ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಳಲಿ ಕ್ರಾಸ್ ಎದುರುಗಡೆ ಇರುವ ಝಾರಾ ಕಲ್ಯಾಣ ಮಂಟಪದ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಜನ ತೊಂದರೆ ಪಡುತ್ತಿದ್ದಾರೆ. ಮಾತ್ರವಲ್ಲದೆ ರೋಗ ಹರಡುವ ಸಾಧ್ಯತೆ ಇರುವ ಬಗ್ಗೆ ಜನ ಆತಂಕ ವ್ಯಕ್ತಪಡಿಸಿದ್ದಾರೆ.
ಝಾರಾ ಕನ್ವೆನ್ಷನ್ ಹಾಲ್ ಇದರ ಮುಂಭಾಗದ ರಸ್ತೆಯಲ್ಲಿ ತ್ಯಾಜ್ಯದಿಂದ ತುಂಬಿದ ಕೊಳಚೆ ನೀರು ಸರಾಗವಾಗಿ ರಸ್ತೆಯ ಮೇಲೆ ಹರಿಯುತ್ತಿದೆ. ಕೊಳಚೆ ನೀರು ದುರ್ವಾಸನೆ ಬೀರುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಆದರೆ ಗಂಜಿಮಠ ಗ್ರಾಮ ಪಂಚಾಯತ್ ಅಧಿಕಾರಿಗಳು ಇತ್ತ ಗಮನಹರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ಝಾರಾ ಮದುವೆ ಮಂಟಪದಲ್ಲಿ ಉಪಯೋಗಿಸಿದ ನೀರನ್ನು ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ರಸ್ತೆಗೆ ಬಿಡುತ್ತಿದ್ದು, ಇದರ ತ್ಯಾಜ್ಯದಿಂದ ಕೂಡಿದ ಕೊಳಚೆ ನೀರು ರಸ್ತೆಯಲ್ಲೇ ಹರಿಯುತ್ತಿರುವುದರಿಂದ ಕಿರಿಕಿರಿಯಾಗುತ್ತಿದ್ದು, ವಾಹನ ಸವಾರರು ಬೇರೆ ಮಾರ್ಗವಿಲ್ಲದೇ ಕೊಳಚೆ ನೀರಿನ ಮೇಲೆಯೇ ಓಡಾಡುವಂತಾಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದ್ದು, ಇನ್ನಷ್ಟು ಆರೋಗ್ಯದ ಸಮಸ್ಯೆಗೆ ಕಾರಣವಾಗುವ ಸಾಧ್ಯತೆಗಳ ಬಗ್ಗೆ ಜನ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕಲ್ಯಾಣ ಮಂಟಪದ ಶೌಚಾಲಯದ ಗಲೀಜು ನೀರನ್ನು ಸಾರ್ವಜನಿಕ ರಸ್ತೆಗೆ ಹರಿದು ಬಿಡುತ್ತಿದ್ದು, ರಸ್ತೆ ಪಕ್ಕದಲ್ಲಿರುವ ಗುಂಡಿಗಳಲ್ಲಿ ಈ ತ್ಯಾಜ್ಯದ ನೀರು ತುಂಬಿ ಸೊಳ್ಳೆ ಉತ್ಪತ್ತಿಯಾಗಿ ಪರಿಸರದಲ್ಲಿ ಮಲೇರಿಯಾ, ಡೆಂಗ್ಯೂಗಳಂತಾಹ ಮಾರಕ ರೋಗ ಬರುವ ಸಾಧ್ಯತೆ ಇದೆ. ಈ ಮಾಲಿನ್ಯವಾದ ಗಲೀಜು ನೀರು ಹರಿದು ಹೋಗಿ ಪಕ್ಕದಲ್ಲೆ ಇರುವ ಪಂಚಾಯತ್ ಗೆ ಸಂಬಂಧ ಪಟ್ಟ ಸಾರ್ವಜನಿಕರು ಕುಡಿಯುವ ನೀರಿನ ಕೊಳವೆ ಬಾವಿಗೆ ಸೇರುವ ಸಾಧ್ಯತೆ ಬಹಳ ಇದೆ. ಈ ಪರಿಸರದ ನಿವಾಸಿಗಳು ಸೂಳ್ಳೆಕಾಟದಿಂದ ಕಂಗಾಲಾಗಿದ್ದಾರೆ. ಪರಿಸರದ ತೋಡುಗಳಲ್ಲಿ, ಹೊಂಡಗಳಲ್ಲಿ ನೀರು ನಿಂತು ಪಾಚಿ ಕಟ್ಟಿರುತ್ತದೆ. ಸದ್ರಿ ಸಮ್ಮುಚಾಯಕ್ಕೆ stp ವ್ಯವಸ್ಥೆ ಇರುವುದಿಲ್ಲ. ಸದ್ರಿ ಸಮ್ಮುಚಾಯದ ಅವ್ಯವಸ್ಥೆಯಿಂದ ಪರಿಸರದ ನಿವಾಸಿಗಳಿಗೆ ಬಹಳ ತೊಂದರೆಯಾಗುತ್ತಿದೆ. ಈ ಬಗ್ಗೆ ಹಲವಾರು ಬಾರಿ ಸಂಬಂದ ಪಟ್ಟ ಇಲಾಖೆಗೆ,ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಎಂದು ನಾಗರಿಕರು ತಮ್ಮ ಅಹವಾಲು ಹೇಳಿ ಕೊಂಡಿದ್ದಾರೆ.

ಝರಾ ಕಲ್ಯಾಣ ಮಂಟಪ ಗ್ರಾಹಕರಿಂದ ದುಬಾರಿ ಬೆಲೆಯ ಬಾಡಿಗೆ ಪಡೆಯುತ್ತಿದ್ದು, ಮೂಲಭೂತ ಸೌಕರ್ಯ, ಶುಚಿತ್ವಕ್ಕೆ ಗಮನ ಕೊಡದೆ ಇರುವುದು ವಿಪರ್ಯಾಸ ಎಂದೇ ಹೇಳಬೇಕು. ಆದುದರಿಂದ ಸಂಬಂಧ ಪಟ್ಟವರು ಕೂಡಲೇ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಸೂಕ್ತ ರೀತಿಯ ಕ್ರಮ ಕೈಗೊಳ್ಳಬೇಕಾಗಿದೆ.