ಯು.ಟಿ.ಖಾದರ್ ಅವರಿಗೆ ಕೋಮುವಾದದ ಆಳ ಅಗಲದ ಅರಿವಿಲ್ಲ ಅಂದರೆ ಅದೊಂದು ದೊಡ್ಡ ತಮಾಷೆ: ಮುನೀರ್ ಕಾಟಿಪಳ್ಳ

ರಾಜ್ಯ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ದಶಕದಿಂದ ಸಕ್ರಿಯ ರಾಜಕಾರಣದಲ್ಲಿರುವ ಯು ಟಿ ಖಾದರ್ ಅವರಿಗೆ ಕೋಮುವಾದದ ಆಳ ಅಗಲ ದ ಅರಿವಿಲ್ಲ ಅಂದರೆ ಅದೊಂದು ದೊಡ್ಡ ತಮಾಷೆ. ಅದನ್ನು ನಂಬಲು ಯಾರೂ ಸಿದ್ದರಿಲ್ಲ.

ಕಳೆದ ಒಂದು ದಶಕದಲ್ಲಿ ನಡೆದ ಎಲ್ಲಾ ಚುನಾವಣೆಗಳಲ್ಲಿ ಖಾದರ್ ಅವರ ಕಾಂಗ್ರೆಸ್ ಪಕ್ಷ ಹೇಳ ಹೆಸರಿಲ್ಲದಂತೆ ಸೋಲು ಅನುಭವಿಸಲು, ಕಳೆದ ಎರಡು ವಿಧಾನ ಸಭೆ ಚುನಾವಣೆಯಲ್ಲಿ ಬೈಂದೂರಿನಿಂದ, ಸುಳ್ಯದವರಗೆ ಎಲ್ಲಾ ಕ್ಷೇತ್ರಗಳಲ್ಲಿ ಸೋತು ನೆಲೆ ಕಳೆದುಕೊಳ್ಳಲು (ಉಳ್ಳಾಲ ಕ್ಷೇತ್ರದಲ್ಲಿ ಮುಸ್ಲಿಂ, ಕ್ರೈಸ್ತ ಮತದಾರರು ಬಹುಸಂಖ್ಯಾತರು ಆಗಿರುವುದು ಬಿಜೆಪಿ ಗೆಲ್ಲಲು ತೊಡಕು) ಕಾರಣವಾದ ಕೋಮುವಾದದ ಪೋಷಕರನ್ನೇ ಪ್ರೇರಣಾ ಭಾಷಣಕ್ಕೆ ಖಾದರ್ ಅವರು ಆಹ್ವಾನಿಸುತ್ತಾರೆ, ಇಷ್ಟೆಲ್ಲಾ ವಿರೋಧದ ಹೊರತಾಗಿಯೂ ತನ್ನ ನಿಲುವಿಗೇ ಅಂಟಿಕೊಳ್ಳುತ್ತಾರೆ ಅಂತಾದರೆ ಇದು ಅರಿವಿನ ಕೊರತೆಯೂ ಅಲ್ಲ, ಅಮಾಯಕತನವೂ ಅಲ್ಲ, ಅಧಿಕಾರಿಗಳ ಆಟವೂ ಅಲ್ಲ. ಇದರ ಹಿಂದೆ ಒಂದು ಹಿಡನ್ ಅಜೆಂಡಾ ಇದೆ ಎಂದು ಭಾವಿಸಬೇಕಾಗುತ್ತದೆ. ಕರಾವಳಿಯ ಜಾತ್ಯಾತೀತ, ಜನಪರ ಸಂಘಟನೆಗಳು ಒಂದು ನಿರ್ಧಾರಕ್ಕೆ ಬರಬೇಕಾಗುತ್ತದೆ.