ಕೋಮುವಾದ ತಡೆ, ಮತೀಯ ದ್ವೇಷದ ಹತ್ಯೆಯ ಮರು ತನಿಖೆಗೆ ಆಗ್ರಹಿಸಿ ಸಿ.ಎಂ ಬಳಿ ನಿಯೋಗ: ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆ

ಕರಾವಳಿ

“ದಕ್ಷಿಣ ಕನ್ನಡ ಜಿಲ್ಲಾ ಜಾತ್ಯಾತೀತ ಪಕ್ಷಗಳು ಮತ್ತು ಸಂಘಟನೆಗಳ ಜಂಟಿ ವೇದಿಕೆ, ಮಂಗಳೂರು” ಇದರ ಮಹತ್ವದ ಸಭೆಯು ಬಿ.ರಮಾನಾಥ ರೈ ಯವರ ಅಧ್ಯಕ್ಷತೆಯಲ್ಲಿ ಮಂಗಳೂರು ನಗರದಲ್ಲಿ ನಡೆಯಿತು. ಅವಿಭಜಿತ ದಕ್ಷಿಣ ಕ‌ನ್ನಡ ಜಿಲ್ಲೆಯಲ್ಲಿ ಆಳವಾಗಿ ಬೇರೂರಿರುವ ಕೋಮುವಾದವನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ತೆಗೆದು ಕೊಳ್ಳಬೇಕಾದ ಆದ್ಯತೆಯ ಕೆಲಸಗಳನ್ನು ಸರಕಾರಕ್ಕೆ ಮನವರಿಕೆ ಮಾಡಿಕೊಡಲು ಮುಖ್ಯಮಂತ್ರಿಗಳ ಬಳಿಗೆ ಜಿಲ್ಲಾ ಮಟ್ಟದ ನಿಯೋಗವನ್ನು ಕೊಂಡೊಯ್ಯಲು ತೀರ್ಮಾನಿಸಲಾಯಿತು.

ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಕೋಮು ಪ್ರಚೋದಕ ಕೃತ್ಯಗಳು,ವರ್ಗಿಯವಾದಕ್ಕಾಗಿ ನಡೆದ ಕೊಲೆಗಳ ಕುರಿತು ಸಭೆಯು ಚರ್ಚೆ ನಡೆಸಿ,ರಾಜ್ಯ ಹಾಗೂ ದೇಶದ ಯಾವ ಮೂಲೆಯಲ್ಲೂ ಘಟಿಸದ ಕೋಮು ದಳ್ಳುರಿಯ ಸರಣಿ ಕೊಲೆಗಳು ಎರಡು ದಶಕಗಳಿಂದ ಕರಾವಳಿ ಭಾಗದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವುದು,ಹಾಗೂ ಅಂತಹ ಕೊಲೆಗಳು ಜಿಲ್ಲೆಯಲ್ಲಿ ಮತೀಯ ದ್ವೇಷ, ಉದ್ವಿಗ್ನತೆ ಏರುಗತಿಗೆ ಕೊಂಡೊಯ್ದಿರುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ರಾಜಕೀಯ ಬೆಂಬಲದಿಂದ ನಡೆದಿರುವ ಕೊಲೆಗಳಲ್ಲಿ ಹೆಚ್ಚಿನ ಪ್ರಕರಣಗಳಲ್ಲಿ ಸರಿಯಾದ ತನಿಖೆ ನಡೆಸದೆ,ಕೊಲೆಯ ಹಿಂದಿರುವ ಶಕ್ತಿಗಳ ಪಾತ್ರ ಬಹಿರಂಗವಾಗದೆ, ನೈಜ ಕೊಲೆಗಾರರು ತಪ್ಪಿಸಿಕೊಂಡಿರುವುದು,ಅಂತಹ ಕೋಮು ಶಕ್ತಿಗಳು ಕಾನೂನು ಕ್ರಮಕ್ಕೆ ಒಳಗಾಗದಿರುವುದು,ಇಂತಹ ಸರಣಿ ಕೊಲೆಗಳು ತಡೆ ರಹಿತವಾಗಿ ಮುಂದುವರಿಯಲು ಪ್ರಧಾನ ಕಾರಣ. ಮತೀಯ ದ್ವೇಷದ ಕೊಲೆಗಳ ನೈಜ ಅಪರಾಧಿಗಳು,ಸೂತ್ರದಾರರು, ಅರ್ಥಿಕ ಸಹಾಯ ಒದಗಿಸುವವರು, ಕಾನೂನಿನ ಬಲೆಗೆ ಬಿದ್ದರೆ ಜಿಲ್ಲೆಯಲ್ಲಿ ಮತೀಯ ಹಿಂಸೆಗೆ ಬಹುತೇಕ ಕಡಿವಾಣ ಬೀಳಲಿದೆ.ಕುಟುಂಬದ ಸದಸ್ಯರನ್ನು ಕಳೆದುಕೊಂಡ ಸಂತ್ರಸ್ತರಿಗೆ ನ್ಯಾಯ ಒದಗಲಿದೆ. ಅದಕ್ಕಾಗಿ, ಕಳೆದ ಎರಡು ದಶಕಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ನಡೆದಿರುವ ಮತೀಯ ದ್ವೇಷದಿಂದ ಎಲ್ಲಾ ಹತ್ಯೆಗಳನ್ನು ಮರು ತನಿಖೆಗೆ ಒಳಪಡಿಸಬೇಕು,ತನಿಖೆಗಾಗಿ ಒಂದು ವಿಶೇಷ ತನಿಖಾ ತಂಡ ರಚಿಸಬೇಕು,ಅ ತಂಡಕ್ಕೆ ನಿಷ್ಠಾವಂತ ಅಧಿಕಾರಿಗಳನ್ನು ನೇಮಿಸಬೇಕು ಎಂದು ಸರಕಾರವನ್ನು ಒತ್ತಾಯಿಸಲು ನಿರ್ಧರಿಸಲಾಯಿತು.

ಕರಾವಳಿ ಭಾಗದಲ್ಲಿ ಕೋಮುವಾದ, ಜಾತ್ಯಾತೀತತೆ ಕುರಿತು ಸರಿಯಾದ ಅರಿವು ಮೂಡಿಸುವ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದು, ಆ್ಯಂಟಿ ಕಮ್ಯೂನಲ್‌ ವಿಂಗ್‌ಗೆ ದಕ್ಷ ಅಧಿಕಾರಿ, ಸಿಬ್ಬಂದಿಯನ್ನು ನೇಮಿಸುವುದು, ಕೋಮುವಾದಿ ಚಟುವಟಿಕೆಗೆ ಸಂಬಂಧಿಸಿ ಜಿಲ್ಲಾಡಳಿತಕ್ಕೆ ಸಹಕಾರ ನೀಡಲು ಸಿವಿಲ್‌ ವಾಚ್‌ ಸಮಿತಿ ರಚಿಸುವುದು, ದ್ವೇಷ ಭಾಷಣ, ಮತೀಯ ಸಂಘಟನೆಗಳನ್ನು ಹದ್ದು ಬಸ್ತಿನಲ್ಲಿಡಲು ದೃಢ ಕ್ರಮಗಳನ್ನು ರಾಜ್ಯ ಸರಕಾರ ಕೈಗೊಳ್ಳುವಂತಾಗಬೇಕು ಎಂದು ಸಭೆ ಅಭಿಪ್ರಾಯ ಪಟ್ಟಿತು

ಈ ಎಲ್ಲಾ ಬೇಡಿಕೆ,ಸಲಹೆಗಳನ್ನು ಒಳಗೊಂಡ ಮನವಿಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ವಿಶೇಷ ಸಭೆ ನಡೆಸಬೇಕು. ಅದಕ್ಕಾಗಿ ಜಿಲ್ಲಾಮಟ್ಟದ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿಗೆ ಕೊಂಡೊಯ್ಯಲು ಸಭೆ ತೀರ್ಮಾನಿಸಿತು.ಸಿಪಿಎಂ ರಾಜ್ಯ ಸಮಿತಿ ಸದಸ್ಯ ಮುನೀರ್‌ ಕಾಟಿಪಳ್ಳ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ. ಯಾದವ ಶೆಟ್ಟಿ‌, ಹಂಪಿ ವಿವಿಯ ವಿಶ್ರಾಂತ ಪ್ರೊ. ಡಾ.ಚಂದ್ರ ಪೂಜಾರಿ, ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ ರಾಯ್‌ ಕ್ಯಾಸ್ಟಲಿನೊ,ರೈತ ಸಂಘದ ಪ್ರೇಮನಾಥ ಶೆಟ್ಟಿ, ಕೃಷ್ಣಪ್ಪ ಸಾಲ್ಯಾನ್‌, ಎಂ.ಜಿ. ಹೆಗ್ಡೆ, ಡಾ. ಉದಯ ಕುಮಾರ್‌,ಕೆ ಅಶ್ರಫ್‌,ದಕ್ಷಿಣ ಕ‌‌ನ್ನಡ ಜಿಲ್ಲೆಯ ವಿವಿಧ ಜಾತ್ಯಾತೀತ ಪಕ್ಷಗಳು, ಸಮಾನ ಮನಸ್ಕ ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ‌ ಭಾಗವಹಿಸಿದ್ದರು.