ರಾಷ್ಟ್ರೀಯ ಹೆದ್ದಾರಿ 169 ಗುರುಪುರ ಕೈಕಂಬದ ಅಣೆ ಬರಿ ಎಂಬಲ್ಲಿ ಹೊರ ರಾಜ್ಯಕ್ಕೆ ಕೆಂಪು ಕಲ್ಲಿನ ಮಣ್ಣು ಸಾಗಿಸುತ್ತಿದ್ದ ಬೃಹತ್ ಗಾತ್ರದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ಗುರುವಾರ ಸಂಜೆ ನಡೆದಿರುತ್ತದೆ. ಓವರ್ ಲೋಡ್ ಕಾರಣ ಗುರುಪುರ ಅಣೆ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿರುತ್ತದೆ. ಕೆಲವು ತಿಂಗಳ ಹಿಂದೆ ಇದೇ ತಿರುವಿನಲ್ಲಿ ಎರಡು ಮಣ್ಣು ಸಾಗಾಟದ ಲಾರಿಗಳು ಮಗುಚಿ ಬಿದ್ದು ಪ್ರಾಣಹಾನಿಯೂ ಸಂಭವಿಸಿರುತ್ತದೆ.
ಕೆಂಪುಕಲ್ಲಿನ ಮಣ್ಣಿನ ದಂಧೆ ಜಿಲ್ಲೆಯಲ್ಲಿ ಎಗ್ಗಿಲ್ಲದೆ ಸಾಗುತ್ತಿದೆ. ಎಲ್ಲೆಂದರಲ್ಲಿ ಮಣ್ಣು ಅಗೆದು ಸಾಗಾಟ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ. ಜಿಲ್ಲೆಯ ಹಲವು ಕಡೆಗಳಿಂದ ಇಂಥ ಮಣ್ಣು ಸಾಗಾಟದ ಪ್ರಕ್ರಿಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಹೊರ ರಾಜ್ಯಗಳಲ್ಲಿ ಈ ಮಣ್ಣಿಗೆ ಭಾರಿ ಬೇಡಿಕೆ ಇರುವ ಹಿನ್ನಲೆಯಲ್ಲಿ ಮಣ್ಣಿನ ವಹಿವಾಟು ಹೆಚ್ಚಾಗಲಾರಂಭಿಸಿದೆ.ಕಂದಾವರ ಗ್ರಾಮದ ಕಂದಾವರ ಪದವು, ಸುಂಕದ ಕಟ್ಟೆಯ ಅಸುಪಾಸಿನಲ್ಲಿ ಮನೆ ಕಟ್ಟುವ ಉದ್ದೇಶಕ್ಕೆ 9/11 ಪಡೆದು ಜಾಗವನ್ನು ಸಮತಟ್ಟು ಮಾಡುವ ನೆಪದಲ್ಲಿ ಕೆಂಪು ಕಲ್ಲು ಕಟ್ಟಿಂಗ್ ಮಾಡಿ ಮಣ್ಣು ಅಗೆದು ಲಾರಿಗಳಲ್ಲಿ ತುಂಬಿಸಿ, ನಕಲಿ ಪರ್ಮಿಟ್ ಬಳಸಿ, ಹೊರ ರಾಜ್ಯಗಳಿಗೆ ಕಳುಹಿಸುವ ಭಾರಿ ದಂಧೆಯೊಂದು ನಡೆಯುತ್ತಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪರವಾನಗಿ ಪಡೆಯದೆ ನಿರಂತರವಾಗಿ ಈ ದಂಧೆ ನಡೆಸುತ್ತಿರುವ ಹಲವು ನಿದರ್ಶನಗಳು ಕಂದಾವರ ಗ್ರಾಮದಲ್ಲಿ ಕೇಳಿ ಬರುತ್ತಿದೆ.
ಆಂದ್ರಪ್ರದೇಶ ಹಾಗೂ ಇತರ ಭಾಗಗಳಲ್ಲಿ ಇಲ್ಲಿಯ ಕೆಂಪುಕಲ್ಲು ಮಿಶ್ರಿತ ಮಣ್ಣಿಗೆ ಭಾರೀ ಬೇಡಿಕೆ ಇರುವ ಕಾರಣಕ್ಕಾಗಿ ಈ ಭಾಗದಲ್ಲಿ ಎಲ್ಲೆಂದರಲ್ಲಿ ಗುಡ್ಡ ಪ್ರದೇಶಗಳನ್ನು ಕೊರೆದು ಮಣ್ಣು ಸಾಗಿಸಲಾಗುತ್ತಿದೆ.
ಮೂಡಬಿದ್ರೆ-ಬಿಕರ್ನಕಟ್ಟೆ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಬೃಹತ್ ಗಾತ್ರದ ಲಾರಿಗಳ ಮೂಲಕ ಮಣ್ಣು ಸಾಗಾಟ ಮಾಡಲಾಗುತ್ತಿದೆ. ಭಾರೀ ಗಾತ್ರದ ಲಾರಿಗಳ ಮೂಲಕ ಮಣ್ಣು ಸಾಗಾಟ ಮಾಡುವ ಸಂದರ್ಭ ಸಂಚಾರಕ್ಕೆ ಅಡೆ-ತಡೆ ಉಂಟಾಗಿ ಗುರುಪುರದ ಅಣೆ ಬಳಿ ಮಣ್ಣು ಸಾಗಾಟದ ಎರಡು ಬೃಹತ್ ಲಾರಿಗಳು ಇತ್ತೀಚೆಗೆ ಮಗುಚಿ ಬಿದ್ದು ಜೀವ ಹಾನಿಯೂ ಉಂಟಾಗಿರುತ್ತದೆ. ಹೀಗಿದ್ದರೂ ಈ ಬೃಹತ್ ಲಾರಿಗಳು ಓವರ್ ಲೋಡ್ ಮಣ್ಣನ್ನು ತುಂಬಿಸಿಕೊಂಡು ಪದೇ ಪದೇ ಇದೇ ರಸ್ತೆಗಳ ಮೂಲಕ ಸಂಚರಿಸುತ್ತಿದ್ದು, ಅಪಾಯವನ್ನು ಅಹ್ವಾನಿಸುತ್ತಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.
ದಿನಕ್ಕೆ ಹತ್ತಾರು ಲಾರಿಗಳು ಮಣ್ಣನ್ನು ತುಂಬಿಕೊಂಡು ನಿರಂತರವಾಗಿ ಗುರುಪುರ-ಕೈಕಂಬ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವುದರಿಂದ ಸ್ಥಳೀಯ ಜನರು ಪ್ರಾಣಭಯದಿಂದಲೇ ರಸ್ತೆಯಲ್ಲಿ ನಡೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಈ ಹಿಂದೆ ಮಣ್ಣು ಸಾಗಾಟದ ಲಾರಿಯೊಂದು ವಾಹನವೊಂದಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದ ಘಟನೆಯು ಗುರುಪುರದ ಅಣೆ ಬಳಿಯ ತಿರುವಿನಲ್ಲಿ ನಡೆದಿರುತ್ತದೆ. ಹೊರ ರಾಜ್ಯಗಳಲ್ಲಿ ದ.ಕ ಜಿಲ್ಲೆಯ ಹಲವು ಕಡೆಗಳಲ್ಲಿ ಸಿಗುವಂತಹ ಕೆಂಪುಕಲ್ಲು ಮಿಶ್ರಿತ ಮಣ್ಣಿಗೆ ಭಾರೀ ಬೇಡಿಕೆ ಇರುವ ಕಾರಣಕ್ಕಾಗಿ ಈ ಭಾಗದಲ್ಲಿ ಎಲ್ಲೆಂದರಲ್ಲಿ ಗುಡ್ಡ ಪ್ರದೇಶಗಳನ್ನು ಕೊರೆದು ಮಣ್ಣು ಸಾಗಿಸಲಾಗುತ್ತಿದೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಈ ದಂಧೆಯಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪವು ಕೇಳಿ ಬರುತ್ತಿದೆ.