಾದ ಶಾಲೆಗಳು ಎಂದರೆ ಮುಸ್ಲೀಮರು ಮತ್ತು ಕ್ರಿಶ್ಚಿಯನ್ನರ ಶಾಲೆಗಳು ಎಂದು ಹಿಂದುತ್ವವಾದಿಗಳು ಭಾವಿಸಿ ಇಂತದ್ದೊಂದು ಧ್ವೇಷದ ಸಂದೇಶ ಹರಡುತ್ತಿದ್ದಾರೆ. ವಾಸ್ತವವಾಗಿ ಈ ಕಾಯ್ದೆಯ ಲಾಭ ಪಡೆಯುತ್ತಿರುವುದು ಬಹುಸಂಖ್ಯಾತ ಹಿಂದೂಗಳು ಮತ್ತು ಅಲ್ಪಸಂಖ್ಯಾತ ಜೈನರು. ಕರ್ನಾಟಕದಲ್ಲಿ ಅಪ್ರೂವ್ಡ್ ಆಗಿರುವ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಪಟ್ಟಿಯನ್ನು ನೋಡಿದರೆ ಅದರಲ್ಲಿ ಮುಸ್ಲೀಮರ ಶಿಕ್ಷಣ ಸಂಸ್ಥೆಗಳನ್ನು ಹುಡುಕಬೇಕಾಗುತ್ತದೆ.

ಹಿಂದುತ್ವವಾದಿಗಳು ಹರಡುವ ಸಂದೇಶದಂತೆ ಆರ್ಟಿಕಲ್ 30 ಮತ್ತು ಅದರ ಸಂಬಂಧಿಸಿದ ಖಂಡಗಳನ್ನು ಮೋದಿಯವರು ರದ್ದು ಗೊಳಿಸಿದರೆ ಮಂಗಳೂರಿನ ಹಿಂದುತ್ವವಾದಿಗಳ ಹಲವು ಶಿಕ್ಷಣ ಸಂಸ್ಥೆಗಳು ತೊಂದರೆಗೆ ಒಳಗಾಗಲಿದೆ. ಧರ್ಮಸ್ಥಳದ ಎಸ್ ಡಿಎಂ, ಬಾಹುಬಲಿ ಎಜುಕೇಶನ್ ಟ್ರಸ್ಟ್ ಸೇರಿದಂತೆ ಜೈನರ ಎಷ್ಟು ಶಿಕ್ಷಣ ಸಂಸ್ಥೆಗಳು ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ಕೋಟಾದಲ್ಲಿ ನೊಂದಣಿಯಾಗಿದೆ ಗೊತ್ತಾ ? ಟಿಎಂಎ ಪೈ ಪಾಲಿಟೆಕ್ನಿಕ್ ಎಂಬ ಜಿಎಸ್ ಬಿ ಬ್ರಾಹ್ಮಣರ ಆಡಳಿತದ ಕಾಲೇಜು ಕೂಡಾ ಭಾಷಾ ಅಲ್ಪಸಂಖ್ಯಾತ ಕೋಟದಲ್ಲಿ ಹಲವು ಕಾಲೇಜುಗಳನ್ನು ರಿಜಿಸ್ಟರ್ ಮಾಡಿಕೊಂಡಿದೆ. ಹಲವು ಹಿಂದೂ ಸಮಾಜೋತ್ಸವಗಳ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿನಯ್ ಹೆಗ್ಡೆಯ ನಿಟ್ಟೆ ಸೇರಿದಂತೆ ಹತ್ತಾರು ಕಾಲೇಜುಗಳು ತುಳು ಭಾಷಾ ಅಲ್ಪಸಂಖ್ಯಾತ ಕೋಟಾದಲ್ಲಿ ರಿಜಿಸ್ಟರ್ ಆಗಿ ಆರ್ಟಿಕಲ್ 30ಯ ಭರಪೂರ ಲಾಭ ಪಡೆಯುತ್ತಿದೆ.

ಸಂವಿದಾನದ ಆರ್ಟಿಕಲ್ 30, 30(1), 30(1A), 30(2)ಯನ್ನು ರದ್ದುಗೊಳಿಸಿದರೆ ಮುಸ್ಲೀಮರಿಗಿಂತ ಹೆಚ್ಚು ನಷ್ಟಗೊಳ್ಳುವುದು ಹಿಂದೂ ಶಿಕ್ಷಣ ವ್ಯಾಪಾರಿಗಳು. ಇಷ್ಟಕ್ಕೂ ಹಿಂದೂವಿರಲಿ, ಮುಸ್ಲೀಮರನಿರಲಿ, ಶಾಲೆಯೊಂದು ಮುಚ್ಚಿದರೆ ಸಂಭ್ರಮಪಡುವವನು ಮನುಷ್ಯನಂತೂ ಅಲ್ಲ.

ದ್ವೇಷ ಎನ್ನುವುದು ತನ್ನನ್ನು ತಾನೇ ಸುಟ್ಟುಕೊಳ್ಳುತ್ತದೆ.

  • ನವೀನ್ ಸೂರಿಂಜೆ