ಮಿಜಾರು: ನವೀನ್ ಹತ್ಯಾ ಆರೋಪಿಗಳಾದ ಪೊಂಗು ರಮೇಶ ಮತ್ತು ನಿತ್ಯಾನಂದ ಇಬ್ಬರಿಗೆ ಜೀವಾವಧಿ ಶಿಕ್ಷೆ

ಕರಾವಳಿ

ಬಡಗ ಎಡಪದವಿನ ನವೀನ ಎಂಬವರ ಕೊಲೆ ಪ್ರಕರಣದ ಆರೋಪಿಗಳಿಗೆ ಮಂಗಳೂರಿನ 6 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್.ವಿ ಅವರು ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಮಂಗಳೂರು ತಾಲೂಕು ಬಡಗ ಎಡಪದವು ನಿವಾಸಿ ರಮೇಶ್ ಶೆಟ್ಟಿಗಾರ್ ಯಾನೆ ಪೊಂಗು ರಮೇಶ ಮತ್ತು ನಿತ್ಯಾನಂದ ಶಿಕ್ಷೆಗೊಳಗಾದ ಆರೋಪಿಗಳು.

ಹಣದ ವ್ಯವಹಾರ ಮತ್ತು ರಮೇಶ್ ಶೆಟ್ಟಿಗಾರ್ ಯಾನೆ ಪೊಂಗು ರಮೇಶನ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾನೆ ಎಂಬ ದ್ವೇಷದಿಂದ ಆರೋಪಿಗಳು 2019 ರ ಮೇ 17 ರಂದು ರಾತ್ರಿ 11.50 ಕ್ಕೆ ಬಡಗ ಎಡಪದವು ಗ್ರಾಮದ ದೂಮ ಚಡವು ದಡ್ಡಿ ಕ್ರಾಸ್ ಎಂಬಲ್ಲಿ ನವೀನ ಎಂಬವರ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದರು. ಆನಂತರ ತಮ್ಮ ಬಟ್ಟೆ,ಬರೆಗಳನ್ನು ಕಾಡಿನಲ್ಲಿ ಸುಟ್ಟು ಹಾಕಿ ಸಾಕ್ಷ್ಯ ನಾಶ ಮಾಡಿದ್ದರು. ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಅಂದಿನ ಪೊಲೀಸ್ ನಿರೀಕ್ಷಕ ಕೆ.ಆರ್.ನಾಯ್ಕ್ ಅವರು ತನಿಖೆ ನಡೆಸಿ ಆರೋಪಿಗಳ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗಳಿಗೆ ಐಪಿಸಿ ಕಲಂ 302 ರಡಿಯಲ್ಲಿ ಕಠಿಣ ಜೀವಾವಧಿ ಶಿಕ್ಷೆ, 2 ಲಕ್ಷ ರೂಪಾಯಿ ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 2 ವರ್ಷ ಕಠಿಣ ಸಜೆ, ಕಲಂ 201 ರಡಿಯಲ್ಲಿ 7 ವರ್ಷಗಳ ಕಠಿಣ ಸಜೆ,1 ಲಕ್ಷ ರೂಪಾಯಿ ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 1 ವರ್ಷ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.ಅಲ್ಲದೆ ಕೊಲೆಯಾದ ನವೀನನ ತಾಯಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶ ನೀಡಿದ್ದಾರೆ.