ದಿಗ್ಭಂಧನದಲ್ಲಿ ಕೈಕಂಬ,ವಿಕಾಸ ನಗರದ ನಾಗರಿಕರು,ರಸ್ತೆಯೇ ಮಾಯ.! ರಾಷ್ಟ್ರೀಯ ಹೆದ್ದಾರಿ ಕೃಪೆ.
ಮೂಡಬಿದ್ರೆ: ರಾಷ್ಟ್ರೀಯ ಹೆದ್ದಾರಿ ಬಿಕರ್ನಕಟ್ಟೆ- ಸಾಣೂರು 169 ರ ರಸ್ತೆ ಅಗಲೀಕರಣ ಕಾಮಗಾರಿ ಕಳೆದ ಕೆಲವು ತಿಂಗಳಿನಿಂದ ನಡೆಯುತ್ತಿದ್ದು, ಕಾಮಗಾರಿಯೂ ಅವೈಜ್ಞಾನಿಕವಾಗಿ ಆಮೆಗತಿಯಲ್ಲಿ ಸಾಗುತ್ತಿದೆ. ಈ ನಡುವೆ ಗಂಜಿಮಠ, ಸೂರಲ್ಪಾಡಿ, ಕೈಕಂಬ, ವಿಕಾಸನಗರ,ಸಾಣೂರು ಸಮೀಪದಿಂದ ಹಾದು ಹೋಗುವ ರಸ್ತೆಗೆ ಮಣ್ಣು ಹಾಕಲಾಗಿದ್ದು ಪರಿಸರ ಕೆಸರುಮಯವಾಗಿ ಕಂಬಳದ ಗದ್ದೆಯಂತಾಗಿದೆ. ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುವ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯವಸ್ಥಿತವಾಗಿ ಮಾಡಬೇಕಾಗಿರುವುದು ಸಂಬಂಧಿಸಿದವರ ಜವಾಬ್ದಾರಿಯಾಗಿರುತ್ತದೆ. ಆದರೆ ಈ ಪರಿಸರದಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆಯುಂಟಾಗಿದ್ದು ಇದಕ್ಕೆ ಹೆದ್ದಾರಿ ಇಲಾಖೆಯೇ ನೇರ ಹೊಣೆಗಾರರಾಗಿರುತ್ತಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವ್ಯವಸ್ಥಿತ ಕಾಮಗಾರಿಯಿಂದ ವಿಕಾಸನಗರ ಪ್ರವೇಶಿಸುವ ರಸ್ತೆ ಸಂಪೂರ್ಣ ಜಲಾವೃತಗೊಂಡು ಮನೆ ಮನೆಗೆ ನೀರು ನುಗ್ಗಿ ಗದ್ದೆಯಂತಾಗಿದೆ.ರಾತ್ರೊ ರಾತ್ರಿ ವಿಕಾಸನಗರದ ನಿವಾಸಿಗಳು ಪಾಪ ಮನೆಗೆ ನೀರು ನುಗ್ಗಿದುದರಿಂದ ಕಂಗಾಲಾಗಿದ್ದಾರೆ.ಪಕ್ಕದಲ್ಲೆ ಇರುವ ಟ್ರಾನ್ಸ್ ಪರ್ಮ್ ಮುಳುಗುವ ಸಂಭವವಿದೆ. ಪರಿಸರದಲ್ಲಿ ಮನೆ-ಮಠಗಳು, ಧಾರ್ಮಿಕ ಕ್ಷೇತ್ರಗಳಿದ್ದು, ರಸ್ತೆಯದ್ದಕ್ಕೂ ಮಣ್ಣು ರಾಶಿ ಹಾಕಿ ಅವೈಜ್ಞಾನಿಕವಾಗಿ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೂ, ಅಸುಪಾಸಿನ ನಿವಾಸಿಗಳಿಗೂ ಬಹಳ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಸಾಣೂರು ಸರಕಾರಿ ಪ್ರೌಢಶಾಲೆ ಕಟ್ಟಡಗಳ 169 ಹೆದ್ದಾರಿ ಬದಿಯಿಂದ ಕೆಲವೇ ಮೀಟರ್ ದೂರದಲ್ಲಿದೆ. ಹೆದ್ದಾರಿ ಕಾಮಗಾರಿ ವೇಳೆ ವಾಹನಗಳ ಸುಗಮ ಸಂಚಾರಕ್ಕಾಗಿ ಪ್ರೌಡ ಶಾಲಾ ಪಕ್ಕದಲ್ಲೆ 20 ಅಡಿ ಆಳದವರೆಗೆ ಮಣ್ಣು ಕೊರೆಯಲಾಗಿದೆ.ಇದೀಗ ನಿರಂತರವಾಗಿ ಮಳೆ ಸುರಿಯುವುದರಿಂದ ಹೆದ್ದಾರಿ ಪಕ್ಕ ಇರುವ ಶಾಲೆ ಕಟ್ಟಡ, ಪಶು ಚಿಕಿತ್ಸಾಲಯ ಕಟ್ಟಡವು ಕುಸಿಯುವ ಬೀತಿಯಲ್ಲಿದೆ.ಪಕ್ಕದಲ್ಲಿ ಹೈಟೆನ್ಷನ್ ವೈಯರ್ ಹಾದು ಹೋಗಿದ್ದು, ಗುಡ್ಡದ ಕುಸಿದರೆ ಪ್ರಾಣ ಹಾನಿಯು ಸಂಭವಿಸಬಹುದು.
ಹೆದ್ದಾರಿಯ ಸುತ್ತ-ಮುತ್ತ ಗದ್ದೆಯಾಗಿ ಮಾರ್ಪಟ್ಟಿದೆ. ರಾಷ್ಟ್ರೀಯ ಹೆದ್ದಾರಿಗೆ ಕಳಪೆ ಗುಣಮಟ್ಟದ ಡಾಮರು ಹಾಕಿ ತೇಪೆ ಹಚ್ಚಲಾಗಿದೆ. ಕಳಪೆ ಡಾಮಾರಿಕರಣದಿಂದ ಒಂದೇ ಮಳೆಗೆ ರಸ್ತೆಯಲ್ಲಿ ಗುಂಡಿಗಳು ಉಧ್ಬವಿಸಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆ ಮಾಯವಾಗಿ ಗದ್ದೆಯಾಗಿದೆ. ವಾಹನಗಳು ಗುಂಡಿಗೆ ಬಿದ್ದು ಸವಾರರು ನೇರವಾಗಿ ಗ್ಯಾರೇಜ್ ಗೆ ಹೋಗಬೇಕೊ.. ಅಸ್ಪತ್ರೆ ಸೇರಬೇಕು.? ಎಂಬುವಂತಾಗಿದೆ.ಈ ಮಾರ್ಗದಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡ ಹಲವಾರು ಉದಾಹರಣೆಗಳಿವೆ. ಕೆಲವು ಮಂದಿ ಸವಾರರು ಮೂಳೆ ಮುರ್ಕ್ಕೊಂಡು ಅಸ್ಪತ್ರೆ ಸೇರಿರುತ್ತಾರೆ. ಡೈನೇಜ್, ತೋಡುಗಳನ್ನು ಮಣ್ಣು ಹಾಕಿ ಮುಚ್ಚಿದರಿಂದ ಮಳೆಗಾಲದ ಮಳೆ ನೀರು ಅಲ್ಲಲ್ಲಿ ತುಂಬಿ ಕೃತಕ ನೆರೆ ಸೃಷ್ಠಿಯಾಗಿ ಹಲವು ಕಡೆ ಮನೆಗಳಿಗೆ ಹರಿದು ಬರುತ್ತಿದೆ.ಕೆಲವು ಕಡೆ ವಿದ್ಯುತ್ ಕಂಬಗಳು ವಾಲಿಕೊಂಡಿದೆ.
ರಸ್ತೆ ಅಗಲೀಕರಣಕ್ಕೆ ಮಣ್ಣು ಹಾಕಿ, ಮಾರ್ಗದ ಮಧ್ಯೆ ಅಲ್ಲಲ್ಲಿ ಗುಂಡಿ ತೋಡಿ, ಯಾವುದೇ ಸೂಚನಾ ಫಲಕ ಅಳವಡಿಸದೆ, ಮುಂಜಾಗ್ರತಾ ಕ್ರಮ ವಹಿಸದೆ ವಾಹನ ಸವಾರರ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಸಂಬಂದ ಪಟ್ಟವರು. ಹೆದ್ದಾರಿ ಕಾಮಗಾರಿಯಿಂದ ಕೆಲವು ಕಡೆಗಳಲ್ಲಿ ಅತೀ ಹೆಚ್ಚು ಸಮಸ್ಯೆ ಉಂಟಾಗಿದ್ದು ಕುಡಿಯುವ ನೀರು, ಡೈನೇಜ್ ಎನ್ನುತ್ತಾರೆ ಸ್ಥಳೀಯ ನಾಗರಿಕರು.
ರಸ್ತೆ ಕಾಮಗಾರಿ ಕೆಲಸ ಮಾಡುವಾಗ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ನಡೆಸುವುದು ವಾಡಿಕೆ. ಆದರೆ ಅದೆಲ್ಲವನ್ನು ಇಲ್ಲಿ ಕಡೆಗಣಿಸಲಾಗಿದೆ. ಗುತ್ತಿಗೆದಾರರಿಗೆ, ಇಲಾಖಾ ಇಂಜನಿಯರ್‌ಗಳಿಗೆ ಕರೆ ಮಾಡಿದರೆ ವ್ಯವಸ್ಥೆ ಮಾಡುವುದಾಗಿ ಹೇಳುತ್ತಿದ್ದಾರೆ ವಿನಃ ವ್ಯವಸ್ಥೆ ಮಾಡುತ್ತಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ.
ಕಾಮಗಾರಿ ನಡೆಯುವ ಪರಿಸರದಲ್ಲಿ ಸೂಚನಾ ಪಲಕವಿಲ್ಲ, ಮುಂಜಾಗ್ರತ ಕ್ರಮ ವಹಿಸಿಲ್ಲ. ರಿಪ್ಲೆಕ್ಟರ್ ಅಳವಡಿಸಿಲ್ಲ, ಕಾನೂನು ರೀತಿಯಲ್ಲಿ ಕರ್ತವ್ಯ ಪಾಲಿಸುತ್ತಿಲ್ಲ. ರಸ್ತೆಯ ಮದ್ಯದಲ್ಲೇ ದೊಡ್ಡ, ದೊಡ್ಡ ಗುಂಡಿ ತೋಡಿ ಇಡಲಾಗಿದೆ. ಗುಂಡಿಗಳಲ್ಲಿ ಮಳೆ ನೀರು ತುಂಬಿದರಿಂದ ಇದು ವಾಹನ ಸವಾರರಿಗೆ ಮರಣ ಗುಂಡಿಯಾಗಿ ಪರಿಣಮಿಸಿದೆ. ರಾತ್ರಿ ಪ್ರಯಾಣಿಕರ ಗತಿ ಅದೋಗತಿ.! ವಂಡೇಲಾದಿಂದ ಕೈಕಂಬದವರೆಗೆ ಅಲ್ಲಲ್ಲಿ ಗುಂಡಿಗಳನ್ನು ತೋಡಿ ಇಡಲಾಗಿದೆ.ಈ ಗುಂಡಿಗೆ ಬಿದ್ದವರೆಷ್ಟು.? ಎದ್ದು ಹೋದವರೆಷ್ಟು.? ಸೊಂಟದ ಕೀಲಿ ಮುರ್ಕೊಂಡವರೆಷ್ಟು.? ಆದರೂ ಅರ್ಥವಾಗುತ್ತಿಲ್ಲ ಗುತ್ತಿಗೆದಾರರಿಗೂ.. ಅಧಿಕಾರಿಗಳಿಗೂ.! ಮುಂದಿನ ದಿನಗಳಲ್ಲಿ ಈ ಸಮಸ್ಯೆಗೆ ಕೂಡಲೇ ಪರಿಹಾರ ಕಾಣಬೇಕು. ವ್ಯವಸ್ಥಿತವಾಗಿ ಕಾಮಗಾರಿಕೆ ನಡೆಸಬೇಕು. ನಾಗರಿಕರಿಗೆ, ಪರಿಸರದ ನಿವಾಸಿಗಳಿಗೆ, ವಾಹನ ಸವಾರರಿಗೆ ತೊಂದರೆಯಾಗದಂತೆ ನೋಡಿ ಕೊಳ್ಳಬೇಕು.ಸಂಬಂಧಪಟ್ಟವರು ತಕ್ಷಣ ಜನರ ಕಷ್ಟಗಳಿಗೆ ಸ್ಪಂದಿಸಬೇಕಾಗಿದೆ.