ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತನ್ನ ಹೊಸ ಬಂಗಲೆ ಸವಣೂರಿನ ಕುಂಜಾಡಿಯಲ್ಲಿ ಹೋಮ-ಹವನದ ಜೊತೆಗೆ ಒಂಭತ್ತು ದಿನಗಳ ಧಾರ್ಮಿಕ ಕಾರ್ಯಗಳು ನಡೆಯುತ್ತಿದ್ದು, ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಹಲವು ವಿಧದ ಚರ್ಚೆಗಳು ಆರಂಭವಾಗಿದ್ದವು. ರಾಜಕೀಯ ಪಡಸಾಲೆಯಲ್ಲಿ ಈ ಬಗ್ಗೆ ವಿಶೇಷ ಚರ್ಚೆಗಳು ಕೂಡ ನಡೆದಿತ್ತು. ನಳಿನ್ ಕುಮಾರ್ ಕಟೀಲ್ ರವರ ರಾಜ್ಯಾಧ್ಯಕ್ಷ ಹುದ್ದೆಗೆ ಕುತ್ತು ಬರುತ್ತದೆ ಜೊತೆಗೆ ಸಂಸದ ಸ್ಥಾನವು ಕೈ ತಪ್ಪಿ ಹೋಗಲಿದೆ ಅನ್ನುವ ಕಾರಣಕ್ಕೆ ವಿರೋಧಿಗಳ ಶಕ್ತಿ ಕುಂದಿಸಲು ಶತ್ರು ಸಂಹಾರ ಯಾಗದ ಮೊರೆ ಹೋಗಿದ್ದಾರೆ ಅನ್ನುವ ಮಾತುಗಳು ಕೇಳಿಬಂದಿತ್ತು. ಕಟೀಲು ಅತ್ಯಾಪ್ತರಿಗೆ ಹೊರತುಪಡಿಸಿ ಇನ್ಯಾರಿಗೂ ಪ್ರವೇಶ ಇಲ್ಲದಿರುವುದರಿಂದ ಅನುಮಾನವು ಹೆಚ್ಚಾಗಿತ್ತು. ಕಟೀಲು ಸಂಸದರಾಗುವ ಮುನ್ನ ಪಾವಂಜೆಯಲ್ಲಿ ಚಂಡಿಕಾ ಗಣಹೋಮ ನಡೆಸಿದ ನಂತರವಷ್ಟೇ ಸಂಸದರಾಗಿ ಆಯ್ಕೆಯಾದದ್ದು. ಈ ಎಲ್ಲ ಕಾರಣ ನೋಡಿದಾಗ ಈ ಬಾರಿ ಕಟೀಲರಿಗೆ ಸ್ವಪಕ್ಷದಲ್ಲಿಯೇ ವಿರೋಧಿಗಳ ಸಂಖ್ಯೆ ಹೆಚ್ಚಾಗಿದ್ದು ಅವರನ್ನು ಮಟ್ಟ ಹಾಕಲು ಶತ್ರು ಸಂಹಾರ ಯಾಗದ ಮೊರೆ ಹೋಗಿದ್ದಾರೆ ಎನ್ನಲಾಗಿತ್ತು.
ಬಿಜೆಪಿ ರಾಜ್ಯಾಧ್ಯಕ್ಷರ ಮನೆಯಲ್ಲಿ ಚಂಡಿಕಾ ಹೋಮದ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಚರ್ಚೆಗಳು ವಿವಿಧ ಕೋನಗಳಲ್ಲಿ ನಡೆಯುತ್ತಿರುವುದರಿಂದ ಖುದ್ದು ನಳಿನ್ ಕುಮಾರ್ ಕಟೀಲ್ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ನೀಡಿದ್ದಾರೆ. ರಹಸ್ಯ ಪೂಜೆ ಎಂದು ಟ್ರೋಲ್ ಮಾಡುತ್ತಿದ್ದವರಿಗೆ ಉತ್ತರ ನೀಡಿದ್ದಾರೆ.

ನಳಿನ್ ಕುಮಾರ್ ಅವರ ಪುತ್ತೂರಿನ ಮನೆಯಲ್ಲಿ ಗೌಪ್ಯ ಪೂಜೆ ನಡೆಯುತ್ತಿದೆ. ಇದರ ಮಾಹಿತಿ ಯಾರಿಗೂ ಇಲ್ಲ. ಅದೆಂತಹ ಪೂಜೆ ಇರಬಹುದು ಅನ್ನುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿತ್ತು. ಈ ಸುದ್ದಿಗಳು ಹರಡುತ್ತಿರುವ ಬೆನ್ನಲ್ಲೇ ಕಟೀಲ್ ಅವರು ಫೋಟೋಗಳನ್ನು ತಾವೇ ತಮ್ಮ ಫೇಸ್ ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಇದು ಪಾಲ್ತಾಡಿ ಗ್ರಾಮದ ನಮ್ಮ ಮೂಲ ತರವಾಡು ಮನೆ ಕುಂಜಾಡಿಯಲ್ಲಿ ನಡೆಯುತ್ತಿರುವ ವಾರ್ಷಿಕ ಪೂಜಾ ಕಾರ್ಯಕ್ರಮದಲ್ಲಿ ಕುಟುಂಬ ಸದಸ್ಯರೊಂದಿಗೆ ಭಾಗಿಯಾದೆನು ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ರಾಜಕೀಯ ವಲಯದಲ್ಲಿ ಹರಿದಾಡುತ್ತಿದ್ದ ಅಂತೆ ಕಂತೆ ಸುದ್ದಿಗಳಿಗೆ ಪುಲಿಸ್ಟಾಪ್ ಹಾಕಿದ್ದಾರೆ.