ಕೋಮುವಾದದ ವಿರುದ್ಧದ ಹೋರಾಟ ನಿರಂತರ: ಸುನೀಲ್ ಕುಮಾರ್ ಬಜಾಲ್

ಕರಾವಳಿ

ಪ್ರಸಕ್ತ ಸನ್ನಿವೇಶದಲ್ಲಿ ಕೋಮುವಾದವೆಂಬ ವಿಷ ದೇಶದುದ್ದಗಲಕೂ ಆವರಿಸಿ ವಿಷಮ ಪರಿಸ್ಥಿತಿಯನ್ನು ನಿರ್ಮಿಸಿದೆ. ಕೇಂದ್ರದ ಬಿಜೆಪಿ ಸರಕಾರ ಇಂದು ಫ್ಯಾಸಿಸ್ಟ್ ಮಾದರಿಯಲ್ಲಿ ದೇಶವನ್ನಾಳುತ್ತಿದೆ. ಸಮಾಜದಲ್ಲಾಗುವ ಅನ್ಯಾಯ ದಬ್ಬಾಳಿಕೆಗಳ ವಿರುದ್ದ , ಬಿಜೆಪಿ ಸರಕಾರದ ಕೋಮು ರಾಜಕಾರಣದ ಆಡಳಿತ ನೀತಿಯ ವಿರುದ್ದ ಧ್ವನಿ ಎತ್ತಿದರೆ ಅಂತಹ ಧ್ವನಿಯನ್ನು ಹಿಂಸೆಯ ಮೂಲಕ ಹತ್ತಿಕ್ಕುವ ಅಥವಾ ದೇಶದ್ರೋಹದ ಪ್ರಕರಣ ದಾಖಲಿಸಿ ಹೋರಾಟವನ್ನು ಕುಗ್ಗಿಸುವ ದಮನಕಾರಿ, ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದೆ. ದೇಶದಾದ್ಯಂತ ಆರ್.ಎಸ್.ಎಸ್ ನಡೆಸುವ ಕ್ರೌರ್ಯಕ್ಕೆ ಎದುರಾಗಿ ಸಮಾಜದಲ್ಲಿ ಶಾಂತಿ ಸೌಹಾರ್ಧತೆ ನೆಲೆಸಲು ನಡೆದ ಹೋರಾಟದಲ್ಲಿ ಹಲವಾರು ಡಿವೈಎಫ್ಐನ ಯುವ ಹೋರಾಟಗಾರರು ತನ್ನ ಪ್ರಾಣವನ್ನು ಮುಡಿಪಾಗಿಟ್ಟು ಹುತಾತ್ಮರಾಗಿರುತ್ತಾರೆ. ಇಂತಹ ಹೋರಾಟದ ಪಥದಲ್ಲಿ ಮುನ್ನಡೆದ ಬಜಾಲ್ ಪ್ರದೇಶದ ಡಿವೈಎಫ್ಐ ಮುಖಂಡ ಶ್ರೀನಿವಾಸ್ ಬಜಾಲ್ ಹುತಾತ್ಮರಾಗಿರುತ್ತಾರೆ. ಅವರ ತ್ಯಾಗ, ಬಲಿದಾನ ಮತ್ತು ಆಶಯ ಇಂದಿನ ಯುವ ಪೀಳಿಗೆ ಮಾದರಿಯಾಗಿಟ್ಟುಕೊಂಡು ಕೋಮುವಾದದ ವಿರುದ್ಧದ ಹೋರಾಟ ನಿರಂತರಗೊಳಿಸಲಿದ್ದೇವೆ ಎಂದು ಡಿವೈಎಫ್ಐ ಮಾಜಿ ಮುಖಂಡರಾದ ಸುನೀಲ್ ಕುಮಾರ್ ಬಜಾಲ್ ಹುತಾತ್ಮ ಸಂಗಾತಿ ಶ್ರೀನಿವಾಸ್ ಬಜಾಲ್ ಅವರ 21ನೇ ವರುಷದ ಹುತಾತ್ಮ ದಿನಾಚರಣೆಯ ಅಂಗವಾಗಿ ಇಂದು(24-06-2023) ಬಜಾಲ್ ಪರಿಸರದಲ್ಲಿ ನಡೆದ ಕಾರ್ಯಕ್ರಮದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಮುಂದೆ ಡಿವೈಎಫ್ಐ ಮಂಗಳೂರು ನಗರ ಅಧ್ಯಕ್ಷರಾದ ಜಗದೀಶ್ ಬಜಾಲ್ ದ್ವಜಾರೋಹಣಗೈದು ಮಾತನಾಡುತ್ತಾ ಪರಿಸರದಲ್ಲಿ ಡಿವೈಎಫ್ಐ ಚಳುವಳಿ ಸಕ್ರಿಯವಾಗಿ ಬೆಳೆಯುವುದನ್ನು ಸಹಿಸದ ಮತಾಂದರರು ಯುವಜನ ಚಳುವಳಿಯನ್ನು ಇಲ್ಲವಾಗಿಸುವ ನಿಟ್ಟಿನಲ್ಲಿ ಆ ಸಂದರ್ಭದ ಡಿವೈಎಫ್ಐ ನಾಯಕತ್ವದಲ್ಲಿ ಪಾದರಸದಂತೆ ತೊಡಗಿಸಿಕೊಂಡಿದ್ದ ಯುವಕರಿಗೆ ಬಹಳ ಪ್ರೀತಿಪಾತ್ರನಾಗಿದ್ದ ಶ್ರೀನಿವಾಸ್ ಬಜಾಲ್ ನನ್ನು ನರಹಂತಕರು ಬಲಿ ಪಡೆದರು. ಶ್ರೀನಿವಾಸ್ ಬಜಾಲ್ ಇವತ್ತು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಆದರ್ಶ, ಬಲಿದಾನ ಇವತ್ತಿಗೂ ಜೀವಂತವಾಗಿ ನಮ್ಮೊಳಗಿದೆ ಎಂದರು.

ಈ ವೇಳೆ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಕಾರ್ಮಿಕ ಮುಖಂಡರಾದ ಸುರೇಶ್ ಬಜಾಲ್, ಅಶೋಕ್ ಸಾಲ್ಯಾನ್, ದೀಪಕ್ ಬಜಾಲ್ ಉಪಸ್ಥಿತರಿದ್ದರು. ಕಾರ್ಯಕ್ರಮದ ನೇತೃತ್ವವನ್ನು ಡಿವೈಎಫ್ಐ ಪಕ್ಕಲಡ್ಕ ಘಟಕದ ಕಾರ್ಯದರ್ಶಿ ಆನಂದ ಬಜಾಲ್ , ಅಧ್ಯಕ್ಷರಾದ ಜಗದೀಶ್ ಕುಲಾಲ್ , ಪ್ರಕಾಶ್ ಶೆಟ್ಟಿ, ವರಪ್ರಸಾದ್ ಕುಲಾಲ್, , ಅಶೋಕ್ ಎನೆಲ್ ಮಾರ್, ನಾಗರಾಜ್ ಬಜಾಲ್ , ಪ್ರೀತೇಶ್ ಮುಂತಾದವರು ವಹಿಸಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಶ್ರೀನಿವಾಸ್ ಬಜಾಲ್ ಹತ್ಯೆಯಾದ ಸ್ಥಳದಿಂದ ಘೋಷಣೆಗಳನ್ನು ಕೂಗುವ ಮೂಲಕ ಪಕ್ಕಲಡ್ಕ ಬಸ್ ನಿಲ್ದಾಣದವರೆಗೂ ಮೆರವಣೆಗೆ ನಡೆಸಲಾಯಿತು.