ರಾಜ್ಯಾಧ್ಯಕ್ಷ ಪಟ್ಟ ಅಶೋಕ್, ವಿಪಕ್ಷ ನಾಯಕನ ಪಟ್ಟ ಬೊಮ್ಮಾಯಿ ಹೆಗಲಿಗೆ ಸಾಧ್ಯತೆ.?

ರಾಜ್ಯ

ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ವಿಚಲಿತವಾಗಿದ್ದ ಬಿಜೆಪಿ ಇದೀಗ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ಸ್ಥಾನಗಳಿಗೆ ಹೆಸರು ಅಂತಿಮಗೊಳಿಸಿದ್ದು, ಅಧಿಕೃತ ಆದೇಶ ಹೊರಡಿಸುವುದು ಬಾಕಿ ಇದೆ.ವಿಧಾನಸಭಾ ಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತು ನಳೀನ್ ಕುಮಾರ್ ಕಟೀಲ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಆರ್.ಅಶೋಕ್ ನೇಮಕಗೊಳ್ಳುವ ಸಾಧ್ಯತೆ ಇದೆ.

ಇದೇ ವೇಳೆ ವಿಪಕ್ಷ ಸ್ಥಾನದ ಜವಾಬ್ದಾರಿಯನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ವಹಿಸುವ ಸಾಧ್ಯತೆ ಇದೆ.ಚುನಾವಣೆ ನಡೆದೂ ಒಂದು ತಿಂಗಳು ಕಳೆಯುತ್ತಾ ಬಂದರೂ ಬಿಜೆಪಿ ಹೈಕಮಾಂಡ್ ಈ ಎರಡು ಮಹತ್ವದ ಸ್ಥಾನಗಳಿಗೆ ಯಾವುದೇ ಆಯ್ಕೆ ಮಾಡದೇ ತಟಸ್ಥವಾಗಿ ಉಳಿದಿತ್ತು. ಇದೀಗ ಜುಲೈನಲ್ಲಿ ವಿಧಾನಸಭಾ ಅಧಿವೇಶನ ನಡೆಯಲಿದೆ. ಅಲ್ಲದೇ ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಬೇಕಿರುವುದರಿಂದ ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷರ ಆಯ್ಕೆಗೆ ಮುಂದಾಗಿದೆ ಎಂದು ತಿಳಿದು ಬಂದಿದೆ.

ಲಿಂಗಾಯಿತ ಸಮುದಾಯದ ಬೊಮ್ಮಾಯಿ ಅವರನ್ನು ವಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಿ,ಉತ್ತರ ಕರ್ನಾಟಕದ ಮತದಾರರ ವಿಶ್ವಾಸ ಉಳಿಸಿಕೊಳ್ಳುವ ಪ್ರಯತ್ನ ಆಗಿದೆ.
ಮತ್ತೊಂದೆಡೆ ಆರ್.ಅಶೋಕ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ,ಒಕ್ಕಲಿಗರಿಗೆ ಪ್ರಾತಿನಿಧ್ಯ ನೀಡುವ ಸಾಧ್ಯತೆ ಇದೆ.ವಿಪಕ್ಷ ಸ್ಥಾನಕ್ಕೆ ಸುನೀಲ್ ಕುಮಾರ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ರೇಸ್ ನಲ್ಲಿದ್ದರು. ಆದರೆ ಬೊಮ್ಮಾಯಿಗೆ ಅವರಿಗೆ ಮಣೆ ಹಾಕಲು ಹೈಕಮಾಂಡ್ ಒಲವು ತೋರಿದೆ.