ವಿಜೃಂಭಿಸುತ್ತಿದೆ ಕರ್ನಾಟಕ ಮಾಡೆಲ್. ಯುಪಿ, ದೆಹಲಿ, ಗುಜರಾತ್ ಮಾಡೆಲ್ ಗಳು ಠುಸ್..

ರಾಜ್ಯ

ದೇಶದೆಲ್ಲೆಡೆ ಗುಜರಾತ್ ಮಾಡೆಲ್ ಸದ್ದು ಮಾಡುತ್ತಿದ್ದ ದಿನಗಳಿದ್ದವು. ಬಿಜೆಪಿ ಗುಜರಾತ್ ಮಾಡೆಲ್ ತೋರಿಸುತ್ತಾ ವಿವಿಧ ರಾಜ್ಯಗಳಲ್ಲಿ ಅಧಿಕಾರದ ಗದ್ದುಗೆ ಪಡೆದಿತ್ತು. ಎಲ್ಲಿ ನೋಡಿದರೂ ಗುಜರಾತ್ ಮಾಡೆಲ್ ನದ್ದೆ ಸದ್ದು. ಆದರೆ ಗುಜರಾತ್ ಮಾಡೆಲ್ ಕೇವಲ ಠುಸ್ ಪಟಾಕಿ ಅನ್ನುವುದು ಜಗಜ್ಜಾಹೀರು ಆಗುವಾಗ ಬಿಜೆಪಿ ಚುನಾವಣೆಗಳಲ್ಲಿ ಭಾರೀ ಲಾಭವೇ ತಂದುಕೊಟ್ಟಿದ್ದವು. ಆನಂತರ ಯುಪಿ ಮಾಡೆಲ್ ಎಂದು ತೋರಿಸುತ್ತಾ ಬಿಜೆಪಿ ಹಲವು ರಾಜ್ಯಗಳಲ್ಲಿ ಪ್ರಚಾರವನ್ನೇ ಮಾಡಿತ್ತು. ಆದರೆ ಇತ್ತ ದೆಹಲಿ ಮಾಡೆಲ್ ಅಭಿವೃದ್ಧಿಯಲ್ಲಿ ಹೊಸ ಶಕೆ ಬರೆದರೂ ಗಮನಾರ್ಹ ರೀತಿಯಲ್ಲಿ ದೇಶದ ವಿವಿಧ ಕಡೆ ಪ್ರಚಾರ ಪಡೆಯುವಲ್ಲಿ ಸಫಲವಾಗಿಲ್ಲ. ಆದರೆ ಇದೀಗ ಕರ್ನಾಟಕ ಮಾಡೆಲ್ ಇದೀಗ ದೇಶದೆಲ್ಲೆಡೆ ಸುದ್ದಿ ಆಗುತ್ತಿದೆ. ಕರ್ನಾಟಕ ಮಾಡೆಲ್ ಇಟ್ಟುಕೊಂಡು ದೇಶದೆಲ್ಲೆಡೆ ಕಾಂಗ್ರೆಸ್ ಪುಟಿದೇಳಲು ಸಿದ್ಧತೆ ನಡೆಸುತ್ತಿದೆ. ಇದೇ ಮಾದರಿ ಇಟ್ಟುಕೊಂಡು ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಶಕ್ತಿ ವರ್ಧನೆಗೆ ಮುಂದಾಗಿದೆ.

ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿ ತಂದಿರುವ ಐದು ಜನಪರ ಯೋಜನೆಗಳು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ, ಬಡವರಿಗೆ ಅನ್ನಭಾಗ್ಯ, 200 ಯುನಿಟ್‌ಗಳ ಗೃಹಜ್ಯೊತಿ, ಮಹಿಳೆಯರಿಗೆ ಸರಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ, ನಿರುದ್ಯೋಗಿ ವಿದ್ಯಾವಂತರಿಗೆ ಎರಡು ವರ್ಷಗಳ ಕಾಲ ನೆರವು ನೀಡುವ ಯೋಜನೆಗಳಿಂದ ದೇಶದ ಆರ್ಥಿಕತೆ ದಿವಾಳಿಯಾಗುತ್ತಿದೆ ಎಂದು ಕೂಗಾಡುತ್ತಾ, ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಕೂಡಾ ಮಾಡಿದ ವಿರೋಧವನ್ನು ಗಮನಿಸಿ. ಚುನಾವಣೆಯಲ್ಲಿ ಸೋತ ಕೂಡಲೇ ಅವುಗಳ ವ್ಯವಸ್ಥಿತ ಜಾರಿಗೆ ಒತ್ತಾಯಿಸುತ್ತಾ, ಅವಸರ ಮಾಡುತ್ತಾ, ಕಾಂಗ್ರೆಸ್ ಜನರನ್ನು ವಂಚಿಸಿದೆ ಎಂದು ಚೀರಾಟ,ಕೂಗಾಟ ಇಬ್ಬಗೆ ನೀತಿಯನ್ನೂ ಗಮನಿಸಿ. ಇದೀಗ ಈ ಯೋಜನೆಗಳು ಜಾರಿಯಾದಾಗ ಮಾಡುತ್ತಿರುವ ಟೀಕೆಗಳು, ಕುಹಕಗಳು, ಹುಡುಕುತ್ತಿರುವ ಹುಳುಕುಗಳು ಮತ್ತು ಸೃಷ್ಟಿಸುತ್ತಿರುವ ಗೊಂದಲಗಳನ್ನು ಜನ ಗಮನಿಸುತ್ತಿದ್ದಾರೆ.

ಬಿಜೆಪಿಯ ಕೊಡುಗೆಗಳು ಸಮಾಜದಲ್ಲಿ ಮತೀಯ ಬಿರುಕು ಮಾಡಬಲ್ಲ ಧಾರ್ಮಿಕ ಸ್ವರೂಪದ ಕೊಡುಗೆಗಳಾದರೆ, ಉಳಿದ ರಾಜ್ಯಗಳಲ್ಲಿ ಇರುವುದು ಅನ್ನ, ವಸತಿ, ಶಿಕ್ಷಣ, ಮಹಿಳಾ ಸಶಕ್ತೀಕರಣ ಮುಂತಾದ ಬಡಜನರ ಉಳಿವಿಗೆ ಅಗತ್ಯವಾದ ಕೊಡುಗೆಗಳು. ಆದರೆ, ಜನಸಾಮಾನ್ಯರ ಸಶಕ್ತೀಕರಣದ ಉದ್ದೇಶ ಹೊಂದಿರುವ, ಅವರ ಕೈಗೆ ಚಲಾವಣೆಯ ಹಣ ಒದಗಿಸುವ, ಆ ಮೂಲಕ ಮಾರುಕಟ್ಟೆ ಆರ್ಥಿಕತೆಯ ಚೇತರಿಕೆಗೆ ಕಾರಣವಾಗಬಲ್ಲ, ಹೆಚ್ಚು ವಿಸ್ತಾರವಾದ, ಮತ್ತು ಇಷ್ಟು ದೊಡ್ಡ ಯೋಜನೆ ಬೇರೆಲ್ಲೂ ಬಂದಿಲ್ಲ.  ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿ,ಬಿಜೆಪಿಯ ಕುಟಿಲ ರಾಜಕಾರಣವನ್ನು ಸೋಲಿಸುವಲ್ಲಿ ಸಫಲವಾದ “ಕರ್ನಾಟಕ ಮಾಡೆಲ್” ರೀತಿಯ ಯೋಜನೆಗಳನ್ನು ಮುಂದಿನ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಕಾಂಗ್ರೆಸ್ ಘೋಷಣೆ ಮಾಡಿರುವುದು ಬಿಜೆಪಿಗೆ ಉರಿ, ಹೊಟ್ಟೆ ನೋವು ಉಂಟುಮಾಡಿದೆ. ಪ್ರಧಾನಿ ನರೇಂದ್ರ ಮೋದಿಯಂತೂ- ರಾಜಸ್ಥಾನದಲ್ಲಿ ಮಾಡಿದ “ಅಪಪ್ರಚಾರ” ಭಾಷಣದಲ್ಲಿ ಕರ್ನಾಟಕದ ಉಚಿತ ಕೊಡುಗೆಗಳನ್ನು “ದಿವಾಳಿ ಕೊಡುಗೆ”ಗಳೆಂದು ಟೀಕಿಸಿ, ಇದು ದೇಶದ ಆರ್ಥಿಕತೆಯನ್ನು ನಾಶಪಡಿಸುವುದೆಂದು ಟೀಕಿಸಿರುತ್ತಾರೆ.

ಸಾವಿರಾರು ಕೋಟಿ ರೂ. ವೆಚ್ಚದ ಜಾಹೀರಾತುಗಳು, ಮಾರಿಕೊಂಡ ಕೊಳಕು ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳು, ಬಾಡಿಗೆ ಭಾಷಣಕಾರರು ಸೃಷ್ಟಿಸಿದ ಟೊಳ್ಳು “ಗುಜರಾತ್ ಮಾಡೆಲ್”, “ಯುಪಿ ಮಾಡೆಲ್” ಇತ್ಯಾದಿಗಳ ಜಾಗದಲ್ಲಿ ಜನಪರ “ಕರ್ನಾಟಕ ಮಾಡೆಲ್” ಜನಪ್ರಿಯವಾಗುತ್ತಿರುವುದು ಬಿಜೆಪಿಯಲ್ಲಿ ಆತಂಕ ಉಂಟುಮಾಡಿದೆ ಎಂಬುದು ಅದರ ಪ್ರತಿಕ್ರಿಯೆಗಳಿಂದಲೇ ಗೊತ್ತಾಗುತ್ತದೆ. ಹಣ ಎಲ್ಲಿಂದ ತರುತ್ತೀರಿ ಎಂಬುದರಿಂದ ಹಿಡಿದು, ದೇಶ ದಿವಾಳಿಯಾಗುತ್ತದೆ, ಆರ್ಥಿಕತೆ ನಾಶವಾಗುತ್ತವೆ ಎಂಬುದು ಇವರ ಪೊಳ್ಳುವಾದ.