16ನೇ ವಿಧಾನಸಭೆಯ ಅಧಿವೇಶನದ ಮುಂದುವರಿದ ಉಪ-ಅಧಿವೇಶನ ಜುಲೈ ಮೂರರಿಂದ ಆರಂಭ; ಮೂರು ದಿನಗಳ ಕಾಲ ಶಾಸಕರಿಗೆ ತರಬೇತಿ ಶಿಬಿರ

ರಾಜ್ಯ

16ನೇ ವಿಧಾನಸಭೆಯ ಅಧಿವೇಶನದ ಮುಂದುವರಿದ ಉಪ ಅಧಿವೇಶನ ಇದೇ ಜುಲೈ ಮೂರರಿಂದ ಆರಂಭವಾಗಲಿದ್ದು, ಜುಲೈ 14ರ ವರೆಗೆ 10 ದಿನಗಳ ಕಾಲ ನಡೆಯಲಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜುಲೈ ಮೂರರಂದು ಮಧ್ಯಾಹ್ನ 12 ಗಂಟೆಗೆ ರಾಜ್ಯಪಾಲರು ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಅಧಿವೇಶನದಲ್ಲಿ ಮುಖ್ಯವಾಗಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆ ನಡೆದು ತದನಂತರ ನಿರ್ಣಯ ಅಂಗೀಕಾರ ವಾಗಲಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 7 ರಂದು 2023-24ನೇ ಸಾಲಿನ ಆಯವ್ಯಯ ಮಂಡಿಸಲಿದ್ದು, ಆಯವ್ಯಯದ ಮೇಲೆ ಸಾಮಾನ್ಯ ಚರ್ಚೆ ನಡೆದ ನಂತರ ಅನುದಾನದ ಬೇಡಿಕೆಗಳನ್ನು ಅಂಗೀಕರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.ಈ ಅಧಿವೇಶನದಲ್ಲಿ ಸರಕಾರದಿಂದ ಸ್ವೀಕರಿಸಲಾದ ವಿಧೇಯಕಗಳನ್ನು ಪರ್ಯಾಲೋಚನೆಗೆ ಹಾಗೂ ಅಂಗೀಕಾರಕ್ಕೆ ತೆಗೆದುಕೊಳ್ಳಲಾಗುವುದು. ಒಟ್ಟು 8 ದಿನಗಳ ಕಾಲ ಪ್ರಶ್ನೋತ್ತರ ಕಲಾಪ ನಿಗದಿಪಡಿಸಲಾಗಿದೆ ಎಂದರು.

ಇದರ ಜೊತೆಗೆ ಗಮನಸೆಳೆಯುವ ಸೂಚನೆಗಳು,ಶೂನ್ಯವೇಳೆ, ನಿಲುವಳಿ ಸೂಚನೆ, ನಿಯಮ 69ರ ಸೂಚನೆಗಳು,ಖಾಸಗಿ ಸದಸ್ಯರುಗಳು ಕಾರ್ಯಕಲಾಪಗಳನ್ನು ನಡೆಸಲಾಗುವುದು ಎಂದು ಸ್ಪೀಕರ್‌ ಯು.ಟಿ.ಖಾದರ್‌ ವಿವರಿಸಿದರು. 16ನೇ ವಿಧಾನಸಭೆಗೆ ಮೊದಲ ಬಾರಿಗೆ ನೂತನವಾಗಿ ಆಯ್ಕೆಯಾದ 70 ಶಾಸಕರಿಗೆ 3 ದಿನಗಳ ಕಾಲ ತರಬೇತಿ ಶಿಬಿರ ಏರ್ಪಡಿಸಲಾಗಿದೆ. ಜೂ.26ರಿಂದ ಜೂ.28ರವರೆಗೆ ಮೂರು ದಿನಗಳ ಕಾಲ ನಡೆಯುವ ತರಬೇತಿ ಶಿಬಿರದಲ್ಲಿ ಈ ನೂತನ ಶಾಸಕರಿಗೆ ಆರೋಗ್ಯ ಸುಸ್ಥಿರತೆ ಮತ್ತು ಜ್ಞಾನಾಭಿವೃದ್ಧಿಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ತಿಳಿಸಿದ್ದಾರೆ