ತಮಗೆ ಉಸಿರು ಕೊಟ್ಟು ರಕ್ಷಿಸಿದ ಆಸ್ಕರ್ ಶಿಂಡ್ಲರ್ ಗೆ ಜೆರಸಲೇಂ ನಲ್ಲಿಯೇ ಸಮಾಧಿ ಕಟ್ಟಿದ ಇಸ್ರೇಲಿಗರು
✍️.ಜೈನುಲ್ ಅಕ್ಬರ್.ಬಿ ಕಡೇಶಿವಾಲಯ
“ಯಾರು ಒಂದು ಜೀವವನ್ನು ರಕ್ಷಿಸುತ್ತಾನೋ ಆತ ಒಂದು ಜಗತ್ತನ್ನೇ ರಕ್ಷಿಸಿದಂತೆ” ಎಂಬ ಯಹೂದಿ ಧರ್ಮದ ಸೂಕ್ತವೊಂದನ್ನು ಭಾವುಕರಾಗಿ ಪಟಿಸುತ್ತಾ ಫ್ಯಾಕ್ಟರಿಯ ನೌಕರರು ತಮ್ಮ ಮಾಲಕನಿಗೆ ಉಂಗುರವೊಂದನ್ನು ಕಾಣಿಕೆಯಾಗಿ ನೀಡುತ್ತಾರೆ.ಮಾಲಕನ ಕಣ್ಣಾಲಿಗಳು ತುಂಬಿ ಬಿಡುತ್ತವೆ. “ಇಲ್ಲ ..ನಾ ತಪ್ಪು ಮಾಡಿಬಿಟ್ಟೆ,ನನಗೆ ಇನ್ನೂ ಜಾಸ್ತಿ ಹಣ ಮಾಡಬಹುದಿತ್ತು. ಆ ಹಣದಿಂದ ಇನ್ನೂ ಒಂದಿಷ್ಟು ಜೀವಗಳನ್ನು ಉಳಿಸಬಹುದಿತ್ತು.ನನ್ನ ಈ ಕಾರಿನ ಬದಲು ಹತ್ತು ಜನರನ್ನು ಕಾಪಾಡಬಹುದಿತ್ತು. ನನ್ನ ಕೈಯಲ್ಲಿರುವ ಬಂಗಾರದ ಉಂಗುರವನ್ನು ಕೊಟ್ಟಿದ್ದರೆ ಇಬ್ಬರನ್ನು..ಕನಿಷ್ಟ ಒಬ್ಬರನ್ನು ಬದುಕಿಸಬಹುದಿತ್ತು. ಅಯ್ಯೋ ..ನನ್ನಿಂದ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ..”ಅನ್ನುತ್ತಾ ಬಿಕ್ಕಿ ಬಿಕ್ಕಿ ಅಳುತ್ತಾನೆ.ಇಲ್ಲ ನಿಮ್ಮಿಂದಾಗಿ ನಾವಿಷ್ಟು ಜನ ಇವತ್ತು ಉಸಿರಾಡುತ್ತಿದ್ದೇವೆ.ಇದು ಸಣ್ಣ ಸಾಧನೆಯಲ್ಲ ಎಂದು ತನ್ನ ಕಾರ್ಯದರ್ಶಿ ಸಮಾಧಾನ ಪಡಿಸುತ್ತಾನೆ.ಆತನ ಮನಸ್ಸು ಒಪ್ಪುವುದಿಲ್ಲ.ಆತ ಅಳುತ್ತಲೇ ಇರುತ್ತಾನೆ. ಆ ಫ್ಯಾಕ್ಟರಿಯ ಮಾಲಕ ಜರ್ಮನಿಯ ಉದ್ಯಮಿ ಆಸ್ಕರ್ ಶಿಂಡ್ಲರ್.ಈತ ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಕ್ರೌರ್ಯ ಮೆರೆದ ಹಿಟ್ಲರ್ ಸ್ಥಾಪಿಸಿದ ‘ನಾಝಿ’ ಪಕ್ಷದ ಸದಸ್ಯ ಎಂಬುದು ಒಂದು ಅಚ್ಚರಿ! !
ಶಿಂಡ್ಲರ್ ಹುಟ್ಟಿದ್ದು ಎಪ್ರಿಲ್ 28 1908,ಬೆಳೆದದ್ದು ಮೊರಾವಿಯಾದ ಝ್ವಿಟ್ಟಾವೊದಲ್ಲಿ.ಬೆಳೆಯುತ್ತಲೇ ಒಂದಿಷ್ಟು ಉದ್ದಿಮೆಗಳಲ್ಲಿ ಕೈಯಾಡಿಸಿದ.ಆದರೆ ಶಿಂಡ್ಲರ್ ಗೆ ಯಾವುದರಲ್ಲೂ ಅದೃಷ್ಟ ಕುಲಾಯಿಸಲಿಲ್ಲ. 1936ರಲ್ಲಿ ಜರ್ಮನಿಯ ನಾಝಿ ಪಕ್ಷದ ಗುಪ್ತಚರ ವಿಭಾಗದಲ್ಲಿ ಕೆಲಸಕ್ಕೆ ಸೇರಿಕೊಂಡ. ಜರ್ಮನ್ ಸರಕಾರಕ್ಕೆ ರಹಸ್ಯ ಮಾಹಿತಿ ಪಡೆಯಲು ನೆರವು ನೀಡಿದ.ಹೀಗೆ ಕಾರ್ಯ ನಿರ್ವಹಿಸುತ್ತಲೇ ಝೆಕ್ ಸರಕಾರದಿಂದ ಬಂಧನಕ್ಕೊಳಗಾದ ಶಿಂಡ್ಲರ್ ,ಮುನಿಶ್ ಒಪ್ಪಂದದಿಂದಾಗಿ ಬಿಡುಗಡೆಗೊಂಡ. ಒಂದನೇ ಜಾಗತಿಕ ಯುದ್ಧದಲ್ಲಿ ನಡೆದ ಸಾವು ನೋವುಗಳು ಜರ್ಮನಿಯನ್ನು ನಿದ್ದೆಗೆಡಿಸಿತ್ತು .ಹೇಗಾದರೂ ಮುಂದೆ ಯುದ್ದ ನಡೆಯುವ ಮುನ್ನ ಪೋಲಾಂಡ್ ತನ್ನ ಕೈವಶ ಮಾಡಬೇಕೆಂದು ಜರ್ಮನ್ ನಿರ್ಧರಿಸಿತು.ಇದೇ ಕಾರಣಕ್ಕೆ ಶಿಂಡ್ಲರ್ ಮುಂದೆ ಪೋಲಂಡ್ನಲ್ಲಿ ಇದ್ದುಕೊಂಡೇ ಶತ್ರುಗಳ ಚಲನವಲನಗಳನ್ನು ನಾಝಿಗಳಿಗೆ ರವಾನಿಸಲು ಪ್ರಾರಂಭಿಸಿದ.ಎರಡನೇ ಮಹಾಯುದ್ಧ ಪ್ರಾರಂಭವಾಗುತ್ತಲೇ ಪೋಲಾಂಡ್ ಜರ್ಮನಿಗೆ ಶರಣಾಯಿತು.
ಇದೇ ಸಂದರ್ಭದಲ್ಲಿ ಕ್ರಾಕೋ ಎಂಬಲ್ಲಿ ಅಡುಗೆ ಪಾತ್ರೆಗಳನ್ನು ತಯಾರಿಸುವ ಕಾರ್ಖಾನೆಯೊಂದು ಶಿಂಡ್ಲರ್ ಅಧೀನಕ್ಕೆ ಬಂತು. ಇದಕ್ಕೆ1750 ಕಾರ್ಮಿಕರ ಅವಶ್ಯಕತೆ ಇತ್ತು.ಶಿಂಡ್ಲರ್ ಇದರಲ್ಲಿ 1000 ಮಂದಿ ಯಹೂದಿಗಳನ್ನೇ ನೇಮಿಸಿದ. ಯಾರೆಲ್ಲಾ ಕೆಲಸ ಮಾಡಲು ಅನರ್ಹರೋ ಅವರನ್ನೆಲ್ಲಾ ಹಿಟ್ಲರ್ ಅನಿಲ ಕೊಳವೆಗೆ ಕಳುಹಿಸಿ ಕೊಲ್ಲುವಂತೆ ಆದೇಶ ನೀಡಿದ.ಪೋಲಾಂಡ್ ಯಹೂದಿಯರ ಪಾಲಿಗೆ ಸಾವಿನ ಮನೆಯಾಯಿತು.ಸಿಕ್ಕ ಸಿಕ್ಕವರನ್ನು ಯಹೂದಿ ಎಂಬ ಒಂದೇ ಕಾರಣಕ್ಕೆ ಕಂಡಲ್ಲಿ ಗುಂಡಿಟ್ಟು ಕೊಲ್ಲುವ,ಅನಿಲ ಕೊಳವೆಗೆ ರವಾನಿಸಿ ಉಸಿರುಗಟ್ಟಿಸಿ ಸಾಯಿಸುವ ಪ್ರಕ್ರಿಯೆ ಎಗ್ಗಿಲ್ಲದೆ ನಡೆಯಿತು. ಗಂಡು-ಹೆಣ್ಣೆಂಬ ಭೇದವಿಲ್ಲದೆ ಎಲ್ಲರನ್ನೂ ಬೆತ್ತಲೆಯಾಗಿ ನಿಲ್ಲಿಸಿ ಪರೀಕ್ಷಿಸಿ ದೈಹಿಕವಾಗಿ ಸಮರ್ಥರಾದವರಿಗೆ ಜರ್ಮನ್ನರ ಗುಲಾಮರಾಗಿ ಕೆಲಸ ಮಾಡಲು ಅವಕಾಶ ನೀಡಿ,ವೃದ್ಧರನ್ನು ,ಅಶಕ್ತರನ್ನೂ ನಿರ್ದಯವಾಗಿ ಕೊಲ್ಲಲಾಯಿತು.
ಈ ಮರಣ ಮೃದಂಗ ಶಿಂಡ್ಲರನ್ನು ಅತಿಯಾಗಿ ಕಾಡತೊಡಗಿತು.ತನ್ನ ಕಣ್ಣ ಮುಂದೆ ಮಕ್ಕಳನ್ನೂ, ಮಹಿಳೆರನ್ನೂ, ವೃದ್ಧರನ್ನೂ ಅಮಾನುಷವಾಗಿ ಹತ್ಯೆಗೈಯುವಾಗ ಅದನ್ನು ತಡೆಯಲು ಆತನ ಬಳಿ ಯಾವುದೇ ಮಾರ್ಗವಿರಲಿಲ್ಲ. ಆತನಿಗೆ ಉಳಿದದ್ದು ಒಂದೇ ಅವಕಾಶ. ಸಾಧ್ಯವಾದಷ್ಟು ಯಹೂದಿಯರನ್ನು ತನ್ನ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳುವುದು.ಅದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ.ಜರ್ಮನಿಯ SS ಅಧಿಕಾರಿಗಳು ಎಲ್ಲಾ ಫ್ಯಾಕ್ಟರಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸುತ್ತಿದ್ದರು. ಕೌಶಲ್ಯವಿಲ್ಲದ ಯಹೂದಿಯರನ್ನು ಕಂಡರೆ ಅಲ್ಲೇ ಗುಂಡಿಟ್ಟು ಸಾಯಿಸುತ್ತಿದ್ದರು.ಫ್ಯಾಕ್ಟರಿಯ ಮಾಲಕನೂ ಸಾಕಷ್ಟು ಪ್ರಶ್ನೆಗಳಿಗೆ ಉತ್ತರಿಸಬೇಕಾಗಿತ್ತು. ಶಿಂಡ್ಲರ್ ಇದನ್ನೆಲ್ಲಾ ಬಹಳ ಸಮರ್ಥವಾಗಿ ಎದುರಿಸಿದ.ಇದಕ್ಕಾಗಿ ಆತ SS ಅಧಿಕಾರಿಗಳಿಗೆ ಲಂಚದ ರೂಪದಲ್ಲಿ ಬಹಳಷ್ಟು ಹಣವನ್ನು, ಬೆಲೆಬಾಳುವ ಉಡುಗೊರೆಗಳನ್ನು ನೀಡಬೇಕಾಗಿ ಬಂತು.
1944 ಜುಲೈ ತಿಂಗಳಿನಲ್ಲಿ ಜರ್ಮನ್ ಎರಡನೆಯ ಮಹಾಯುದ್ಧದಲ್ಲಿ ಸೋಲಿನ ಕಡೆ ಸಾಗುತ್ತಿರುವುದು ಸ್ಪಷ್ಟವಾಯಿತು.ಜರ್ಮನಿಯು ಪೂರ್ವ ದಿಕ್ಕಿನಲ್ಲಿದ್ದ ಯಾತನಾ ಶಿಬಿರಗಳನ್ನು ಮುಚ್ಚತೊಡಗಿತು.ಅಲ್ಲಿದ್ದ ಯಹೂದಿಯರನ್ನು ಪಶ್ಚಿಮದ ಕಡೆ ರವಾನಿಸಲು ಪ್ರಾರಂಭಿಸಿತು.ಇಲ್ಲಿದ್ದರೆ ತನ್ನ ಫ್ಯಾಕ್ಟರಿಯ ಕಾರ್ಮಿಕರ ಜೀವಕ್ಕೆ ಅಪಾಯ ಇದೆ ಎಂದು ಅರಿತ ಶಿಂಡ್ಲರ್ ತನ್ನ ಫ್ಯಾಕ್ಟರಿಯನ್ನು ಸುಡೆಟೆನ್ ಲ್ಯಾಂಡ್ ನ ಬ್ರುನಿಲಿಟ್ಸ್ ಕಡೆಗೆ ವರ್ಗಾಯಿಸಲು SS ಅಧಿಕಾರಿಗಳನ್ನು ಕೋರಿದ.ರಕ್ಷಿಸಬೇಕಾದ ತನ್ನ ಯಹೂದಿ ಕಾರ್ಮಿಕರ ಹೆಸರನ್ನು ಪಟ್ಟಿ ಮಾಡಿಸಿ ಅವರನ್ನು ಬ್ರುನಿಲಿಟ್ಸ್ ಗೆ ಕಳುಹಿಸಿಕೊಟ್ಟ.1945 ಮೇ ತಿಂಗಳು ಎರಡನೇ ಮಹಾಯುದ್ಧ ನಿಲ್ಲುವವರೆಗೂ ಶಿಂಡ್ಲರ್ ತನ್ನ ಯಹೂದಿ ಕಾರ್ಮಿಕರ ರಕ್ಷಣೆಗಾಗಿ SS ಅಧಿಕಾರಿಗಳಿಗೆ ಲಂಚ ಕೊಡುತ್ತಲೇ ಇದ್ದ.ಅಷ್ಟೊತ್ತಿಗೆ ಶಿಂಡ್ಲರ್ ತನ್ನೆಲ್ಲಾ ಸಂಪತ್ತನ್ನೂ,ಕಾಳ ಮಾರುಕಟ್ಟೆಯಲ್ಲಿ ಖರೀದಿಸಿದ ವಸ್ತುಗಳನ್ನೂ ಕಳೆದುಕೊಂಡು ದಿವಾಳಿಯಾಗಿ ಬಿಟ್ಟ. ಯಹೂದಿಯರನ್ನು ಸಾಮೂಹಿಕ ನರಮೇಧದಿಂದ ರಕ್ಷಿಸಬೇಕೆಂಬ ಹಠ ಆತನ ಬದುಕನ್ನೇ ನುಂಗಿ ಹಾಕಿತು.ಆದರೆ ಇದ್ಯಾವುದನ್ನೂ ಪರಿಗಣಿಸದ ಆತ ಯಹೂದಿಗಳನ್ನು ಸಾವಿನ ದವಡೆಯಿಂದ ತಪ್ಪಿಸಲು ಸಾಕಷ್ಟು ಶ್ರಮಪಟ್ಟ. ಹೀಗೆ ತನ್ನ ಸಾವನ್ನು ಹೆಗಲ ಮೇಲೆ ಹೊತ್ತುಕೊಂಡು ,ತನ್ನ ಸಂಪತ್ತನ್ನೆಲ್ಲಾ ಕಳೆದುಕೊಂಡು ಶಿಂಡ್ಲರ್ ಬರೋಬ್ಬರಿ 1200 ಯಹೂದಿಗಳನ್ನು ಕಾಪಾಡಿದ!
ಹಿಟ್ಲರ್ 60ಲಕ್ಷ ಯಹೂದಿಯರ ಮಾರಣ ಹೋಮ ನಡೆಸಿದ ಪೈಶಾಚಿಕತೆಯ ಮುಂದೆ ಶಿಂಡ್ಲರ್ ನ ಮಾನವೀಯತೆ ಗೌಣವಾಯಿತು.ತನ್ನಿಂದ ಇನ್ನಷ್ಟು ಜೀವ ಉಳಿಸಲಾಗಲಿಲ್ಲ ಎಂದು ಕೊರಗುತ್ತಾ ಶಿಂಡ್ಲರ್ ಪಶ್ಚಿಮ ಜರ್ಮನಿಯ ಕಡೆ ಹೊರಟುಹೋದ !! ಹೀಗೆ ಶಿಂಡ್ಲರ್ ಕಾಪಾಡಿದ 1200 ಪೋಲಿಶ್ ಯಹೂದಿಗಳನ್ನು ಇತಿಹಾಸ ಮುಂದೆ ಶಿಂಡ್ಲರ್ ಯಹೂದಿಗಳು(Schindler’s Jews) ಎಂದು ಗುರುತಿಸಿತು.
ಯುರೋಪಿನಿಂದ ಜೀವರಕ್ಷಣೆಗಾಗಿ ಪಲಾಯನಗೈದ ಯಹೂದಿಗಳು ಅಮೆರಿಕ,ಭಾರತ,ಪ್ಯಾಲೆಸ್ತೀನ್ ರಾಷ್ಟದಲ್ಲಿ ಆಶ್ರಯ ಪಡೆದರು.ಯಹೂದಿಗಳ ಬೆಂಬಲ ಗಳಿಸಲು ಮಿತ್ರರಾಷ್ಟ್ರಗಳು ಪ್ಯಾಲೆಸ್ತೀನ್ ನಲ್ಲಿ ಯಹೂದಿಗಳಿಗಾಗಿ ದೇಶವೊಂದನ್ನು ನಿರ್ಮಿಸಿ ಕೊಡುವುದಾಗಿ ವಾಗ್ದಾನ ಕೊಟ್ಟಿತು.ಜೆರುಸಲೇಂ ಮುಸ್ಲಿಮರಂತೆ ಯಹೂದಿಗಳೂ ಪವಿತ್ರ ಸ್ಥಳ ,ಆದ್ದರಿಂದ ಇಲ್ಲೇ ಯಹೂದಿ ರಾಷ್ಟ್ರ ನಿರ್ಮಿಸುವ ಜವಾಬ್ದಾರಿಯನ್ನು 1922 ರಲ್ಲಿ ಇಂಗ್ಲೆಂಡ್ ಒಪ್ಪಿಕೊಂಡಿತು.ಹೀಗೆ ಭಿನ್ನ ರಾಷ್ಟ್ರಗಳಲ್ಲಿದ್ದ ಯಹೂದಿಯರು ಪ್ಯಾಲೆಸ್ತೇನ್ ಕಡೆ ವಲಸೆ ಬರಲು ಆರಂಭಿಸಿದರು. 1948ರ ಮೇ 14ರಂದು ಇಸ್ರೇಲ್ ರಾಷ್ಟ್ರದ ಉದಯವನ್ನು ವಿಶ್ವಸಂಸ್ಥೆ ಅಂಗೀಕರಿಸಿತು. ಮೊದ ಮೊದಲು ಆಶ್ರಯ ಕೋರಿ ಬಂದ ಯಹೂದಿಯರನ್ನು ಅಲ್ಲಿನ ಅರಬ್ಬರು ಆತ್ಮೀಯವಾಗಿ ಬರಮಾಡಿಕೊಂಡರು.ಅವರ ನೋವು ನಲಿವುಗಳಿಗೆ ಸ್ಪಂದಿಸಿದರು.ನಿರಾಶ್ರಿತರಾಗಿ ಬಂದ ಯಹೂದಿಯರಿಗೆ ಸೂರು ನಿರ್ಮಿಸಲು ಸಹಕಾರ ನೀಡಿದರು.ಆದರೆ ದಿನಕಳೆದಂತೆ ಇಸ್ರೇಲ್ ತನ್ನ ಭೂದಾಹಿ ಧೋರಣೆಯನ್ನು ಹಂತ ಹಂತವಾಗಿ ಪ್ರಕಟಿಸಲು ಆರಂಭಿಸಿತು.
ತನ್ನ ಸುತ್ತಲಿನ ಈಜಿಪ್ಟ್, ಜೋರ್ಡಾನ್, ಸಿರಿಯಾ,ಲೆಬನಾನ್ ಮಾತುಗಳನ್ನು ನಿರ್ಲಕ್ಷಿಸಿ ಪ್ಯಾಲೆಸ್ತಿನ್ ಭೂಭಾಗಗಳನ್ನು ಆಕ್ರಮಿಸುತ್ತಾ ಸಾಗಿತು.ಅಮೆರಿಕ,ಇಂಗ್ಲಂಡ್ ಮಿತ್ರರಾಷ್ಟ್ರಗಳು ಯಹೂದಿಯರಿಗೆ ಆರ್ಥಿಕ, ಮಿಲಿಟರಿ ಹಸ್ತ ಚಾಚಿತು.ವಿಪರ್ಯಾಸವೆಂದರೆ ಯಾವ ರಾಷ್ಟ್ರ ಯಹೂದಿಗಳಿಗೆ ಆಶ್ರಯ ನೀಡಿತೋ ಅದೇ ರಾಷ್ಟ್ರವನ್ನು ಇಂಚಿಂಚಾಗಿ ಕಬಳಿಸಿದ ಇಸ್ರೇಲ್ ಪ್ಯಾಲೇಸ್ತಿಯನ್ನರ ಬದುಕನ್ನೇ ನರಕವನ್ನಾಗಿಸಿತು.
1920 ರಿಂದ ಪ್ರಾರಂಭವಾದ ಇಸ್ರೇಲ್ -ಪ್ಯಾಲೇಸ್ತೀನ್ ಯುದ್ಧದಲ್ಲಿ ಹತರಾದ,ಗಾಯಗೊಂಡ ಪೆಲೇಸ್ತೀಯನ್ನರು ಅಸಂಖ್ಯ.ಇದರಲ್ಲಿ ಅತೀ ಹೆಚ್ಚು ಸಾವು-ನೋವು ಅನುಭವಿಸಿದ್ದು ಪೆಲೇಸ್ತೀಯನ್ ನಾಗರಿಕರು ಎಂಬುದು ಇಸ್ರೇಲ್ ನ ಕ್ರೌರ್ಯಕ್ಕೆ ಹಿಡಿದ ಕನ್ನಡಿ. 1948ರಲ್ಲಿ ನಡೆದ ಅರಬ್ -ಇಸ್ರೇಲ್ ಯುದ್ಧದಲ್ಲಿ ಸುಮಾರು 13000 ಪ್ಯಾಲೆಸ್ತಿಯನ್ನರು ನಾಪತ್ತೆಯಾದರು.1949ರಿಂದ 1967ರ ನಡುವೆ ನಡೆದ ಫೆಡಯೀನ್ ಯುದ್ಧದಲ್ಲಿ 5000ಮಂದಿ ಸಾವನ್ನಪ್ಪಿದರು.1970 ರ ಜೋರ್ಡಾನ್ ಕದನದಲ್ಲಿ 3400 ಮಂದಿ ಹತರಾದರು.1982ರ ಲೆಬನಾನ್ ಯುದ್ಧವು 20ಸಾವಿರದಷ್ಟು ಜನರನ್ನು ಬಲಿ ಪಡೆಯಿತು.ಮೊದಲನೇ ಇನ್ತಿಫಾದದಲ್ಲಿ 1551 ಜನರು ಅಸುನೀಗಿದರೆ ಎರಡನೇ ಇನ್ತಿಫಾದದಲ್ಲಿ ಇಸ್ರೇಲ್ ಸೇನೆಯೇ 6875 ಪ್ಯಾಲೆಸ್ತೀಯರನ್ನು ಕೊಂದು ಹಾಕಿತು.2008ರ ಗಾಝಾ ಕಲಹದಲ್ಲಿ 1417 ಮಂದಿ ಜೀವ ಕಳೆದುಕೊಂಡರು.1948 ರಿಂದ ಇದುವರೆಗೆ ಕನಿಷ್ಟ 80 ಸಾವಿರಕ್ಕಿಂತಲೂ ಅಧಿಕ ಪ್ಯಾಲೆಸ್ತಿಯನ್ನರು ಇಸ್ರೇಲ್ ನಾಗರಿಕರರ ಮತ್ತು ಸೈನಿಕರ ದಾಳಿಗೆ ಬಲಿಯಾಗಿದ್ದಾರೆ.
ಇಸ್ರೇಲ್ ಸೇನೆಯು ಮಕ್ಕಳನ್ನು ಮತ್ತು ಯುವಕರನ್ನೇ ಗುರಿಯಾಗಿಸಿ ದಾಳಿ ನಡೆಸುತ್ತಿರುವುದು ಮತ್ತೊಂದು ಆತಂಕಕಾರಿ ವಿಚಾರ.ವಿಶ್ವ ಮಾನವ ಹಕ್ಕುಗಳ ಕಾರ್ಯಕರ್ತರನ್ನು ಸತಾಯಿಸುವ,ತುರ್ತು ಪರಿಸ್ಥಿತಿಯಲ್ಲಿ ಆರೋಗ್ಯ ಸಿಬ್ಬಂದಿಗಳನ್ನು ಕಣ್ಣಿಗೆ ಖಾರದ ಪುಡಿ ಹಾಕಿ ಗಾಯಗೊಂಡ ಪ್ಯಾಲೇಸ್ತೀಯರನ್ನು ಶುಶ್ರೂಷೆ ಮಾಡದಂತೆ ತಡೆಯುವುದು ಇಸ್ರೇಲ್ ಗೆ ವಾಡಿಕೆಯಾಗಿ ಬಿಟ್ಟಿದೆ.ಶಾಲೆ,ಆಸ್ಪತ್ರೆ,ಮನೆ ಯಾವುದನ್ನೂ ಬಿಡದೆ ಬಾಂಬುಗಳನ್ನು ಸುರಿಯುವ ಇಸ್ರೇಲ್ ಕಳೆದ ವರ್ಷ ರಂಝಾನ್ ಪವಿತ್ರ ತಿಂಗಳಲ್ಲಿಯೂ ಕರುಣೆ ತೋರದೆ ಪ್ಯಾಲೆಸ್ತೀಯನ್ನರ ಮಾರಣ ಹೋಮ ನಡೆಸಿತು.1948ರ ಇಸ್ರೇಲ್ ಭೂಪಟಕ್ಕೂ ಇಂದಿನ ಭೂಪಟಕ್ಕೂ ಇರುವ ಅಜಗಜಾಂತರ ವ್ಯತ್ಯಾಸವೇ ಇಸ್ರೇಲ್,ಪ್ಯಾಲೇಸ್ತೀನ್ ಭೂಭಾಗವನ್ನು ಅತಿಕ್ರಮಣ ಮಾಡಿದ್ದನ್ನು ಪ್ರತಿಬಿಂಬಿಸುತ್ತದೆ.
ತಮ್ಮ ಆಶ್ರಯಿಸಿ ಬಂದವರಿಗೆ ಸೂರು ಕೊಟ್ಟವರನ್ನು ಇಸ್ರೇಲ್ ನ ಯಹೂದಿಯರು ಕೊಂದು ಹಾಕಿದರು.ಆದರೆ ತಮಗೆ ಉಸಿರು ಕೊಟ್ಟು ರಕ್ಷಿಸಿದ ಶಿಂಡ್ಲರ್ ಗೆ ಜೆರಸಲೇಂ ನಲ್ಲಿಯೇ ಸಮಾಧಿ ಕಟ್ಟಿದ ಇಸ್ರೇಲಿಗರು ಅದರ ಹತ್ತಿರವೇ ನಿಂತು ಪ್ಯಾಲೆಸ್ತೀಯನ್ನರ ಮೇಲೆ ಬಾಂಬು ಹಾಕುವಾಗ ಶಿಂಡ್ಲರ್ ನ ಮಾನವೀಯತೆಯನ್ನು ಮರೆತು ಬಿಟ್ಟರಲ್ಲಾ.?