ಕರ್ನಾಟಕದಲ್ಲಿ ಸ್ಪಷ್ಟ ಬಹುಮತ ಪಡೆದಿರುವ ಕಾಂಗ್ರೆಸ್ ಇದೀಗ, ನಿಗಮ ಮಂಡಳಿಗಳ ನಿರ್ದೇಶಕರ ಸ್ಥಾನಕ್ಕೆ ಅರ್ಜಿ ಆಹ್ವಾನಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ.
ನಿಗಮ ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಈಗಾಗಲೇ ಚರ್ಚೆಗಳು ಆರಂಭವಾಗಿದೆ. ಆದರೆ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಿಗಮ ಮಂಡಳಿಗಳಿಗೆ ನಿರ್ದೇಶಕರ ನೇಮಕಕ್ಕೆ ಶಿಫಾರಸು ಮಾಡುವಂತೆ ಜಿಲ್ಲಾಧ್ಯಕ್ಷರಿಗೆ, ಸಂಸದರು, ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳಿಗೆ ಸೂಚನೆ ನೀಡಿದ್ದಾರೆ.
ಈ ಸ್ಥಾನಗಳು ಪಕ್ಷದ ಸಕ್ರಿಯ ಕಾರ್ಯಕರ್ತರಿಗೆ ಸಿಗಬೇಕು ಎನ್ನುವ ಉದ್ದೇಶದಿಂದ ಈ ರೀತಿಯ ಶಿಫಾರಸು ನೀಡುವಂತೆ ಸೂಚನೆ ನೀಡಲಾಗಿದೆ. ಪ್ರಮುಖವಾಗಿ ಇದನ್ನು ಮೂರು ಭಾಗವಾಗಿ ವಿಂಗಡಿಸಲಾಗಿದ್ದು, ರಾಜ್ಯ ಮಟ್ಟದ ನಿಗಮಗಳಿಗೆ, ಜಿಲ್ಲಾ ಮಟ್ಟದಲ್ಲಿರುವ ಸಮಿತಿ ಹಾಗೂ ತಾಲೂಕು ಮಟ್ಟದ ಸಮಿತಿಗಳಿಗೆ ಆಯ್ಕೆ ಮಾಡಲು ಶಿಫಾರಸು ಮಾಡಲು ಸೂಚನೆ ನೀಡಿದ್ದಾರೆ.
ಮೀಸಲಿನಂತೆ ಶಿಫಾರಸು: ಒಟ್ಟು 17 ವಿವಿಧ ಸಮಿತಿಗಳಿಗೆ ಶಿಫಾರಸು ಮಾಡುವಂತೆ ಎಲ್ಲ ಜಿಲ್ಲಾಧ್ಯಕ್ಷರಿಗೆ ಸೂಚನೆ ನೀಡಿರುವ ಡಿ.ಕೆ ಶಿವಕುಮಾರ್ ಅವರು, ಇದರಲ್ಲಿಯೂ ಮೀಸಲು ಕಲ್ಪಿಸಲು ಮುಂದಾಗಿದ್ದಾರೆ. ವಿದ್ಯಾರ್ಹತೆ, ಮಹಿಳಾ ಮೀಸಲು, ಪರಿಶಿಷ್ಟ ಜಾತಿ,ಪಂಗಡ, ಒಬಿಸಿ ಸೇರಿದಂತೆ ವಿವಿಧ ಮೀಸಲನ್ನು ಹಂಚಿ ಅದೇ ಪ್ರಕಾರವಾಗಿ ಶಿಫಾರಸು ಮಾಡುವಂತೆ ಸೂಚನೆ ನೀಡಿದ್ದಾರೆ. ಪಕ್ಷದ ಈ ನಡೆಯನ್ನು ಕಾರ್ಯಕರ್ತರು ಸ್ವಾಗತಿಸಿದ್ದಾರೆ. ಈ ರೀತಿ ಪಾರದರ್ಶಕವಾಗಿ ಶಿಫಾರಸು ಪಡೆಯುವುದರಿಂದ ಬೇಕಾದವರಿಗೆ ಶಿಫಾರಸು ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಹಲವು ಸಾಮಾನ್ಯ ಕಾರ್ಯಕರ್ತರಿಗೂ ಅವಕಾಶ ಸಿಗಲಿದೆ ಅನ್ನುವ ವಿಶ್ವಾಸವನ್ನು ಸ್ಥಳೀಯ ನಾಯಕರು ವ್ಯಕ್ತಪಡಿಸಿದ್ದಾರೆ.
ಹೊಸ ಸಂಪ್ರದಾಯಕ್ಕೆ ನಾಂದಿ: ಸಾಮಾನ್ಯವಾಗಿ ನಿಗಮ ಮಂಡಳಿಗಳಿಗೆ ಜಿಲ್ಲಾಧ್ಯಕ್ಷರು, ಶಾಸಕರು, ಸ್ಥಳೀಯ ಮುಖಂಡರು ಶಿಫಾರಸು ಮಾಡುವುದು ಸಹಜ ಪ್ರಕ್ರಿಯೆ. ಆದರೆ ಇದೇ ಮೊದಲ ಬಾರಿ ಮೀಸಲನ್ನು ಕಲ್ಪಿಸಿ ಶಿಫಾರಸು ಮಾಡುವಂತೆ ಸೂಚನೆ ನೀಡಿರುವುದು. ಈ ಮೂಲಕ ಪ್ರತಿ ಹಂತದಲ್ಲೂ ಪಾರದರ್ಶಕ ನೇಮಕವನ್ನು ಮಾಡುತ್ತೇವೆ ಎನ್ನುವ ಸಂದೇಶವನ್ನು ರವಾನಿಸುವ ಪ್ರಯತ್ನವನ್ನು ಡಿಕೆಶಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಯಾವ ಯಾವ ಹುದ್ದೆಗೆ ಶಿಫಾರಸು?
ರಾಜ್ಯಮಟ್ಟ: ನಿಗಮ-ಮಂಡಳಿ ನಿರ್ದೇಶಕರು
ಜಿಲ್ಲಾಮಟ್ಟ: ಡಿಸಿಸಿ ಬ್ಯಾಂಕ್, ಹಾಲು ಒಕ್ಕೂಟ, ಸಹಕಾರ ಸಂಘ, ಜಿಲ್ಲಾ ಕೆಡಿಪಿ, ಆಸ್ಪತ್ರೆಗಳ ಆರೋಗ್ಯ ರಕ್ಷಾ ಸಮಿತಿ, ಜಿಲ್ಲಾ ಹಾಪ್ ಕಾಮ್ಸ್
ತಾಲೂಕು ಮಟ್ಟ: ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್, ನಗರಾಭಿವೃದ್ಧಿ ಪ್ರಾಧಿಕಾರ, ನಗರ ಯೋಜನಾ ಪ್ರಾಧಿಕಾರ, ಪಟ್ಟಣ ಆಶ್ರಯ ಸಮಿತಿ, ಕ್ಷೇತ್ರ ಆರಾಧನಾ ಸಮಿತಿ, ತಾಲೂಕು ಭೂ ನ್ಯಾಯ ಮಂಡಳಿ, ಅಕ್ರಮ-ಸಕ್ರಮ ಸಮಿತಿ, ತಾಲೂಕು ಕೆಡಿಪಿ, ಎಪಿಎಂಸಿ, ಪಿಎಲ್ ಡಿ ಬ್ಯಾಂಕ್, ತಾಲೂಕು ಆಸ್ಪತ್ರೆಗಳ ಆರೋಗ್ಯ ರಕ್ಷಾ ಸಮಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ ಸಲಹಾ ಸಮಿತಿ