ಗ್ರಾಮ ಪಂಚಾಯತ್ ಸದಸ್ಯರ ಆಸ್ತಿ ವಿವರ ಸಲ್ಲಿಕೆ ಕುರಿತಂತೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಮೂರು ತಿಂಗಳ ಒಳಗಾಗಿ ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯವೆಂದು ತಿಳಿಸಲಾಗಿದ್ದು, ಒಂದೊಮ್ಮೆ ಇದಕ್ಕೆ ವಿಫಲವಾದರೆ ಶೋಕಾಸ್ ನೋಟಿಸ್ ನೀಡದೆಯೂ ಸದಸ್ಯತ್ವದಿಂದ ಅನರ್ಹಗೊಳಿಸಬಹುದು ಎಂದು ಅಭಿಪ್ರಾಯ ಪಟ್ಟಿದೆ.
ನಿಗದಿತ ಅವಧಿ ಒಳಗೆ ಆಸ್ತಿ ವಿವರ ಸಲ್ಲಿಸದ ಕಾರಣಕ್ಕೆ ಕಲಬುರಗಿ ಜಿಲ್ಲೆ ಅಳಂದ ತಾಲೂಕಿನ ಮೊಘಾ ಗ್ರಾಮ ಪಂಚಾಯಿತಿ ಸದಸ್ಯೆ ಲಲಿತಾಬಾಯಿ ಪಾಟೀಲ್ ಅವರನ್ನು ರಾಜ್ಯ ಚುನಾವಣಾ ಆಯೋಗ ಸದಸ್ಯತ್ವದಿಂದ ಅನರ್ಹಗೊಳಿಸಿದ್ದು ಇದನ್ನು ಪ್ರಶ್ನಿಸಿ ಲಲಿತಾ ಬಾಯಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಸದಸ್ಯತ್ವ ಅನರ್ಹಗೊಳಿಸುವ ಮುನ್ನ ಲಲಿತಾ ಬಾಯಿ ಅವರಿಗೆ ಚುನಾವಣಾ ಆಯೋಗದಿಂದ ಶೋಕಾಸ್ ನೋಟಿಸ್ ಸಹ ನೀಡಲಾಗಿತ್ತು. ತಮ್ಮ ಸದಸ್ಯತ್ವ ಅನರ್ಹತೆ ಕುರಿತು ಹೈಕೋರ್ಟ್ ಮೆಟ್ಟಿಲೇರಿದ್ದ ಲಲಿತಾ ಬಾಯಿ ಅವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಆಸ್ತಿ ವಿವರ ಸಲ್ಲಿಸಬೇಕಾದದ್ದು ಗ್ರಾಮ ಪಂಚಾಯತಿ ಸದಸ್ಯರ ಸಾಂವಿಧಾನಿಕ ಕರ್ತವ್ಯ. ಒಂದು ವೇಳೆ ತಡವಾಗಿ ಆಸ್ತಿ ವಿವರ ಸಲ್ಲಿಸಿದ್ದರೆ ಅಥವಾ ಸಲ್ಲಿಸಿದ ವಿವರಗಳು ಸುಳ್ಳಾಗಿದ್ದ ಸಂದರ್ಭದಲ್ಲಿ ಶೋಕಾಸ್ ನೋಟಿಸ್ ನೀಡಬೇಕಾಗುತ್ತದೆ. ಆದರೆ ಸದಸ್ಯರಾದ ಮೂರು ತಿಂಗಳ ಬಳಿಕವೂ ಆಸ್ತಿ ವಿವರ ಸಲ್ಲಿಸದೆ ಇದ್ದರೆ ಅವರಿಗೆ ಶೋಕಾಸ್ ನೋಟಿಸ್ ನೀಡದೆಯೂ ಅನರ್ಹಗೊಳಿಸಬಹುದು ಎಂದು ಅಭಿಪ್ರಾಯ ಪಟ್ಟಿದೆಯಲ್ಲದೆ ಈ ಪ್ರಕರಣದಲ್ಲಿ ರಾಜ್ಯ ಚುನಾವಣಾ ಆಯೋಗದ ಕ್ರಮ ಸರಿ ಇದೆ ಎಂದು ಹೇಳಿದೆ.