ದಲಿತರ ಪ್ರವೇಶಕ್ಕೆ ನಿರಾಕರಿಸಿದ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಶ್ರೀ ಧರ್ಮರಾಜ ದ್ರೌಪದಿ ಅಮ್ಮನ್‌ ದೇವಾಲಯಕ್ಕೆ ಬೀಗ ಮುದ್ರೆ

ರಾಷ್ಟ್ರೀಯ

ದಲಿತರ ಪ್ರವೇಶಕ್ಕೆ ನಿರಾಕರಿಸಿದ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಮೇಲ್ಪತಿ ಗ್ರಾಮದ ಶ್ರೀ ಧರ್ಮರಾಜ ದ್ರೌಪದಿ ಅಮ್ಮನ್‌ ದೇವಾಲಯಕ್ಕೆ ಸರ್ಕಾರ ಬುಧವಾರ ಬೀಗ ಮುದ್ರೆ ಹಾಕಿದೆ.ಗ್ರಾಮದಲ್ಲಿ ವಣ್ಣಿಯಾರ್ ಸಮುದಾಯದ ಪ್ರಾಬಲ್ಯ ಹೆಚ್ಚಿದೆ. ಈ ದೇಗುಲವು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ವ್ಯಾಪ್ತಿಗೆ ಸೇರಿದ್ದು, ಏಪ್ರಿಲ್‌ನಲ್ಲಿ ನಡೆದ ಹಬ್ಬದ ಸಂದರ್ಭದಲ್ಲಿ ದಲಿತರು ಪೂಜೆ ಸಲ್ಲಿಸಲು ತೆರಳಿದ್ದಾಗ ವಣ್ಣಿಯಾರ್‌ ಮುಖಂಡರು ಅಡ್ಡಿಪಡಿಸಿದ್ದರಿಂದ ಘರ್ಷಣೆ ಸಂಭವಿಸಿತ್ತು.

ದಲಿತರ ಮನವಿ ಮೇರೆಗೆ ಜಿಲ್ಲಾಡಳಿತವು ಎರಡು ಸಮುದಾಯಗಳ ನಡುವೆ ಹಲವು ಸುತ್ತಿನ ಶಾಂತಿ ಸಭೆ ನಡೆಸಿದರೂ ಫಲಕಾರಿಯಾಗಿರಲಿಲ್ಲ. ದೇಗುಲದೊಳಗೆ ಪೂಜೆ ಸಲ್ಲಿಸಲು ಅವಕಾಶ ನೀಡುವುದಿಲ್ಲ. ಹೊರ ಭಾಗದಲ್ಲಿ ಸಲ್ಲಿಸಿದರೆ ನಮ್ಮ ಅಭ್ಯಂತರ ಇಲ್ಲ ಎಂದು ವಣ್ಣಿಯಾರ್‌ ಮುಖಂಡರು ಪಟ್ಟು ಹಿಡಿದಿದ್ದರು. ಮೇ ತಿಂಗಳಿನಲ್ಲಿ ನಡೆದ ಕೊನೆಯ ಸಭೆಯೂ ಸುಖಾಂತ್ಯ ಕಂಡಿರಲಿಲ್ಲ. ಹಾಗಾಗಿ,ಇಂದು ವಿಲ್ಲುಪುರಂ ಕಂದಾಯ ವಿಭಾಗದ ಅಧಿಕಾರಿ ಎಸ್‌. ರವಿಚಂದ್ರನ್ ನೇತೃತ್ವದಲ್ಲಿ ಆಗಮಿಸಿದ ಹಿರಿಯ ಅಧಿಕಾರಿಗಳು ದೇಗುಲದ ಬಾಗಿಲು ಮುಚ್ಚಿ ಮೊಹರು ಹಾಕಿದರು.ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಮುಂಜಾಗ್ರತೆಯಾಗಿ ದೇವಾಲಯಕ್ಕೆ ಬೀಗಮುದ್ರೆ ಹಾಕಲಾಗಿದೆ ಎಂದು ತಿಳಿದು ಬಂದಿದೆ.