ಮಂಗಳೂರು ಮಹಾನಗರ ಪಾಲಿಕೆ ವಸತಿ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿರುವ ಸಾವಿರಾರು ಫಲಾನುಭವಿ ನಿವೇಶನರಹಿತರಿಗೆ ಕೂಡಲೇ ಮನೆ ನಿವೇಶನ ಒದಗಿಸಿಕೊಡಬೇಕೆಂದು ಮಂಗಳೂರು ಮಹಾನಗರ ಪಾಲಿಕೆ ಆಡಳಿತವನ್ನು ಹಾಗೂ ಶಾಸಕ ವೇದವ್ಯಾಸ ಕಾಮತ್ ರನ್ನು CPIM ಮಂಗಳೂರು ನಗರ ದಕ್ಷಿಣ ಸಮಿತಿಯು ಒತ್ತಾಯಿಸುತ್ತದೆ.
ಭೂಮಿಗೆ ವಿಪರೀತ ಬೆಲೆ ಏರಿಸುವ ಮೂಲಕ ಭೂದಂಧೆಯಾಗಿ ಮಾರ್ಪಡಿಸಿರುವ ಮಂಗಳೂರು ನಗರದಲ್ಲಿ ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದ ಜನತೆ ಭೂಮಿ ಖರೀದಿಸಿ ಮನೆ ನಿರ್ಮಿಸುವುದು ಕನಸಿನ ಮಾತಾಗಿದೆ. ನಗರ ಪಾಲಿಕೆ ಅಸ್ತಿತ್ವಕ್ಕೆ ಬಂದ ನಂತರ ಕಳೆದ 40 ವರ್ಷಗಳಲ್ಲಿ ಒಂದೇ ಒಂದು ತುಂಡು ಭೂಮಿಯನ್ನು ನಿವೇಶನ ರಹಿತರಿಗೆ ನೀಡದೆ ಸತಾಯಿಸಿದೆ ಮಾತ್ರವಲ್ಲ ಪ್ರತೀ ವರುಷ ವಸತಿ ಯೋಜನೆಯ ಹೆಸರಲ್ಲಿ ಅರ್ಜಿಗಳನ್ನು ಪಡೆದು ನಿವೇಶನವನ್ನು ನೀಡದೆ ವಂಚಿಸಿದೆ.
ಹೀಗೆ ಪಾಲಿಕೆ ಆಡಳಿತ ನಿವೇಶನ ನೀಡದೆ ವಂಚಿಸಿದ ಬಡ ಹಿಂದುಳಿದ ವರ್ಗದ ಕುಟುಂಬಗಳನ್ನು ಸಿಪಿಐಎಂ ಪಕ್ಷದ ನೇತೃತ್ವದಲ್ಲಿ ಹೋರಾಟ ಸಮಿತಿಗಳನ್ನು ರೂಪಿಸಿ ಕಳೆದ 10 ವರ್ಷಗಳ ಹಿಂದೆ ಸಂಘಟಿಸಿದ ಪ್ರಬಲ ಚಳುವಳಿಯ ಹಿನ್ನೆಲೆಯ ಭಾಗವಾಗಿ ಜಿಲ್ಲಾಡಳಿತ ಹಾಗು ಮನಪಾ ಹಲವಾರು ಕಡೆಗಳಲ್ಲಿ ಕನಿಷ್ಟ ನಿವೇಶಗಳನ್ನು ಗುರುತಿಸಿ G+3 ಮಾದರಿಯಲ್ಲಿ ಮನೆ ನಿರ್ಮಿಸಿ ಕೊಡುವುದಾಗಿ ಆಶ್ವಾಸನೆ ನೀಡಿತ್ತು. ಮಾತ್ರವಲ್ಲದೆ ಶಕ್ತಿನಗರದಲ್ಲಿ ನಿವೇಶನ ಕಾದಿರಿಸಿ ಗುದ್ದಲಿ ಪೂಜೆಯನ್ನೂ ಕೈಗೊಂಡ ಪಾಲಿಕೆ ಆಡಳಿತ ಈವರೆಗೆ ವಸತಿ ಕಾಮಗಾರಿಗಳನ್ನು ಕೈಗೊಳ್ಳದೆ ಬಡವರನ್ನು ವಸತಿ ಯೋಜನೆ ಹೆಸರಲ್ಲಿ ವಂಚಿಸಿದೆ. ಇನ್ನು ಚುನಾವಣೆಯಲ್ಲಿ ಗೆದ್ದ ಬಿಜೆಪಿಯ ಶಾಸಕ ವೇದವ್ಯಾಸ ಕಾಮತ್ ರವರು ಅದೇ ಶಕ್ತಿನಗರದ ಜಾಗ ಅರಣ್ಯ ಇಲಾಖೆಗೆ ಸೇರಿದ್ದು ಅಂತ ತಕರಾರು ಎಬ್ಬಿಸಿ ಅದನ್ನೂ ಇಲ್ಲದ ಹಾಗೆ ಮಾಡಿ ನಿವೇಶನರಹಿತರ ಆಶಾಗೋಪುರವನ್ನೇ ನಾಶ ಮಾಡಿರುತ್ತಾರೆ.
ಬಿಜೆಪಿ ಸರಕಾರದ ಅವಧಿಯ ಕಳೆದ 5 ವರ್ಷಗಳಲ್ಲಿ ನಿವೇಶನರಹಿತರಿಗಾಗಿ ಎಳ್ಳಷ್ಟೂ ಕಾಳಜಿಯಾಗಲಿ ಕನಿಷ್ಟ ನ್ಯಾಯ ಒದಗಿಸಲಾಗದ ಬಿಜೆಪಿ ಸರಕಾರ, ಹಾಗು ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಮತ್ತು ಪಾಲಿಕೆ ಆಡಳಿತ ಬಡಜನ ವಿರೋಧಿಯಾಗಿ ವರ್ತಿಸಿದೆ.
ರಾಜ್ಯ ಸರಕಾರ, ಪಾಲಿಕೆ ಆಡಳಿತ ಹಾಗೂ ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಈ ಬಗ್ಗೆ ಕೂಡಲೇ ಎಚ್ಚೆತ್ತು ನಿವೇಶನ ರಹಿತರಿಗೆ ಮನೆ ನಿವೇಶನ ಒದಗಿಸಿ ಕೊಡುವಲ್ಲಿ ಸೂಕ್ತ ಕ್ರಮಕೈಗೊಳ್ಳಲು ಮುಂದಾಗಬೇಕು, ಇಲ್ಲದಿದ್ದಲ್ಲಿ ನಿವೇಶನ ರಹಿತರ ಪರವಾಗಿ ಪ್ರಬಲ ಚಳುವಳಿಯನ್ನು ರೂಪಿಸಲು CPIM ಮಂಗಳೂರು ನಗರ ದಕ್ಷಿಣ ಸಮಿತಿಯು ನಿರ್ಧರಿಸಿದೆ ಎಂದು ಸಿಪಿಐಎಂ ಪಕ್ಷದ ಕಾರ್ಯದರ್ಶಿ ಸಂತೋಷ್ ಬಜಾಲ್ ರವರು ಅಗ್ರಹಿಸಿದ್ದಾರೆ.