ಅನೈತಿಕ ಪೊಲೀಸ್ ಗಿರಿ ತಡೆಗೆ ಮಂಗಳೂರು ನಗರದಲ್ಲಿ ಆ್ಯಂಟಿ ಕಮ್ಯುನಲ್‌ ವಿಂಗ್: ಗೃಹ ಸಚಿವ ಡಾ.ಜಿ ಪರಮೇಶ್ವರ್

ಕರಾವಳಿ

ಮಂಗಳೂರು ನಗರದಲ್ಲಿ ಇಂದು ದಕ್ಷಿಣ ಕನ್ನಡ,ಉತ್ತರ ಕನ್ನಡ, ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳ ಸಭೆಯ ಬಳಿಕ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್,ಮಂಗಳೂರಿನಲ್ಲಿ ಶಾಂತಿ-ಸಾಮರಸ್ಯವನ್ನು ಸ್ಥಾಪಿಸಲು ವಿದ್ಯಾರ್ಥಿಗಳು ಯುವಕರು ನಮ್ಮ ಜೊತೆ ಕೈ ಜೋಡಿಸಿಬೇಕು. ಮಂಗಳೂರು ಕಮಿಷನರ್ ವ್ಯಾಪ್ತಿಯಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡುತ್ತೇವೆ. ಕರಾವಳಿ ಮಾತ್ರವಲ್ಲ ಕೋಮು ವೈಷಮ್ಯ ಇರುವ ಕಡೆ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ನೈತಿಕ ಪೊಲೀಸ್ ಗಿರಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ್ದೇನೆ. ಇಂತಹ ಘಟನೆ ನಡೆದಾಗ ಪ್ರದೇಶ ಮತ್ತು ರಾಜ್ಯಕ್ಕೂ ಕೆಟ್ಟ ಹೆಸರು ಬರುತ್ತದೆ. ನಾವು ನೈತಿಕ ಪೊಲೀಸ್‌ಗಿರಿಯನ್ನು ಬಿಡುವುದಿಲ್ಲ ಮತ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ನೈತಿಕ ಪೊಲೀಸ್‌ಗಿರಿ ನಿಯಂತ್ರಣಕ್ಕೆ ಪೊಲೀಸ್‌ ಆಯುಕ್ತರ ನಿರ್ದೇಶನದಂತೆ ಅಧಿಕಾರಿಗಳನ್ನು ನೇಮಕ ಮಾಡುತ್ತೇವೆ. ಮೊದಲು ನಾವು ಮಂಗಳೂರು ಪೊಲೀಸ್ ಕಮಿಷನರೇಟ್‌ನಲ್ಲಿ ಪ್ರಾರಂಭಿಸುತ್ತೇವೆ, ಇದು ಯಶಸ್ವಿಯಾದರೆ ಮುಂದೆ‌ ಎಲ್ಲಾ ಸ್ಥಳಗಳಿಗೂ ವಿಸ್ತರಿಸುತ್ತೇವೆ ಎಂದು ಹೇಳಿದರು.ಇನ್ನು ಹತ್ಯೆಗೀಡಾದ ದೀಪಕ್ ರಾವ್, ಫಾಜೀಲ್, ಜಲೀಲ್, ಮಸೂದ್ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಲು ಬೇಕಾದ ವರದಿ ಕೇಳಿದ್ದೇನೆ. ಆದಷ್ಟು ಶೀಘ್ರದಲ್ಲಿ ಸರ್ಕಾರ ಈ ಕುಟುಂಬಗಳಿಗೆ ಪರಿಹಾರ ನೀಡಲಿದೆ ಎಂದು ಹೇಳಿದ್ದಾರೆ.