‘ಹೃದಯಾ ಸ್ತಂಭನಕ್ಕೆ ಕಾರಣವಾಗುತ್ತಿದೆಯಾ.. ಕೋವಿಡ್ ವ್ಯಾಕ್ಸಿನ್.? ICMR ವರದಿ ಏನು ಹೇಳುತ್ತಿದೆ.

ರಾಷ್ಟ್ರೀಯ

ಕೊರೊನಾ ವೈರಸ್ ಅನ್ನು ತಡೆಯಲು ಸಿದ್ಧಪಡಿಸಿದ ಲಸಿಕೆ ಹೃದಯಾಘಾತದ ಅಪಾಯವನ್ನು ಹೆಚ್ಚಿಸಿದೆಯೇ ಎಂಬ ಚರ್ಚೆ ಆಗಾಗ ನಡೆಯುತ್ತಲೇ ಇದೆ. ಈ ಕುರಿತಂತೆ ಐಸಿಎಂಆರ್ ಕೂಡ ಅಧ್ಯಯನ ನಡೆಸುತ್ತಿದ್ದು ವರದಿ ಜುಲೈ ಆರಂಭದಲ್ಲಿ ಬರಬಹುದು. ಈ ಅಧ್ಯಯನದಲ್ಲಿ ಕೋವಿಡ್ 19 ಲಸಿಕೆ ಮತ್ತು ದೇಶದ ಯುವ ಜನಸಂಖ್ಯೆಯಲ್ಲಿ ಹೆಚ್ಚುತ್ತಿರುವ ಹೃದಯಾಘಾತಗಳ ನಡುವಿನ ಸಂಬಂಧವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ನಡೆದಿದೆ.

ವ್ಯಾಕ್ಸಿನೇಷನ್ ನಂತರ ನೈಸರ್ಗಿಕ ಕಾರಣಗಳಿಂದ ಜನರು ಸಾವನ್ನಪ್ಪಿದ್ದಾರೆಯೇ ಅಥವಾ ಬಹುತೇಕರ ಸಾವಿಗೆ ಕೋವಿಡ್ ಲಸಿಕೆ ಕಾರಣವಾಯಿತೇ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. 40 ಆಸ್ಪತ್ರೆಗಳಿಂದ ಡೇಟಾ ಸಂಗ್ರಹಿಸಲಾಗಿದ್ದು ಕ್ಲಿನಿಕಲ್ ನೋಂದಣಿ ಮಾಹಿತಿಯನ್ನು ತೆಗೆದುಕೊಳ್ಳಲಾಗಿದೆ. ಎಐಐಎಂಎಸ್ ನಿಂದ ಅನೇಕ ರೋಗಿಗಳ ಡೇಟಾವನ್ನು ಸಹ ತೆಗೆದುಕೊಳ್ಳಲಾಗಿದೆ. 14,000 ಮಾದರಿಗಳ ಪೈಕಿ, 600 ಸಾವುಗಳ ಬಗ್ಗೆ ಮಾಹಿತಿ ಲಭಿಸಿದೆ.

ಕೊರೊನಾ ನಂತರ ಹೃದಯಾಘಾತ ಪ್ರಕರಣಗಳು ಹೆಚ್ಚಿವೆ ಎಂಬುದನ್ನು ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವಿಯಾ ಕೂಡ ಒಪ್ಪಿಕೊಂಡಿದ್ದರು. ಈ ಬಗ್ಗೆ ಐಸಿಎಂಆರ್ ಕೂಡ ಅಧ್ಯಯನ ನಡೆಸುತ್ತಿದೆ ಎಂದು ಹೇಳಿದ್ದರು. ದೆಹಲಿಯ ಏಮ್ಸ್ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದವರ ಅಂಕಿ ಅಂಶವನ್ನು ಪರಿಶೀಲಿಸುತ್ತಿದೆ. ಕೋವಿಡ್ ಅಲೆಗಳ ಬಳಿಕ ಯುವಕರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾದವು.

ಇಂಡಿಯನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ ಕಳೆದ ವರ್ಷಗಳಲ್ಲಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ 50 ಪ್ರತಿಶತದಷ್ಟು ಜನರು ಮತ್ತು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ 25 ಪ್ರತಿಶತದಷ್ಟು ಜನರಲ್ಲಿ ಹೃದಯಾಘಾತದ ಅಪಾಯ ಕಂಡುಬಂದಿದೆ. ಇದರರ್ಥ ಯುವಕರಲ್ಲಿ ಹೃದಯಾಘಾತದ ಅಪಾಯ ಹೆಚ್ಚಾಗಿದೆ. ಮಹಿಳೆಯರಿಗಿಂತ ಹೆಚ್ಚು ಪುರುಷರು ಹೈದ್ರೋಗಕ್ಕೆ ಬಲಿಯಾಗುತ್ತಿದ್ದಾರೆ.

ರಕ್ತದೊತ್ತಡ, ಸಕ್ಕರೆ ಕಾಯಿಲೆ, ಒತ್ತಡ, ಬೊಜ್ಜು ಮತ್ತು ಗೊಂದಲಮಯ ಜೀವನಶೈಲಿಯೂ ಇದಕ್ಕೆ ಕಾರಣ. ಕೋವಿಡ್ ಸೋಂಕಿನ ನಂತರ ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ವೇಗವಾಗಿ ಹೆಚ್ಚುತ್ತಿದೆ ಎಂದು ಅನೇಕ ತಜ್ಞರು ನಂಬಿದ್ದಾರೆ. ಹಾಗಾಗಿ ಹೆಚ್ಚುತ್ತಿರುವ ಹೃದಯದ ಕಾಯಿಲೆಗಳಿಗೆ ಕೋವಿಡ್ ಕಾರಣ ಎನ್ನಲಾಗುತ್ತಿದೆ.