ಮಂಗಳೂರು-ಮೂಡಬಿದ್ರೆ ರೂಟಿನಲ್ಲಿ ಖಾಸಗಿ ಬಸ್ ಗಳದ್ದೇ ದರ್ಬಾರ್.! ಸರ್ಕಾರಿ ಬಸ್ ಓಡಾಟಕ್ಕೆ ಕೂಡಿಬಂದಿದೆ ಕಾಲ

ಕರಾವಳಿ

ರಾಜ್ಯಾದ್ಯಂತ ಕಾಂಗ್ರೆಸ್ ಗ್ಯಾರಂಟಿ ಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಪ್ರಯಾಣ ಜೂ.11 ರಿಂದ ಕೆಎಸ್ಆರ್ ಟಿಸಿ ಬಸ್ಸ್ ಗಳಲ್ಲಿ ಜಾರಿಗೆ ಬಂದಿದ್ದು, ರಾಜ್ಯದ ಬಹುತೇಕ ಮಹಿಳೆಯರು, ವಿದ್ಯಾರ್ಥಿನಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಆದರೆ ದಕ್ಷಿಣ ಕನ್ನಡ, ಉಡುಪಿಗಳಲ್ಲಿ ಬೆರೆಳೆಣಿಕೆಯ ಮಂದಿಗೆ ಮಾತ್ರ ಇದರ ಪ್ರಯೋಜನ ಸಿಗುವಂತಾಗಿದೆ. ಧರ್ಮಸ್ಥಳ, ಪುತ್ತೂರು, ಬೆಳ್ತಂಗಡಿ ಈ ಭಾಗದಲ್ಲಿ ಯಥೇಚ್ಛವಾಗಿ ಕೆಎಸ್ಸಾರ್ಟಿಸಿ ಬಸ್ ಓಡಾಡುದರಿಂದ ಈ ಉಚಿತ ಸೇವೆ ಮಹಿಳೆಯರಿಗೆ ದೊರಕುವಂತಾಗಿದೆ. ಆದರೆ ಇತರ ಕಡೆಗಳಲ್ಲಿ ಖಾಸಗಿ ಬಸ್ ದರ್ಬಾರಿನ ಮುಂದೆ ಕೆಎಸ್ಸಾರ್ಟಿಸಿ ಬಸ್ ಮಕಾಡೆ ಮಲಗಿದ ಪರಿಣಾಮ ಓಡಾಟ ನಿಲ್ಲಿಸಿತ್ತು.

ಮೂಡಬಿದ್ರೆ-ಮಂಗಳೂರು ರೂಟಿನಲ್ಲಿ ಕನಿಷ್ಠ ಒಂದೇ ಒಂದು ಕೆಎಸ್ಸಾರ್ಟಿಸಿ ಬಸ್ ಓಡಾಟ ನಡೆಸುತ್ತಿಲ್ಲ. ಇದರಿಂದಾಗಿ ಈ ಭಾಗದ ಮಹಿಳೆಯರು,ಶಾಲಾ ವಿದ್ಯಾರ್ಥಿನಿಯರು ಸರಕಾರದ ಉಚಿತ ಪ್ರಯಾಣ ಪ್ರಯೋಜನ ಪಡೆದುಕೊಳ್ಳಲು ವಂಚಿತರಾಗಿದ್ದಾರೆ. ಈ ರೂಟಿನಲ್ಲಿ ಏನಿದ್ದರೂ ಖಾಸಾಗಿ ಬಸ್ಸುಗಳದ್ದೇ ದರ್ಭಾರ್.! ಇವರ ಆರ್ಭಟಕ್ಕೆ ಕಡಿವಾಣ ಹಾಕುವವರೇ ಇಲ್ಲವಂತಾಗಿದೆ.ಈ ರೂಟಿನಲ್ಲಿ ಸಂಚರಿಸುವ ಖಾಸಾಗಿ ಬಸ್ಸುಗಳ ಆರ್ಭಟಕ್ಕೆ ಎಷ್ಟೊ ಅಮಾಯಕರು ತಮ್ಮ ಜೀವವನ್ನು ಕಳಕೊಂಡಿದ್ದಾರೆ. ಇತ್ತೀಚೆಗೆ ಕಾಲೇಜು ವಿಧ್ಯಾರ್ಥಿಯೊಬ್ಬ ಖಾಸಾಗಿ ಬಸ್ಸೊಂದರ ಅಜಾಗರೂಕತೆಯ ಚಾಲನೆಯಿಂದಾಗಿ ತನ್ನ ಪ್ರಾಣವನ್ನೇ ಬಲಿಕೊಡಬೇಕಾಯಿತು.ಈ ರೂಟಿನಲ್ಲಿ ಟೈಮಿಂಗ್ಸ್ ನ ತಾಪತ್ರೆಯಿಂದ ಚಾಲಕರು ಸಹ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಬಸ್ಸು ಓಡಿಸುತ್ತಾರೆ.ಇದರಿಂದ ಪ್ರಯಾಣಿಕರ ಜೀವಕ್ಕೂ ಸಂಚಕಾರ,ಮಾತ್ರವಲ್ಲದೆ ಈ ಮಾರ್ಗದಲ್ಲಿ ಸಂಚಾರಿಸುವ ಇತರ ವಾಹನ ಸವಾರರಿಗೂ ಕಂಟಕ ತಪ್ಪಿದ್ದಲ್ಲ.

ಈ ಹಿಂದೆ ನರ್ಮ್ ಯೋಜನೆಯಡಿಯಲ್ಲಿ ಉಡುಪಿಯಲ್ಲಿ ಸುಮಾರು 55 ರಷ್ಟು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 35 ರಷ್ಟು ಸರಕಾರಿ ಕೆಎಸ್ಆರ್ಟಿಸಿ ನಗರ ಸಾರಿಗೆ ಬಸ್ಸುಗಳು ಸಂಚಾರ ಸೇವೆ ಒದಗಿಸಲು ಮಂಜೂರಾಗಿದ್ದವು. ಉಡುಪಿಯಲ್ಲಿ 55 ಬಸ್ಸುಗಳು ಮಂಜೂರಾಗಿ ಸೇವೆ ಸಲ್ಲಿಸುವ ಹೊತ್ತಿಗೆ ಖಾಸಗೀ ಬಸ್ಸು ಮಾಲಕರ ವಿರೋಧದ ನಡುವೆಯೂ ಆಶಾದಾಯಕ ಸೇವೆಯನ್ನು ಸಲ್ಲಿಸಿದೆ. ಅದೇ ರೀತಿ ಮಂಗಳೂರಿನಲ್ಲಿ ಮಂಜೂರಾದ 35 ಬಸ್ಸುಗಳಲ್ಲಿ 18 ಬಸ್ಸು ನಗರದ ಸ್ಟೇಟ್ ಬ್ಯಾಂಕ್ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿತ್ತು.ಬಾಕಿ ಉಳಿದ ಬಸ್ಸು ನಗರದ ಹೊರಭಾಗದಿಂದ ಸೇವೆ ಸಲ್ಲಿಸಲು ಆರ್ ಟಿ ಎ ಪ್ರಾಧಿಕಾರ ಸಭೆ ಒಪ್ಪಿಗೆ‌ ನೀಡಿದ್ದವು.

ಆ ಸಂದರ್ಭ ಖಾಸಗಿ ಬಸ್ ಮಾಲಕರು ಹೈಕೋರ್ಟ್ ಮೆಟ್ಟಿಲೇರಿ ತಡೆ ಹೇರಿದೆಯಾದರೂ ಮುಂದೆ ನರ್ಮ್ ಸಾರಿಗೆ ಸೇವೆಗೆ ಸಂಬಂಧಿಸಿದ ಹೈಕೋರ್ಟ್ ದೂರನ್ನು ಜಿಲ್ಲಾಧಿಕಾರಿ ಹಂತದಲ್ಲಿ ಇತ್ಯರ್ಥ ಪಡಿಸಲು ನಿರ್ದೇಶನ ನೀಡಿತ್ತು. ಒಟ್ಟಾರೆ ಖಾಸಗೀ ಬಸ್ಸು ಮಾಲಕರ ವಿರೋಧದ ನಡುವೆಯೂ ಆಗಿನ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಅವರ ಜನಪರ ಆಡಳಿತ ನಡೆಯಿಂದ ಸರಕಾರಿ ನರ್ಮ್ ನಗರ ಸಾರಿಗೆ‌ ಬಸ್ ತನ್ನ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. ಅದರ ಜೊತೆ ಸುಳ್ಯ, ಪುತ್ತೂರು, ಬೆಳ್ತಂಗಡಿಗಳಂತಹ ಗ್ರಾಮೀಣ ಭಾಗಗಳಿಗೂ ಸರಕಾರಿ ಗ್ರಾಮಾಂತರ ಸಾರಿಗೆ ಬಸ್ಸು ನಿರಂತರ ಸೇವೆಯನ್ನು ನೀಡಿದೆ.

ಜಿಲ್ಲೆಯಲ್ಲಿ ಖಾಸಗೀ ಬಸ್ಸುಗಳ ಭರಾಟೆಯ ನಡುವೆ ಸರಕಾರಿ ಬಸ್ಸುಗಳು ಮೂಲೆಗುಂಪಾಗ ತೊಡಗಿದೆ. ಇದರಿಂದಾಗಿ ಬಹುತೇಕ ಕಡಿಮೆ ಆದಾಯಕ್ಕೆ ದುಡಿಯುವ ಜನ ಸಾಮಾನ್ಯರು ಸಮಸ್ಯೆಯನ್ನು ಅನುಭವಿಸುವಂತಾಗಿದೆ. ಜೂನ್ 11ರಿಂದ ಸರಕಾರ ಘೋಷಿಸಿದ ಕೆಎಸ್ಆರ್ ಟಿಸಿ ಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೇವೆಯು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮಹಿಳೆಯರಿಗೂ ಸಿಗುವಂತಾಗಬೇಕು.

ಕರಾವಳಿಯಲ್ಲಿ ಕೋಮುವಾದ ಬೆಳೆಯುವಲ್ಲಿ ಖಾಸಗಿ ಬಸ್ ವಲಯದ ಪಾತ್ರ ಇರುವುದು ಸ್ವಷ್ಟವಾಗಿದೆ.ಕೆಲವು ಖಾಸಗಿ ಬಸ್ಸಿನ ಸಿಬ್ಬಂದಿಗಳು ಕರಾವಳಿಯಲ್ಲಿ ಕೋಮುವಾದಕ್ಕೆ ಉತ್ತೇಜನ ಕೊಡುತ್ತಿರುವ ಬಗ್ಗೆ ಸರಕಾರಕ್ಕೆ ಗುಪ್ತಚರ ಮಾಹಿತಿ ತಲುಪಿದೆ. ಬಸ್’ನಲ್ಲಿ ಸಂಚರಿಸುವ ಪ್ರಯಾಣಿಕರ ಮೇಲೆ ಹಲ್ಲೆ ನಡೆಸುತ್ತಿರುವ ಬಗ್ಗೆ ಸರಕಾರಕ್ಕೆ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಮಂಗಳೂರು ನಗರ, ಹೊರವಲಯ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 500ರಷ್ಟು ಅಧಿಕ ಖಾಸಗಿ ಬಸ್’ಗಳು ಸೇವೆ ನೀಡುತ್ತಿದೆ.

ಇದೀಗ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪ್ರತಿಯೊಂದು ಮಹಿಳೆಯರಿಗೂ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಲು ಇದೊಂದು ಒಳ್ಳೆಯ ಕಾಲ. ಕೆಲವೊಂದು ಕಡೆಗಳಲ್ಲಿ ಖಾಸಗಿ ಬಸ್ ದರ್ಬಾರಿನ ಮುಂದೆ ಓಡಾಟ ನಡೆಸಲು ಹಿಂಜರಿದಿದ್ದ ಕೆಎಸ್ಸಾರ್ಟಿಸಿ ಬಸ್ ಗಳನ್ನು ಪುನರ್ ಸ್ಥಾಪಿಸಲು ಸರಕಾರ ಮುಂದಾಗಬೇಕಿದೆ. ಖಾಸಗಿ ಬಸ್ ಕೈಯಲ್ಲಿ ನಲುಗಿರುವ ಮಂಗಳೂರು-ಮೂಡಬಿದ್ರೆ ರೂಟ್ ಸೇರಿದಂತೆ ಒಂದೂ ಸರಕಾರಿ ಬಸ್ ಓಡಾಡದ ರೂಟ್ ಗಳಲ್ಲಿ ಕೆಲವೊಂದು ಬಸ್ ಗಳನ್ನು ಓಡಾಟ ನಡೆಸುವ ಮೂಲಕ ಉಚಿತ ಪ್ರಯಾಣದ ಸೌಲಭ್ಯಗಳನ್ನು ವಿಸ್ತರಿಸಲು ಸಾರಿಗೆ ಇಲಾಖೆ, ಸರಕಾರ ಮುಂದಾಗಬೇಕಿದೆ.