ಈ ಸಾವುಗಳು ನ್ಯಾಯವೇ.? ಬಸ್ಸು ಮಾಫಿಯಾಕ್ಕೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು.?ಜನ ಪ್ರತಿನಿಧಿಗಳು, ಸಾರಿಗೆ ಅಧಿಕಾರಿಗಳು ನೇರ ಹೊಣೆ.

ಕರಾವಳಿ

ಮಂಗಳೂರು-ಮೂಡಬಿದ್ರೆ ರೂಟಿನಲ್ಲಿ ಸಂಚರಿಸುವ ಖಾಸಗಿ ಬಸ್ ಗಳ ಧಾವಂತಕ್ಕೆ ದ್ವಿಚಕ್ರ ಸವಾರರು ಬಲಿಯಾಗುತ್ತಿರುವ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಿನ್ನೆಯಷ್ಟೇ ಗುರುಪುರ ಜಂಕ್ಷನ್ ಬಳಿ ಬಸ್ ಡಿಕ್ಕಿಯಾಗಿ ದ್ವಿಚಕ್ರ ಸವಾರ ಸಾವನ್ನಪ್ಪಿದ ಘಟನೆಯನ್ನು ಖಂಡಿಸಿ ಸಾರ್ವಜನಿಕರು ಇಂದು ಗುರುಪುರ-ಕೈಕಂಬ ಜಂಕ್ಷನ್ ನಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.

ಖಾಸಗಿ ಬಸ್ ಗಳ ಧಾವಂತಕ್ಕೆ ಇತ್ತೀಚೆಗೆ ದ್ವಿಚಕ್ರ ವಾಹನಗಳ ಅಪಘಾತ ಹೆಚ್ಚಾಗುತ್ತಿದೆ. ಪೊಳಲಿ ಕರಿಯಂಗಳ ನಿವಾಸಿ ಬ್ಯಾಂಕ್ ಉದ್ಯೊಗಿ ಸಂತೋಷ್ ಕುಮಾರ್ ನಿನ್ನೆ ಗುರುಪುರ ಬಳಿ ಬಸ್ ಡಿಕ್ಕಿ ಹೊಡೆದು ಮೃತಪಟ್ಟಿದ್ದರು. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಕೈಕಂಬ ಜಂಕ್ಷನ್ ನಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಲಾಯಿತು.
ನೂರಾರು ಮಂದಿ ಸಾರ್ವಜನಿಕರು ಸೇರಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು. ವಾಹನಗಳನ್ನು ಸ್ಥಳದಿಂದ ತೆರಳಲು ಬಿಡದ ಹಿನ್ನೆಲೆಯಲ್ಲಿ ವಾಹನಗಳು ಕಿಲೋ ಮೀಟರ್ ದೂರ ಸಾಲಾಗಿ ನಿಂತಿದ್ದು, ಮೂಡುಬಿದಿರೆ- ಮಂಗಳೂರು, ಬಜಪೆ, ಪೊಳಲಿ, ಬಿ.ಸಿ.ರೋಡ್ ಮೊದಲಾದೆಡೆಗೆ ತೆರಳುವ ಪಯಾಣಿಕರು ಪರದಾಡುವಂತಾಯಿತು.

ಮೂಡಬಿದ್ರೆ-ಮಂಗಳೂರು ರೂಟಿನಲ್ಲಿ ಕನಿಷ್ಠ ಒಂದೇ ಒಂದು ಸರಕಾರಿ ಬಸ್ ಓಡಾಟ ನಡೆಸುತ್ತಿಲ್ಲ. ಇದರಿಂದಾಗಿ ಈ ರೂಟಿನಲ್ಲಿ ಏನಿದ್ದರೂ ಖಾಸಗಿ ಬಸ್ಸುಗಳದ್ದೇ ದರ್ಭಾರ್.! ಇವರ ಆರ್ಭಟಕ್ಕೆ ಕಡಿವಾಣ ಹಾಕುವವರೇ ಇಲ್ಲವಂತಾಗಿದೆ. ಈ ರೂಟಿನಲ್ಲಿ ಸಂಚರಿಸುವ ಖಾಸಗಿ ಬಸ್ಸುಗಳ ಆರ್ಭಟಕ್ಕೆ ಎಷ್ಟೊ ಅಮಾಯಕರು ತಮ್ಮ ಜೀವವನ್ನು ಕಳಕೊಂಡಿದ್ದಾರೆ. ಇತ್ತೀಚೆಗೆ ಮೂಡಬಿದ್ರೆ ಅಳ್ವಾಸ್ ಕಾಲೇಜು ವಿಧ್ಯಾರ್ಥಿಯೊಬ್ಬ ಖಾಸಗಿ ಬಸ್ಸೊಂದರ ಅಜಾಗರೂಕತೆಯ ಚಾಲನೆಯಿಂದಾಗಿ ತನ್ನ ಪ್ರಾಣವನ್ನೇ ಬಲಿಕೊಡಬೇಕಾಯಿತು. ಅವತ್ತು ಮೂಡಬಿದ್ರೆ, ಎಡಪದವು ಬಾಗದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ, ಈ ಬಗ್ಗೆ ಮೂಡಬಿದ್ರೆಯ ಸಮಾಜ ಮಂದಿರದಲ್ಲಿ ಸಭೆಯು ನಡೆದು ಕೆಲವು ಅಶ್ವಾಸನೆ, ಭರವಸೆ ನೀಡಿ ವಾರ ಕಳೆಯುವು ದರೊಳಗೆ ಖಾಸಗಿ ಬಸ್ಸಿನ ಆರ್ಭಟಕ್ಕೆ ಗುರುಪುರ ಬಳಿ ಯುವಕನೊಬ್ಬ ಪ್ರಾಣ ಕಳಕೊಳ್ಳುವಂತಾಯಿತು.

ಈ ರೂಟಿನಲ್ಲಿ ಟೈಮಿಂಗ್ಸ್ ನ ತಾಪತ್ರೆಯಿಂದ ಚಾಲಕರು ಸಹ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಬಸ್ಸು ಓಡಿಸುತ್ತಾರೆ. ಇದರಿಂದ ಪ್ರಯಾಣಿಕರ ಜೀವಕ್ಕೂ ಸಂಚಕಾರ, ಮಾತ್ರವಲ್ಲದೆ ಈ ಮಾರ್ಗದಲ್ಲಿ ಸಂಚರಿಸುವ ಇತರ ವಾಹನ ಸವಾರರಿಗೂ ಕಂಟಕ ತಪ್ಪಿದ್ದಲ್ಲ. ಇದಕ್ಕೆ ಮಂಗಳೂರು ಸಾರಿಗೆ ಅಧಿಕಾರಿಗಳೇ ನೇರ ಕಾರಣ. ಬಸ್ಸಿಗೆ ಟೈಮಿಂಗ್ ನೀಡುವ ವಿಷಯದಲ್ಲಿ ಬೇಜಾವಾಬ್ದಾರಿ, ಸಿಕ್ಕಾಪಟ್ಟೆ ಬಸ್ಸುಗಳಿಗೆ ಕಪ್ಪ ಪಡೆದು ಪರ್ಮಿಟ್ ನೀಡಿರುವುದು. ಮಾತ್ರವಲ್ಲದೆ ಈ ಅವಘಡಗಳ ಹಿಂದೆ ಬಸ್ ಮಾಫಿಯಾದ ಕರಾಳ ಹಸ್ತ ಚಾಚಿಕೊಂಡಿದೆ. ಇದು ಡ್ರೈವರ್ ಗಳಿಗೂ ಕಂಟಕವಾಗಿದೆ. ಬಸ್ಸಿನ ಡ್ರೈವರ್ ಗಳು ಟೈಮಿಂಗ್ ಗೆ ಸರಿಯಾಗಿ ಬರದಿದ್ದರೆ, ಟೈಮ್ ಕೀಪರ್ ಗಳಿಂದ ಬೈಗುಳ, ಬಸ್ಸನ್ನು ತಡೆದು ನಿಲ್ಲಿಸುವುದು, ಇಂತಹ ಘಟನೆಗಳು ನಡೆದು ಪರಸ್ಪರ ಗಲಾಟೆಗಳು ಕೂಡ ನಡೆದಿರುವ ಪ್ರಸಂಗ ಜರುಗಿದೆ. ಇದರಿಂದ ಬಸ್ಸು ಚಾಲಕರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ರಭಸದಲ್ಲಿ ಬಸ್ಸು ಚಲಾಯಿಸುವುದರಿಂದ ಇಂತಹ ಅವಘಡಗಳು ಅಗಾಗ ಸಂಭವಿಸುತ್ತಿದೆ.

ಇದಕ್ಕೆ ಕೇವಲ ಡ್ರೈವರ್, ಕಂಡೆಕ್ಟರ್ ಗಳನ್ನು ದೂರಿ ಪ್ರಯೋಜನವಿಲ್ಲ. ಬಸ್ಸಿನ ಮಾಲಕರು, ಸಾರಿಗೆ ಅಧಿಕಾರಿಗಳು,ಜನ ಪ್ರತಿನಿಧಿಗಳು ಮೂಲ ಕಾರಣ. ಇದಕ್ಕೆ ಸೂಕ್ತ ಪರಿಹಾರವೇನೆಂದರೆ ಈ ರೂಟಿನಲ್ಲಿ ಶೀಘ್ರವೇ ಸರಕಾರಿ ಬಸ್ಸುಗಳ ಸಂಚಾರಕ್ಕೆ ಅನುಕೂಲ ಮಾಡಿ ಕೊಡುವುದು ಮತ್ತು ಟೈಮಿಂಗ್ಸ್ ರದ್ದು ಪಡಿಸುವುದು. ಇದೇ ಇದಕ್ಕೆ ಸೂಕ್ತ ಪರಿಹಾರ. ಇಲ್ಲದಿದ್ದಲ್ಲಿ ಇನ್ನೂ ಅನೇಕ ಜೀವಗಳು ಬಲಿ ಬೀಳುವುದರಲ್ಲಿ ಸಂಶಯವಿಲ್ಲ.