ಮಂಗಳೂರು ವಿ.ವಿ ಅಂಕಪಟ್ಟಿ ಪರಿಶೀಲನೆಗೆಂದು ಪಡಕೊಂಡ ಹೆಚ್ಚಿನ ಮೊತ್ತವನ್ನು ಹಿಂಪಾವತಿಸಲು ಒತ್ತಾಯಿಸಿ DYFI ಜಿಲ್ಲಾ ಸಮಿತಿ ಮನವಿ

ಕರಾವಳಿ

ಸಾರ್ವಜನಿಕ ಶಿಕ್ಷಣ ಇಲಾಖೆಯ ನೇಮಕಾತಿ ಜಿ.ಪಿ.ಎಸ್‌.ಟಿ.ಆರ್- 2022 ರಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ನೇಮಕಾತಿ ಪರಿಶೀಲನೆಗೆ ತಮ್ಮ ಹಳೆ ವಿದ್ಯಾರ್ಥಿಗಳು ಪ್ರತಿ ಅಂಕಪಟ್ಟಿ/ ಪ್ರಮಾಣಪತ್ರಕ್ಕೆ 1500 ಯಂತೆ ಪಾವತಿಸಿರುತ್ತಾರೆ. ಇದರಂತೆ ಒಂದು ದೊಡ್ಡ ಪ್ರಮಾಣದ ಮೊತ್ತವನ್ನು ವಿದ್ಯಾರ್ಥಿಗಳಿಂದ ವಿಶ್ವವಿದ್ಯಾಲಯವು ಸಂಗ್ರಹಿಸಿರುತ್ತದೆ. ಪ್ರತಿ ವಿದ್ಯಾರ್ಥಿಗಳಿಂದ ಅಂದಾಜು 18,000 ದಷ್ಟು ಮೊತ್ತವನ್ನು ವಿಶ್ವವಿದ್ಯಾಲಯವು ಚಲನ್ ರೂಪದಲ್ಲಿ ಸಂಗ್ರಹಿಸಿದ್ದು ಸುಮಾರು 130 ಅಭ್ಯರ್ಥಿಗಳಿಂದ ಸಂಗ್ರಹವಾದ ನಂತರದಲ್ಲಿ ಈ ಮೊತ್ತವನ್ನು 500 ರೂಪಾಯಿಗಳಿಗೆ ಇಳಿಸಲಾಗಿದೆ. ಆದರೆ ಈ ಹಿಂದೆ ಪ್ರತಿಗಳಿಗೆ 1500ನಂತೆ ಪಾವತಿಸಿರುವ ಅಭ್ಯರ್ಥಿಗಳಿಗೆ ವಿಶ್ವವಿದ್ಯಾಲಯ ಪಡೆದುಕೊಂಡ ಹೆಚ್ಚುವರಿ ಮೊತ್ತವನ್ನು ಹಿಂತಿರುಗಿಸಿಲ್ಲ. ಇಂತಹ ದುಬಾರಿ ಮೊತ್ತದಿಂದ ಅನೇಕ ಅಭ್ಯರ್ಥಿಗಳಿಗೆ ಆರ್ಥಿಕವಾದ ಸಮಸ್ಯೆಗಳಾಗಿವೆ.

ಹಾಗಾಗಿ ಈ ಎಲ್ಲಾ ಅಂಶಗಳನ್ನು ಮನಗೊಂಡು,ಮಂಗಳೂರು ವಿಶ್ವವಿದ್ಯಾನಿಲಯವು ಅಂಕಪಟ್ಟಿ ಪರಿಶೀಲನೆಗೆಂದು ಅಭ್ಯರ್ಥಿಗಳಿಂದ ಪಡೆದುಕೊಂಡಿರುವ ಹೆಚ್ಚಿನ ಮೊತ್ತವನ್ನು ಹಿಂಪಾವತಿಸಲು ಒತ್ತಾಯಿಸಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಹಾಗೂ ಕುಲಸಚಿವರಿಗೆ ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ನಿಯೋಗವು ಇಂದು (27-06-2023) ಮನವಿಯನ್ನು ಸಲ್ಲಿಸಿದೆ. ನಿಯೋಗದಲ್ಲಿ ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರು, ನಗರ ಕಾರ್ಯದರ್ಶಿ ನವೀನ್ ಕೊಂಚಾಡಿ, ಜಿಲ್ಲಾ ಮುಖಂಡರಾದ ರಝಾಕ್ ಮೊಂಟೆಪದವು, ರಝಾಕ್ ಮುಡಿಪು, ನವಾಜ್ ದೇರಳಕಟ್ಟೆ ಮುಂತಾದವರು ಉಪಸ್ಥಿತರಿದ್ದರು.