ಮಂಗಳೂರು: ಮಾಜಿ ಶಾಸಕರ ಒಡೆತನದ ಮಶ್ರೂಮ್ ಫ್ಯಾಕ್ಟರಿಗೆ ಬೀಗ: ಡಿ.ಸಿ ಎತ್ತಂಗಡಿಗೆ ಸಂಚು.?

ಕರಾವಳಿ

ಮಂಗಳೂರು: ವಾಮಂಜೂರು ತಿರುವೈಲ್ ವಾರ್ಡ್ ನ ಓಂಕಾರ ನಗರದಲ್ಲಿ ಕಳೆದ ಎರಡು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ‘ವೈಟ್ ಗ್ರೋ ಎಗ್ರಿ ಎಲ್ ಎಲ್ ಪಿ’ ಹೆಸರಿನ ಮಶ್ರೂಮ್ ಫ್ಯಾಕ್ಟರಿಯನ್ನು ಸ್ಥಳೀಯರ ವಿರೋಧಕ್ಕೆ ಮಣಿದ ಜಿಲ್ಲಾಧಿಕಾರಿ ಬಂದ್ ಮಾಡುವಂತೆ ಸೂಚಿಸಿದ್ದಾರೆ ಅನ್ನಲಾಗಿದೆ.

ಕಳೆದ ಎರಡು ವರ್ಷಗಳಿಂದ ಸ್ಥಳೀಯರು ಮಶ್ರೂಮ್ ಕಾರ್ಖಾನೆ ಸ್ಥಳಾಂತರಕ್ಕೆ ಬೀದಿಗಿಳಿದು ಹೋರಾಟ ನಡೆಸಿದರೂ, ದೂರು ನೀಡಿದ್ದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಕಾರ್ಖಾನೆಯಿಂದ ಸಂಜೆ ಹೊತ್ತಿಗೆ ಸಹಿಸಲಸಾಧ್ಯವಾದ ಗಬ್ಬುನಾತ ಸ್ಥಳೀಯ ಬಾಣಂತಿಯರು, ಮಕ್ಕಳು, ವಯೋವೃದ್ಧರು ಸೇರಿದಂತೆ ಎಲ್ಲರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ.

ಜನವಸತಿ ಪ್ರದೇಶಗಳಲ್ಲಿ ಇಂತಹ ಕಾರ್ಖಾನೆಗೆ ಅಧಿಕಾರಿಗಳು ಅನುಮತಿ ನೀಡಿರುವುದೇ ತಪ್ಪು. ಇದರ ವಿರುದ್ಧ ಅಂಬೇಡ್ಕರ್ ನಗರ, ಆಶ್ರಯನಗರ, ಜ್ಯೋತಿನಗರ, ಪರಾರಿ, ಕೊಳಕೆಬೈಲು, ಅಮೃತನಗರ, ತಿರುವೈಲ್ ಮೊದಲಾದ ಪ್ರದೇಶಗಳ ನಿವಾಸಿಗಳು ಮುಷ್ಕರ ನಡೆಸಿದ ಪರಿಣಾಮ ಜಿಲ್ಲಾಧಿಕಾರಿಗಳು ಕಾರ್ಖಾನೆ ಬಂದ್ ಮಾಡುವಂತೆ ಸೂಚಿಸಿದ್ದಾರೆ.

ಕಾಂಗ್ರೆಸ್ ಪ್ರಭಾವಿ ಮುಖಂಡ,ಮಾಜಿ ಶಾಸಕರ ಪಾಲುದಾರಿಕೆಯ ಒಡೆತನದ ಮಶ್ರೂಮ್ ಫ್ಯಾಕ್ಟರಿ ಇದಾಗಿದ್ದು, ಚಾಕೊಲೇಟ್ ತಯಾರಿಕಾ ಕಾರ್ಖಾನೆ ಎಂದು ಸ್ಥಳೀಯರನ್ನು ನಂಬಿಸಿ ತೆರೆಯಲಾಗಿದೆ ಅನ್ನುವ ಆರೋಪವಿದೆ. ಕಳೆದ ಎರಡು ವರ್ಷಗಳಿಂದ ತನ್ನ ಪ್ರಭಾವ ಬಳಸಿ ಮುಂದುವರಿಸಿಕೊಂಡು ಹೋಗಿದ್ದು, ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೂ ಜಿಲ್ಲಾಧಿಕಾರಿ ಕ್ಯಾರೇ ಎನ್ನದೆ ಕಾರ್ಖಾನೆ ಬಂದ್ ಗೆ ಆದೇಶಿಸಿದ್ದು ಕೆಲವೊಂದು ಪ್ರಭಾವೀ ಮುಖಂಡರ ಕಣ್ಣು ಕೆಂಪಾಗಿಸಿದೆ.

ಮೊನ್ನೆಯಷ್ಟೇ ಮಂಗಳೂರಿಗೆ ಆಗಮಿಸಿದ ಉಸ್ತುವಾರಿ ಮಂತ್ರಿ ಕಾರ್ಯಕ್ರಮದಲ್ಲಿ ಪ್ರಭಾವಿ ಮುಖಂಡರ ಚೇಲಾಗಳು ನಾಯಕರೊಂದಿಗೆ ಜಿಲ್ಲಾಧಿಕಾರಿಗಳನ್ನು ಬದಲಾಯಿಸುವಂತೆ ದುಂಬಾಲು ಬಿದ್ದಿದ್ದಾರೆ ಅನ್ನುವ ಮಾಹಿತಿಗಳಿವೆ.

ಕೆಲವೊಂದು ಮೂಲಗಳ ಪ್ರಕಾರ ಜಿಲ್ಲಾಧಿಕಾರಿ ರವಿಕುಮಾರ್ ರವರನ್ನು ಬದಲಾಯಿಸಿ ಹೊಸ ಡಿ.ಸಿ ಯನ್ನು ತರುವ ಪ್ರಯತ್ನ ಬಹುತೇಕ ಸಫಲವಾಗಿದೆ ಅನ್ನುವ ಮಾಹಿತಿಗಳು ಕೇಳಿ ಬರುತ್ತಿದೆ.ಪ್ರಭಾವಿ ಮುಖಂಡರೊಬ್ಬರ ಅಣಬೆ ಕಾರ್ಖಾನೆ ಗೆ ಡಿ.ಸಿ ಬಲಿಯಾಗುತ್ತರಾ ಅನ್ನುವ ಕುತೂಹಲ ಮೂಡಿದೆ.