ಅಕ್ರಮ ಮದ್ಯ ಮಾರಾಟ ಪ್ರಕರಣ : ಆರೋಪಿಗೆ ನಿರೀಕ್ಷಣಾ ಜಾಮೀನು

ಕರಾವಳಿ

ಪುತ್ತೂರು :ಅಕ್ರಮ ಮದ್ಯ ಮಾರಾಟ ಪ್ರಕರಣದ ಆರೋಪಿ ಎನ್ನಲಾಗಿದ್ದ ವಿನೋದ್ ಕುಮಾರ್ ರೈ ಯವರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಪುತ್ತೂರು ತಾಲೂಕು ಒಳಮೋಗ್ರು ಗ್ರಾಮದ ಕೈಕಾರ ಪನಡ್ಕ ಎಂಬಲ್ಲಿ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ, ಗೋಣಿ ಚೀಲದಲ್ಲಿ ಮದ್ಯವನ್ನು ಮಾರಾಟ ಮಾಡಿ, ಹಣ ಪಡೆದಿರುವುದಾಗಿ ಆರೋಪಿಯೆನ್ನಲಾಗಿದ್ದ ವಿನೋದ್ ಕುಮಾರ್ ರೈ ಯವರ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅಬಕಾರಿ ಕಾಯಿದೆಯನ್ವಯ ಪ್ರಕರಣ ದಾಖಲಿಲಾಗಿತ್ತು.

ಈ ವಿಚಾರ ತಿಳಿದ ವಿನೋದ್ ಕುಮಾರ್ ರೈ ಯವರು ಪುತ್ತೂರಿನ ಖ್ಯಾತ ನ್ಯಾಯಾವಾದಿಗಳಾದ ಶ್ರೀ ಮಹೇಶ್ ಕಜೆ ಯವರ ಮುಖಾಂತರ ಪುತ್ತೂರಿನ ಮಾನ್ಯ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದರು.ಪ್ರಕರಣದ ಆರೋಪಿ ಎನ್ನಲಾದ ವಿನೋದ್ ಕುಮಾರ್ ರೈಯವರು ಕೃತ್ಯವನ್ನು ಮಾಡಿದ್ದಾರೆ ಎಂಬುವುದಕ್ಕೆ ಸಂಬಂಧಿಸಿದಂತೆ ಯಾವುದೇ ಪೂರಕವಾದ ಸಾಕ್ಷ್ಯಧಾರಗಳು ಕಂಡು ಬಂದಿರುವುದಿಲ್ಲ.ಎಂಬಿತ್ಯಾದಿ ಅಂಶಗಳನ್ನು ವಕೀಲರು ವಾದಿಸಿದ್ದರು. ಸರಕಾರಿ ಅಭಿಯೋಜಕರು ಆರೋಪಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪವನ್ನು ಸಲ್ಲಿಸಿದ್ದರು. ವಾದ -ವಿವಾದವನ್ನು ಆಲಿಸಿದ ಪುತ್ತೂರಿನ ಮಾನ್ಯ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಸರಿತಾ. ಡಿ ಯವರು ಆರೋಪಿಗೆ ಶರತ್ತು ಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುತ್ತಾರೆ.ಆರೋಪಿತರ ಪರವಾಗಿ ಪುತ್ತೂರಿನ ಖ್ಯಾತ ನ್ಯಾಯವಾದಿ ಮಹೇಶ್ ಕಜೆ ವಾದಿಸಿದ್ದರು.