ಯೋಜನೆ ಯಾರದ್ದೋ..ಲಾಭ ಇನ್ಯಾರಿಗೋ.!
ಕರ್ನಾಟಕದಲ್ಲಿ ಚುನಾವಣಾ ಪೂರ್ವ ಕಾಂಗ್ರೆಸ್ ಪ್ರಣಾಳಿಕೆಯಂತೆ ಐದು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ‘ನುಡಿದಂತೆ ನಡೆದ ಸರಕಾರ’ ಅನ್ನುವ ಕೀರ್ತಿಯೂ ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿದೆ. ಈಗಾಗಲೇ ರಾಜ್ಯದಾದ್ಯಂತ ಸರಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಭರವಸೆಯನ್ನು ಈಡೇರಿಸಿದೆ. ಈ ಯೋಜನೆ ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾಗಿದೆ. ಅನ್ನಭಾಗ್ಯ, ಗೃಹಲಕ್ಷಿ ಯೋಜನೆಗೆ ತಯಾರಿ ನಡೆಯುತ್ತಿದೆ. ಈ ನಡುವೆ 200 ಯುನಿಟ್ ಉಚಿತ ಯೋಜನೆಯಾದ ಗೃಹಜ್ಯೋತಿ ಯೋಜನೆಗೆ ಆನ್ಲೈನ್ ಅರ್ಜಿ ಪ್ರಾರಂಭವಾಗಿದೆ.
ಗೃಹಜ್ಯೋತಿ ಗೆ ಸಂಬಂಧಿಸಿದ ಅರ್ಜಿಯ ವಿಧಾನ ಅತ್ಯಂತ ಸರಳವಾಗಿದ್ದು, ತಮ್ಮದೇ ಮೊಬೈಲ್ ಗಳಲ್ಲಿ ಈ ಅಪ್ಲಿಕೇಶನ್ ತುಂಬಿಸಬಹುದು. ಈಗಾಗಲೇ ಸರಕಾರ ಅರ್ಜಿ ಸಲ್ಲಿಸಲು ಶುಲ್ಕ ವಿಧಿಸಿರುವುದಿಲ್ಲ. ಉಚಿತವಾಗಿರುತ್ತದೆ.
ಆದರೆ ಕೆಲವೊಂದು ಭಾಗಗಳಲ್ಲಿ ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಸೆಂಟರ್ ಗಳು ಸಿಕ್ಕಿದ್ದೇ ಸೀರುಂಡೆ ಅನ್ನುವ ಮಾತಿನಂತೆ ಜನರಿಂದ ಸುಲಿಗೆಗೆ ಇಳಿದಿದೆ. ಒಂದು ಸೈಬರ್ ಕೇಂದ್ರಗಳಲ್ಲಿ 50 ರೂಪಾಯಿ ಶುಲ್ಕ ಪಡೆದರೆ, ಇನ್ನೊಂದು ಕಡೆ ಜನರಿಂದ 100 ರೂಪಾಯಿ ಶುಲ್ಕ ಪಡೆಯುತ್ತಿದೆ. ಜನರು ಈ ಬಗ್ಗೆ ಸಮರ್ಪಕ ಮಾಹಿತಿ ಕೊರತೆಯಿಂದ ಸೈಬರ್ ಸೆಂಟರ್ ಗೆ ತೆರಳಿ ಅರ್ಜಿ ಸಲ್ಲಿಸುತ್ತಿದ್ದಾರೆ. ತಮ್ಮ ಮನೆಯಲ್ಲಿಯೇ ಕೂತು ಇಂಟರ್ನೆಟ್ ಮಾಹಿತಿ ಇರುವ ಮಗ/ಮಗಳು/ಸೊಸೆ ಇವರ ಮೂಲಕವೇ ಅತ್ಯಂತ ಸುಲಭವಾಗಿ ಅರ್ಜಿ ಸಲ್ಲಿಸುವಂತಹ ಅವಕಾಶ ಇದೆ. ಅದಕ್ಕಾಗಿ ರಜೆ ಮಾಡಿ ಸೈಬರ್ ಸೆಂಟರ್ ಕಡೆ ದುಡ್ಡು ಕೊಟ್ಟು ಮಾಡುವ ಅಗತ್ಯವೇ ಇಲ್ಲ. ಸರಕಾರ ಅತ್ಯಂತ ಸರಳ ವಿಧಾನಗಳನ್ನು ನಾಗರೀಕರ ಅನುಕೂಲಕ್ಕಾಗಿ ಬಳಸುತ್ತಿದ್ದರೆ ಈ ಬಗ್ಗೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಮನೆ ಮನೆಗೆ ತೆರಳಿ ಮಾಹಿತಿ ನೀಡುವಂತಹ ಕೆಲಸ ಮಾಡಿದರೆ ಉಚಿತ ಯೋಜನೆ ಯಿಂದ ಜನರಿಗೆ ಅನುಕೂಲವಾಗುವ ಸಾಧ್ಯತೆ ಇದೆ.
ಚುನಾವಣಾ ಮುನ್ನ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ದಂಡು ದಂಡಾಗಿ ಮನೆ ಮನೆಗೆ ತೆರಳಿ ಗ್ಯಾರಂಟಿ ಕಾರ್ಡ್ ವಿತರಿಸುವಾಗ ಇದ್ದ ಹುಮ್ಮಸ್ಸು ಯೋಜನೆ ಜಾರಿಯಾದ ನಂತರ ಕಾಣುತ್ತಿಲ್ಲ. ಬಹುತೇಕ ಪಕ್ಷದ ಪುಡಿ ನಾಯಕರು ಆ ನಿಗಮ, ಈ ನಿಗಮ ಎಂದೇಳಿ ನಾಯಕರ ಹಿಂದೆ, ಬೆಂಗಳೂರು ಈ ರೀತಿ ಮುಖ ಮಾಡಿ ನಿಂತಿದ್ದಾರೆ. ಪಕ್ಷ ಮಾಡಿರುವ ಯೋಜನೆಗಳನ್ನು ನಾಗರೀಕರ ಮನೆ ಬಾಗಿಲಿಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ.
ಇವತ್ತಿನ ದಿನಗಳಲ್ಲಿ ಅಲ್ಲಲ್ಲಿ ನಾಯಿ ಕೊಡೆಗಳಂತೆ ಸೈಬರ್ ಸೆಂಟರ್ ಗಳು, ಮಾಹಿತಿ ಕೇಂದ್ರಗಳು, ಸೇವಾ ಸಿಂಧುಗಳು ಹುಟ್ಟಿಕೊಂಡಿದೆ. ಬಹುತೇಕ ಇವುಗಳು ಅನ್ಯ ಪಕ್ಷ, ಸಂಘಟನೆಗಳ ಹಿಡಿತದಲ್ಲಿರುವುದೇ ಹೆಚ್ಚು. ಕಾಂಗ್ರೆಸ್ ಪಕ್ಷ ಈ ಹಿಂದೆ ಅಧಿಕಾರ ಇದ್ದಾಗ ಇಂತಹ ಅಗತ್ಯವುಳ್ಳ ಕೆಲಸಗಳನ್ನು ಮಾಡಿರಲಿಲ್ಲ. ಪಕ್ಷದ ಸ್ಥಳೀಯ ನಾಯಕರು ಮಣ್ಣು, ಮರಳಿನ ಹಿಂದೆ ಹೋಗಿ ತಾವು ದುಂಡಗೆ ಬೆಳೆದಿದ್ದಾರೆಯೇ ಹೊರತು ಪಕ್ಷಕ್ಕೆ ಉಪಕಾರಿಯಾಗುವ ಕೆಲಸ ಮಾಡಿಲ್ಲ ಅನ್ನುವ ಮಾತುಗಳು ಇವೆ.
ಇಂದು ಕಾಂಗ್ರೆಸ್ ಪಕ್ಷ ಉಚಿತ ಯೋಜನೆಗಳನ್ನು ಜಾರಿ ತಂದಿದೆ ವಿಚಿತ್ರ ಅಂದರೆ ಬಹುತೇಕ ಕಡೆ ಈ ಅರ್ಜಿ ಸಲ್ಲಿಸಲು ಅನ್ಯ ಪಕ್ಷದ, ಸಂಘಟನೆಯವರ ಬಳಿ ಹೋಗುವ ಪರಿಸ್ಥಿತಿ ಉದ್ಭವವಾಗಿದೆ. ಯೋಜನೆ ಯಾರದ್ದೋ..ಲಾಭ ಪಡೆಯುವುದು ಇನ್ಯಾರೋ ಅನ್ನುವ ಪರಿಸ್ಥಿತಿ ಇದೆ.
ಕಾಂಗ್ರೆಸ್ಸಿಗರು ಇನ್ನಾದರೂ ಗ್ಯಾರಂಟಿ ಕಾರ್ಡ್ ಮನೆ ಮನೆಗೆ ವಿತರಿಸಿದ ರೀತಿಯಲ್ಲಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಮನೆ ಮನೆಗೆ ತೆರಳಿ ಕೆಲಸ ಮಾಡಿದರಷ್ಟೇ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಈ ಯೋಜನೆಗಳು ಲಾಭ ತರಬಹುದು. ಇಲ್ಲವಾದರೆ ಈ ಯೋಜನೆಗಳು ಪಕ್ಷಕ್ಕೆ ನೀರಲ್ಲಿಟ್ಟ ಹೋಮದಂತಾಗಬಹುದು.