ಹಗರಣಗಳು ಯಾವ ರೀತಿ ನಡೆಯುತ್ತದೆ ಎಂಬುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ. ಅದರಲ್ಲೂ ಬೆಚ್ಚಿಬೀಳಿಸುವಂತದ್ದು ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳ ಹೆಸರಿನಲ್ಲಿ ನಡೆದಂತವುಗಳು. ಪರವಾನಗಿ ನವೀಕರಣ ಅರ್ಜಿಗಳ ಪರಿಶೀಲನೆಯ ಸಂದರ್ಭದಲ್ಲಿ ಬಲು ದೊಡ್ಡ ಹಗರಣವೊಂದು ಬೆಳಕಿಗೆ ಬಂದಿದೆ. ಆಗ್ರಾ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ತಮ್ಮ ಹೆಸರಿನಲ್ಲಿ ನೋಂದಾಯಿಸಲಾದ 449 ಸಂಸ್ಥೆಗಳಲ್ಲಿ ಸುಮಾರು 15 ವೈದ್ಯರು ಕಾನೂನುಬಾಹಿರವಾಗಿ ಸೇವೆಗಳನ್ನು ಒದಗಿಸುತ್ತಿರುವುದು ಕಂಡುಬಂದಿದೆ.
ಅವರಲ್ಲಿ ಒಬ್ಬ ವೈದ್ಯ ಮೀರತ್, ಕಾನ್ಪುರ ಮತ್ತು ಪಶ್ಚಿಮ ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಬರೋಬ್ಬರಿ ಸುಮಾರು 83 ಆಸ್ಪತ್ರೆಗಳನ್ನು ತಮ್ಮ ಹೆಸರಿನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಈ ವೈದ್ಯರಿಗೆ ನೋಟಿಸ್ ಕಳುಹಿಸಲಾಗಿದೆ. ಈ ಸಂಬಂಧ ವಿವರವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಮುಖ್ಯ ವೈದ್ಯಾಧಿಕಾರಿ ಹೇಳಿದ್ದಾರೆ.
ಮೂಲಗಳ ಪ್ರಕಾರ, ವೈದ್ಯ ವೃತ್ತಿಗಾರರಲ್ಲದ ಜನರು ಆಸ್ಪತ್ರೆಗಳು, ಕ್ಲಿನಿಕ್‌ಗಳು ಮತ್ತು ಪೆಥಾಲಜಿ ಲ್ಯಾಬ್‌ಗಳನ್ನು ನಿರ್ವಹಿಸಲು ಆರೋಗ್ಯ ಇಲಾಖೆಯಿಂದ ವೈದ್ಯರ ಹೆಸರಿನಲ್ಲಿ ಪರವಾನಗಿ ಪಡೆಯುತ್ತಿದ್ದಾರೆ. ಈ ವರ್ಷ ಉತ್ತರ ಪ್ರದೇಶ ಸರ್ಕಾರವು ಪರವಾನಗಿ ನವೀಕರಣ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಮಾಡಬೇಕೆಂದು ಆದೇಶಿಸಿದ ನಂತರ ಹಗರಣವು ಬಹಿರಂಗವಾಗಿದೆ. ಆರೋಪಿತ ವೈದ್ಯಕೀಯ ವೃತ್ತಿಗಾರರ ಪಟ್ಟಿಯಲ್ಲಿ, ಹೃದ್ರೋಗ ತಜ್ಞರು, ಮಕ್ಕಳ ತಜ್ಞರು ಮತ್ತು ಶಸ್ತ್ರಚಿಕಿತ್ಸಕರು ಸೇರಿದ್ದಾರೆ. ಆರೋಗ್ಯ ಇಲಾಖೆಯ ದಾಖಲೆಗಳ ಪ್ರಕಾರ, 2022-2023ರಲ್ಲಿ 1,269 ವೈದ್ಯಕೀಯ ಕೇಂದ್ರಗಳನ್ನು ನೋಂದಾಯಿಸಲಾಗಿದೆ. ಇವುಗಳಲ್ಲಿ 494 ಆಸ್ಪತ್ರೆಗಳು, 493 ಕ್ಲಿನಿಕ್‌ಗಳು, 170 ಪೆಥಾಲಜಿ ಲ್ಯಾಬ್‌ಗಳು, 104 ಡಯಾಗ್ನೋಸ್ಟಿಕ್ ಸೆಂಟರ್‌ಗಳು, ಏಳು ಮಾದರಿ ಸಂಗ್ರಹ ಕೇಂದ್ರಗಳು ಮತ್ತು ಒಂದು ಡಯಾಲಿಸಿಸ್ ಕೇಂದ್ರ ಸೇರಿವೆ. ಅರ್ಜಿಗಳ ಪರಿಶೀಲನೆಯ ನಂತರ ಆರೋಗ್ಯ ಇಲಾಖೆಯು 2023-24ನೇ ಸಾಲಿಗೆ 570 ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳ ನೋಂದಣಿಯನ್ನು ನವೀಕರಿಸಿದೆ.
ವಿವಿಧ ಸಂದರ್ಭಗಳಲ್ಲಿ, ಪರವಾನಗಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸುವ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳು ತರಬೇತಿ ಪಡೆದ ಅರೆವೈದ್ಯಕೀಯ ಸಿಬ್ಬಂದಿ, ಅಗ್ನಿ ಸುರಕ್ಷತಾ ಮಾನದಂಡಗಳ ಅನುಸರಣೆ ಮತ್ತು ವೈದ್ಯಕೀಯ ತ್ಯಾಜ್ಯದ ವಿಲೇವಾರಿಗೆ ಸಂಬಂಧಿಸಿದ ಅಗತ್ಯ ವಿವರಗಳನ್ನು ಒದಗಿಸಿಲ್ಲ. ಹಾಸಿಗೆ ಸಾಮರ್ಥ್ಯ ಮತ್ತು ಇತರ ಸೌಲಭ್ಯಗಳ ಬಗ್ಗೆ ಒದಗಿಸಿದ ಮಾಹಿತಿಯು ಅನುಮಾನಾಸ್ಪದವಾಗಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ. ಇದೊಂದು ಗಂಭೀರ ವಿಷಯವಾಗಿದೆ, ನಾವು ಇಂತಹ ವಿಧಾನವನ್ನು ಖಂಡಿಸುತ್ತೇವೆ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಆರೋಗ್ಯ ಇಲಾಖೆಯನ್ನು ಬೆಂಬಲಿಸುತ್ತೇವೆ. ಸರ್ಕಾರವು ಅಂತಹ ಕೇಂದ್ರಗಳು ಮತ್ತು ವೈದ್ಯಕೀಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅವರೊಂದಿಗೆ ಸಂಬಂಧ ಹೊಂದಿರುವ ವೈದ್ಯರು ವಿರುದ್ಧವು ಕ್ರಮ ಕೈಗೊಳ್ಳಬೇಕು ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷರು ಹೇಳಿದ್ದಾರೆ