ಸಾಚಾ’ ಮುಖವಾಡ ತೊಟ್ಟವರ ಹೇಸಿಗೆ ಕೆಲಸಗಳಿವು.!

ರಾಷ್ಟ್ರೀಯ

ಬಾಬಾ ರಾಮದೇವ್ ಮಾಲೀಕತ್ವದ ‘ಪತಂಜಲಿ ಫುಡ್ಸ್’.ಜಿಲ್ಲೆಯ ಜನರ ಬದುಕನ್ನು ಮೂರಾಬಟ್ಟೆಯಾಗಿಸಿದೆ

ಮಂಗಳೂರು ಧಾರ್ಮಿಕವಾಗಿ ಉತ್ಕೃಷ್ಟ ಶ್ರೇಣಿಯಲ್ಲಿರುವ ಪ್ರದೇಶ. ವಿವಿಧ ಧರ್ಮಗಳ ಧಾರ್ಮಿಕ ಕೇಂದ್ರಗಳ ತವರೂರು ಜೊತೆಗೆ ಮತೀಯ ಕಾರಣಕ್ಕಾಗಿ ರಾಜ್ಯದಲ್ಲಿಯೇ ಹೆಚ್ಚು ಸುದ್ದಿಯಾಗುತ್ತಿರುವ ಪ್ರದೇಶ ಕೂಡ ಹೌದು.

ಧಾರ್ಮಿಕ ತ್ಯಾಜ್ಯವನ್ನು ತುಳುನಾಡಿನ ಜನರ ಮನಸ್ಸುಗಳಿಗೆ ತುಂಬಿ ಅವರನ್ನು ಧಾರ್ಮಿಕ ಭ್ರಾಂತರನ್ನಾಗಿ ಮಾಡಿದ ನಂತರ ಇದೀಗ ಕೆಲವೊಂದು ರಾಜಕೀಯ ಬೆಂಬಲಿತ ಕಾರ್ಪೊರೇಟ್ ಜಗತ್ತು ಕರಾವಳಿಯನ್ನು, ನದಿಗಳನ್ನು ಹಾಗೂ ಇಲ್ಲಿನ ಒಟ್ಟು ಬದುಕನ್ನು ವ್ಯವಸ್ಥಿತವಾಗಿ ತನ್ನ ಹತೋಟಿಗೆ ಪಡೆಯುವಲ್ಲಿ ಕಾರ್ಯನಿರತವಾಗಿದೆ. ಇದಕ್ಕೆ ಒಂದು ಉತ್ತಮ ಉದಾಹರಣೆ ಬಾಬಾ ರಾಮದೇವ್ ಮಾಲೀಕತ್ವದ ‘ಪತಂಜಲಿ ಫುಡ್ಸ್’. ಇಲ್ಲಿನ ಜನರ ಜೀವನದಿ ಫಲ್ಗುಣಿ ನದಿಗೆ ‘ಪತಂಜಲಿ ಫುಡ್ಸ್’ ಹರಿದುಬಿಡುವ ಅತೀ ಮಾರಕ ಕೈಗಾರಿಕಾ ತ್ಯಾಜ್ಯಗಳು ಇಲ್ಲಿನ ಜನರ ಬದುಕನ್ನು ಮೂರಾಬಟ್ಟೆಯಾಗಿಸಿದೆ.

‘ಹಿಂದುತ್ವ’ ಅಜೆಂಡಾದೊಂದಿಗೆ ಕಾರ್ಪೋರೇಟ್ ಜಗತ್ತಿನೊಳಗೆ ನುಸುಳಿಕೊಂಡಿರುವ ಪತಂಜಲಿ ಮಾಡುತ್ತಿರುವ ಹೇಸಿಗೆ ಕೆಲಸಗಳು ಪತರಗುಟ್ಟುವಂತೆ ಮಾಡಿದೆ. ‘ಸಾಚಾ’ ಮುಖವಾಡದೊಂದಿಗೆ ಮಾಡುವ ಇಂತಹ ಕೆಲಸಗಳು ಯಾವ ಸಿದ್ಧಾಂತವನ್ನು ತೋರಿಸುತ್ತದೆ. ‘ಭೂತದ ಬಾಯಲ್ಲಿ ಭಗವದ್ಗೀತೆ’ ಅನ್ನುವ ಮಾತಿನಂತೆ ಹಿಂದುತ್ವದ ಶುಭ್ರ ಮುಖವಾಡ ತೊಟ್ಟು ಜನರ ಬದುಕನ್ನೇ ಇಲ್ಲವಾಗಿಸುವ ಪ್ರಯತ್ನ ನಿತ್ಯ ನಿರಂತರವಾಗಿ ನಡೆಯುತ್ತಿದೆ.

ಪತಂಜಲಿ ಮಾತ್ರವಲ್ಲ, ಮಂಗಳೂರು ಸುತ್ತಮುತ್ತ ಧಾರ್ಮಿಕವಾಗಿ ಹಾಗೂ ರಾಜಕೀಯವಾಗಿ ‘ಸಾಚಾ’ ಮುಖವಾಡ ಧರಿಸಿದವರ ಮಾಲಕತ್ವದ ಮೀನು, ಅಣಬೆ, ಪ್ಲೈವುಡ್, ಪ್ಲಾಸ್ಟಿಕ್, ಎಣ್ಣೆ, ಕಾರ್ಖಾನೆಗಳು ಧಾರಾಳವಾಗಿ ನದಿಗಳಿಗೆ, ತೋಡುಗಳಿಗೆ ಹಾಗೂ ಗಾಳಿಗೆ ತ್ಯಾಜ್ಯವನ್ನು ತೇಲಿ ಬಿಡುವಲ್ಲಿ ಪರಸ್ಪರ ಸ್ಪರ್ಧಿಸುತ್ತಿವೆ.